• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಬ್ಬನ್ ಕಟ್ ಮಾಡೋಕೆ ಬಂದ ಕೋಡಿಹಳ್ಳಿ ಸಾರಿಗೆ ನೌಕರರ ನಾಯಕನಾದ ರೋಚಕ ಸ್ಟೋರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಸಾರಿಗೆ ನೌಕರರ ಹೋರಾಟಕ್ಕೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ಗೂ ಏನು ಸಂಬಂಧ ಅನ್ನೋ ಪ್ರಶ್ನೆಗೆ ರಾಜ್ಯ ಸರ್ಕಾರವೇ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕೇವಲ ರೈತ ಹೋರಾಟಕ್ಕೆ ಸೀಮಿತವಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಿ ಸಾರಿಗೆ ನೌಕರರ ಸಂಘಕ್ಕೆ ಎಂಟ್ರಿ ಕೊಟ್ಟಿರುವ ಹಿಂದೆ "ರಿಬ್ಬನ್ ಕಟ್ಟಿಂಗ್" ಸಂಬಂಧವಿದೆ.

ಈ ರಿಬ್ಬನ್ ಕಟ್ಟಿಂಗ್ ಅವಕಾಶವೇ ಇವತ್ತು ಸಾರಿಗೆ ನೌಕರರ ನಾಯಕ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಿಷ್ಕಲ್ಮಶ ಹೋರಾಟ ನಡೆಸುತ್ತಿದ್ದ ಸಾರಿಗೆ ನೌಕರರ ಹೋರಾಟದ ಬಗ್ಗೆ ಇದೀಗ ಸಾರ್ವಜನಿಕವಾಗಿ ಅಪಸ್ವರ ಮೂಡಲು ಕೋಡಿಹಳ್ಳಿ ಚಂದ್ರಶೇಖರ್ ಎಂಟ್ರಿಯೇ ಕಾರಣವಾಯಿತೇ ಎಂಬುದರ ಕುರಿತ ಇನ್‌ ಸೈಡ್ ಸ್ಟೋರಿ ಇಲ್ಲಿದೆ.

ಎರಡು ಬಣದಲ್ಲಿ ಗುರುತಿಸಿಕೊಂಡಿದ್ದ ನೌಕರರು: ಅದು ಡಿಸೆಂಬರ್ ಮಾಹೆ. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಮಹತ್ವದ ಬೇಡಿಕೆ ಮುಂದಿಟ್ಟುಕೊಂಡು ಸಾರಿಗೆ ನೌಕರರು ಹೋರಾಟಕ್ಕೆ ಅಣಿಯಾಗುತ್ತಿದ್ದರು.

ಅದರಲ್ಲೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಹಾಲಿ ಅಧ್ಯಕ್ಷ ಚಂದ್ರು ಸಾಮಾಜಿಕ ಜಾಲ ತಾಣದಲ್ಲಿ ಧ್ವನಿಯೆತ್ತುವ ಮೂಲಕವೇ ನೌಕರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅಗ್ರ ಸ್ಥಾನದಲ್ಲಿ ನಿಂತಿದ್ದರು. ಅವರ ಹೃದಯದ ಮಾತುಗಳಿಗೆ ಸಾಕಷ್ಟು ನೌಕರರು ಬೆಂಬಲ ವ್ಯಕ್ತಪಡಿಸಿದ್ದರು.

 ಚಂದ್ರು ಒಕ್ಕೂಟವನ್ನು ಕೂಡ ರಚನೆ ಮಾಡಿರಲಿಲ್ಲ

ಚಂದ್ರು ಒಕ್ಕೂಟವನ್ನು ಕೂಡ ರಚನೆ ಮಾಡಿರಲಿಲ್ಲ

ಅವತ್ತಿಗೆ ಚಂದ್ರು ಒಕ್ಕೂಟವನ್ನು ಕೂಡ ರಚನೆ ಮಾಡಿರಲಿಲ್ಲ. ಇನ್ನೂ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಹೋರಾಟದ ಮುಂದಾಳತ್ವ ವಹಿಸುತ್ತಿದ್ದ ಅನಂತ ಸುಬ್ಬರಾವ್ ಮತ್ತು ಚಂದ್ರು ನಡುವೆ ಭಿನ್ನಾಭಿಪ್ರಾಯಗಳು ಕೇಳಿ ಬಂದಿದ್ದವು. ಸಾರಿಗೆ ನೌಕರರು ಎರಡು ಬಣದಂತೆ ಗುರುತಿಸಿಕೊಂಡಿದ್ದರು.

ತೆಲಂಗಾಣದಲ್ಲಿ ಸಾರಿಗೆ ನೌಕರರ ಹೋರಾಟದ ಶೈಲಿ ರಾಜ್ಯ ಸಾರಿಗೆ ನೌಕರರನ್ನು ಪದೇ ಪದೇ ಬಡಿದೆಬ್ಬಿಸುತ್ತಿತ್ತು. ವೇತನ ಪರಿಷ್ಕರಣೆ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಮಹತ್ವದ ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಇಳಿಯಲು ನೌಕರರು ಉತ್ಸುಕತೆ ತೋರಿದ್ದರು.

ಸಾರಿಗೆ ನೌಕರರನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ಚಂದ್ರು ಮುಂದಾಳತ್ವ ವಹಿಸಿದ್ದರು. ನೌಕರರ ಅಭೂತಪೂರ್ವ ಬೆಂಬಲ ಕೂಡ ವ್ಯಕ್ತವಾಗಿತ್ತು. ಈ ಬೆಳವಣಿಗೆ ಹಂತದವರೆಗೂ ಕೋಡಿಹಳ್ಳಿ ಚಂದ್ರ ಶೇಖರ್‌ಗೂ ಸಾರಿಗೆ ನೌಕರರ ಮುಷ್ಕರಕ್ಕೂ ಏನೂ ಸಂಬಂಧ ಬೆಸೆದಿರಲಿಲ್ಲ.
ರಿಬ್ಬನ್ ಕಟ್ಟಿಂಗ್‌ನಿಂದ ಲೀಡರ್‌ವರೆಗೆ

ರಿಬ್ಬನ್ ಕಟ್ಟಿಂಗ್‌ನಿಂದ ಲೀಡರ್‌ವರೆಗೆ

ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಬಹುದೊಡ್ಡ ಹೋರಾಟ ನಡೆಸುತ್ತಿದ್ದರು. ಅಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರೈತರು ಟ್ರ್ಯಾಕ್ಟರ್ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಅದರ ಭಾಗವಾಗಿ ರಾಜ್ಯದಲ್ಲಿ ಕೂಡ ಕೋಡಿಹಳ್ಳಿ ಚಂದ್ರಶೇಖರ್ ರೈತರ ಟ್ರ್ಯಾಕ್ಟರ್ ಚಳವಳಿಗೆ ಕರೆ ಕೊಟ್ಟಿದ್ದರು. ಕೆಲ ಪ್ರಾಮಾಣಿಕ ರೈತರು ಟ್ರ್ಯಾಕ್ಟರ್ ಚಳವಳಿಯಲ್ಲಿ ಪಾಲ್ಗೊಂಡು ಅರ್ಧ ದಾರಿಯಲ್ಲಿ ಚಳವಳಿ ಸ್ಥಗಿತಗೊಳಿಸಿ ವಾಪಸು ಊರುಗಳಿಗೆ ತೆರಳಿದ್ದರು. ತನ್ನ ರೈತ ಶಕ್ತಿ ತೋರಿಸುತ್ತೇನೆ ಎಂದು ಹಸಿರು ಶಾಲು ಹೊದ್ದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪೆಂಡಲ್ ಹಾಕಿ ಕೂತಿದ್ದ ಕೋಡಿಹಳ್ಳಿ ಚಂದ್ರಶೇಖರ್ ನಿರೀಕ್ಷಿಸಿದ ಮಟ್ಟದಲ್ಲಿ ರೈತರು ಬರಲಿಲ್ಲ.

ಕೇವಲ ಹೈವೇ ಟೋಲ್‌ಗಳ ಸಮೀಪ ಗಲಾಟೆಗೆ ಹೋರಾಟ ಸೀಮಿತಗೊಂಡಿತು. ಕೋಡಿಹಳ್ಳಿ ಚಂದ್ರಶೇಖರ್‌ಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಇದಾಗಿ ಮರು ದಿನವೇ ರಾಜ್ಯ ಸಾರಿಗೆ ನೌಕರರು ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ತೀರ್ಮಾನಿಸಿದ್ದರು. ಹತ್ತು ಸಾವಿರ ನೌಕರರನ್ನು ಸೇರಿಸುವ ಯೋಜನೆಯೊಂದಿಗೆ ಚಂದ್ರು ಕೂಡ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ವೇದಿಕೆ ಸಿದ್ಧತೆ ಮಾಡುತ್ತಿದ್ದರು. ಮುಕ್ತ ಮನಸ್ಸಿನಿಂದ ಚಂದ್ರು ಅವರು ಸಾರಿಗೆ ನೌಕರರ ಹೋರಾಟಕ್ಕೆ ರೈತರ ಬೆಂಬಲ ನೀಡುವಂತೆ ಕೋರಿದರು.

ಅದೊಂದು ಆಹ್ವಾನ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ನೌಕರರ ಹೋರಾಟದಲ್ಲಿ ರಿಬ್ಬನ್ ಕಟ್ ಮಾಡಲಿಕ್ಕೆ ಪ್ರವೇಶ ಕಲ್ಪಿಸಿತು. ರಿಬ್ಬನ್ ಕಟ್ ಮಾಡಿ ಸಾರಿಗೆ ನೌಕರರ ಮುಷ್ಕರ ಆರಂಭಿಸಿದರು. ಆದರೆ ಸಾರಿಗೆ ನೌಕರರ ಮುಷ್ಕರ ಸರ್ಕಾರದ ಮಟ್ಟದಲ್ಲಿ ಯಾವ ಪ್ರಭಾವವೂ ಬೀರಿರಲಿಲ್ಲ.
ವದಂತಿ ಮಾಡಿದ ಎಡವಟ್ಟು

ವದಂತಿ ಮಾಡಿದ ಎಡವಟ್ಟು

ಸಾರಿಗೆ ನೌಕರರ ಹೋರಾಟದ ಹಿನ್ನೆಲೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಿದಾಡಿತು. ಅಧಿವೇಶನ ನಡೆಯುತ್ತಿದ್ದರಿಂದ ಯಾವುದೇ ಅಡೆ ತಡೆಯಾಗದಂತೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ಸಂಜೆ ವೇಳೆ ಬಿಡುಗಡೆ ಮಾಡುವುದು ಸಾಮಾನ್ಯ.

ಆದರೆ, ''ಕೋಡಿಹಳ್ಳಿ ಅವರ ಬಂಧನವಾಯ್ತಂತೆ'' ಎಂದು ದೊಡ್ಡ ಸುದ್ದಿಯನ್ನು ಹರಿ ಬಿಟ್ಟರು. ಮೊದಲೇ ಅಸಹನೆ ಕಟ್ಟೆ ಒಡೆದಿದ್ದ ಸಾರಿಗೆ ನೌಕರರು ಏಕಾಏಕಿ ಬೀದಿಗೆ ಇಳಿದರು. ನಮ್ಮ ಪರ ಧ್ವನಿಯೆತ್ತಿದ್ದವರನ್ನೇ ಬಂಧಿಸುತ್ತೀರಾ ಎಂಬ ಸಿಟ್ಟು ಹೊರ ಹಾಕಿ ಸೇವೆ ಸ್ಥಗಿತಗೊಳಿದರು.

ಸಂಬಂಧವೇ ಇಲ್ಲದ ಸಾರಿಗೆ ನೌಕರರ ಹೋರಾಟದಲ್ಲಿ "ಗೌರವ ಅಧ್ಯಕ್ಷ" ಸ್ಥಾನ ಗಿಟ್ಟಿಸಿಕೊಂಡರು. ಆನಂತರ ನಡೆದ ಬೆಳವಣಿಗೆಯಿಂದ ಚಂದ್ರು ಕೂಡ ತನ್ನ ಒಕ್ಕೂಟವನ್ನು ನೋಂದಣಿ ಮಾಡಿಸಿ ಕೋಡಿಹಳ್ಳಿಗೆ ಗೌರವ ಅಧ್ಯಕ್ಷ ಸ್ಥಾನ ನೀಡಿದರು.

ಸಾರಿಗೆ ನೌಕರರ ಹೋರಾಟಕ್ಕೂ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ ಎಂದು ಖುದ್ದು ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದ್ದರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಚಕಾರ ಎತ್ತಿದ್ದರು. ವಾಸ್ತವದಲ್ಲಿ ರಿಬ್ಬನ್ ಕಟ್ ಮಾಡುವ ಮೂಲಕ ಸಂಪರ್ಕ ಬೆಳೆಸಿ ಸಾರಿಗೆ ನೌಕರರ ಹೋರಾಟದಲ್ಲಿ ಇದೀಗ ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದಾರೆ.
ಸಾರಿಗೆ ನೌಕರರ ಹೋರಾಟ ವಿಫಲ

ಸಾರಿಗೆ ನೌಕರರ ಹೋರಾಟ ವಿಫಲ

ನಾಲ್ಕು ದಿನಗಳ ಮುಷ್ಕರದ ನಂತರ ಸರ್ಕಾರ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿದೆ ಎಂಬ ಸುದ್ದಿಯನ್ನು ಹಬ್ಬಿಸಿದರು. ವದಂತಿಯನ್ನೇ ನಂಬಿ ಹೋರಾಟವನ್ನು ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟರು. ಬಹುಶಃ ಸಾರಿಗೆ ನೌಕರರ ಬಹುದೊಡ್ಡ ಹೋರಾಟ ಬೇಡಿಕೆ ಈಡೇರದೇ ಕೊನೆಗೊಂಡಿತ್ತು. ಹೀಗಾಗಿ ಪುನಃ ಇದೀಗ ಸಾರಿಗೆ ನೌಕರರು ಬೀದಿಗೆ ಇಳಿಯುವ ಪರಿಸ್ಥಿತಿ ಎದುರಾಗಿದೆ. ಸಾರಿಗೆ ನೌಕರರ ಮುಷ್ಕರದ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕರು ಅಪಸ್ವರ ಎತ್ತಿದ್ದಾರೆ.

ಕೋಡಿಹಳ್ಳಿ ಎಂಟ್ರಿಯಿಂದ ಸಾರಿಗೆ ನೌಕರರ ನಿಷ್ಕಲ್ಮಶ ಹೋರಾಟ ಮೌಲ್ಯ ಕಳೆದುಕೊಂಡಿತೇ ಎಂಬುದು ಇದೀಗ ಸಾರಿಗೆ ನೌಕರರ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಇನ್ನೂ ಕಳೆದ ಹತ್ತು ದಿನದಿಂದ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದಾರೆ. ನಾನಾ ಶೈಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸಾರ್ವಜನಿಕರ ಹಿತಾಸಕ್ತಿ ಅರಿತು ಕೆಲವು ನೌಕರರು ಮರಳಿ ಸೇವೆಗೆ ಸೇರಿದ್ದಾರೆ. ಈ ಹೋರಾಟವೂ ಕೂಡ ಯಾವ ಪ್ರತಿಫಲ ಇಲ್ಲದೇ ಅಂತ್ಯಗೊಳ್ಳಲಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ಮಾರುಕಟ್ಟೆಗೆ ಬಸ್ ಇಲ್ಲದೇ ರೈತರೇ ಕಂಗಾಲು

ಮಾರುಕಟ್ಟೆಗೆ ಬಸ್ ಇಲ್ಲದೇ ರೈತರೇ ಕಂಗಾಲು

ಸಾರಿಗೆ ನೌಕರರಲ್ಲಿ ಶೇ. 90 ರಷ್ಟು ಮಂದಿ ರೈತರ ಮಕ್ಕಳೇ. ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯ ರೂಪಿಸುವ ಏಕೈಕ ಉದ್ದೇಶದಿಂದ ಇಡೀ ಬದುಕನ್ನೇ ಪೀಪಿ ಮತ್ತು ಸ್ಟೇರಿಂಗ್‌ಗೆ ಸೀಮಿತಗೊಳಿಸಿ ರಕ್ತ ಬಸಿಯುತ್ತಿರುವ ಸಾರಿಗೆ ನೌಕರರ ಹೋರಾಟಕ್ಕೆ ಬೆಲೆಯಿದೆ. ಅವರು ರಸ್ತೆಗೆ ಇಳಿಯುವ ಮೊದಲೇ ಸರ್ಕಾರಗಳು ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಸಿದ ನಿದರ್ಶನಗಳು 1996 ರಿಂದ ನಡೆದ ಹೋರಾಟಗಳೇ ಸಾರಿ ಹೇಳುತ್ತವೆ.

ಹೋರಾಟವನ್ನೇ ಜೀವನವನ್ನಾಗಿ ರೂಪಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಮಾದರಿಯಲ್ಲಿ ಸಾರಿಗೆ ನೌಕರರು ಅವೈಜ್ಞಾನಿಕ ಮಾದರಿ ಮುಷ್ಕರ ಕೈಗೊಂಡರೆ ನೌಕರರನ್ನು ನಂಬಿರುವ ಲಕ್ಷಾಂತರ ಕುಟುಂಬಗಳ ಪಾಡೇನು? ಮಿಗಿಲಾಗಿ ಬಸ್‌ಗಳು ಇಲ್ಲದೇ ಇವತ್ತು ರೈತರು ಬೆಳೆದ ತರಕಾರಿ, ಹೂವು, ಆಹಾರ ಪದಾರ್ಥಗಳು ಮಾರುಕಟ್ಟೆ ತಲುಪಲಾಗದೇ ಕಂಗಾಲಾಗಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೋಡಿಹಳ್ಳಿ ಚಂದ್ರಶೇಖರ್ ಮತ್ತೆ ಯಾವತ್ತು ಹೋರಾಟ ಮಾಡುತ್ತಾರೆ ?


ಇನ್ನು ಬಸ್‌ಗಳನ್ನೇ ನಂಬಿ ಪ್ರಯಾಣಿಸುವ ವಿದ್ಯಾರ್ಥಿಗಳ ಸ್ಥಿತಿಯಂತೂ ಚಿಂತಾಜನಕವಾಗಿದೆ. ಕೊರೊನಾ ಸಂಕಷ್ಟದಲ್ಲಿ ಇಡೀ ರಾಜ್ಯ ಒದ್ದಾಡುತ್ತಿದೆ. ಬದುಕನ್ನೇ ಮಾನವೀಯತೆ ಆಧಾರದ ಮೇಲೆ ಜನ ಸೇವೆಗೆ ಮುಡುಪಾಗಿಟ್ಟಿರುವ ಸಾರಿಗೆ ನೌಕರರ ಹೋರಾಟ ದಿಕ್ಕು ತಪ್ಪುತ್ತಿದ್ದೆಯಾ ? ಅವರ ಬಹು ಬೇಡಿಕೆ ಈಡೇರಿಸಲು ಪ್ರತಿಯೊಬ್ಬ ಕನ್ನಡಿಗನ ಬೆಂಬಲ ಇದೆ. ಆದರೆ ಆ ಬೆಂಬಲ ಆಧಾರಿತ ಹೋರಾಟ ಅಗತ್ಯವೋ? ನಾಯಕತ್ವದ ಶಕ್ತಿ ಪ್ರದರ್ಶನ ಪ್ರತಿಫಲವಿಲ್ಲದ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯವೋ ಕೋಡಿಹಳ್ಳಿ ನಿರ್ಧರಿಸಬೇಕು. ಇಲ್ಲವೇ ಸಾರಿಗೆ ನೌಕರರ ಹೋರಾಟಕ್ಕೂ ನನಗೂ ಸಂಬಂಧವಿಲ್ಲ. ನನ್ನದೇನಿದ್ದರು ಹಸಿರು ಶಾಲು ಎಂದು ಸಾರಿಗೆ ನೌಕರರ ಹೋರಾಟದಿಂದ ಹೊರಗೆ ಬರ್ತಾರೋ ಕಾದು ನೋಡಬೇಕು.

English summary
The Story of the farmers leader Kodihalli Chandrasekhar, how did he became the leader of the transport workers. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X