ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮಗು ಸಾವು, ಪೋಷಕರ ಆಕ್ರೋಶ
ಬೆಂಗಳೂರು, ಅ. 13:ಮಹಡಿ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಎರಡು ವರ್ಷದ ಮಗು ಗಗನಾ ಮೃತಪಟ್ಟಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುತ್ತಿತ್ತು ಎಂದು ಮಗುವಿನ ಪೋಷಕರು ಹಾಗೂ ಬಂಧುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಂಕಟೇಶ್-ಸುಮಾ ದಂಪತಿಯ ಎರಡು ವರ್ಷದ ಮಗು ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಜೆ.ಸಿ.ರಸ್ತೆಯ ನಾರಾಯಣಸ್ವಾಮಿ ಗಾರ್ಡನ್‌ನಲ್ಲಿರುವ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಮಗು ಆಟವಾಡುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿತ್ತು.
ಗಾಯಗೊಂಡಿರುವ ಮಗುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯ ವೈದ್ಯರು ಮಗು ಗಂಭೀರವಾಗಿ ಗಾಯಗೊಂಡಿದ್ದು, ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಪೋಷಕರು ಮಗುವನ್ನು ಮಾರ್ಥಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಾಗ ವೈದ್ಯರು ಮಗುವಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಇಲ್ಲಿ ವೆಂಟಿಲೇಟರ್‌ನ ಕೊರೆತೆಯಿದ್ದು, ಮಗುವನ್ನು ನಿಮ್ಹಾನ್ಸ್ ಗೆ ಸೇರಿಸುವಂತೆ ಸೂಚಿಸಿದ್ದಾರೆ.
ನಿಮ್ಹಾನ್ಸ್ ನಲ್ಲಿ ಮಗುವನ್ನು ಅಡ್ಮಿಟ್ ಮಾಡಿಕೊಳ್ಳದೆ ಒಂದು ತಾಸಿಗೂ ಅಧಿಕ ಕಾಲ ಅಲ್ಲಿಂದ ಇಲ್ಲಿಗೆ ಓಡಾಡಿಸಿಬಿಟ್ಟರು. ಕೊನೆಗೆ ಜಯನಗರದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ(ಐಜಿಐಸಿಎಚ್) ಗೆ ಕರೆದುಕೊಂಡು ಹೋಗಿ ಎಂದು ಹೇಳಿದರು.

ಅಲ್ಲಿಂದ ಮಗುವನ್ನು ಜಯನಗರದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ(ಸಂಜಯಗಾಂಧಿ ಆಸ್ಪತ್ರೆ ಪಕ್ಕ) ಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿದ್ದ ವೈದ್ಯರು ಕೂಡಾ ವೆಂಟಿಲೇಟರ್‌ನ ಕೊರತೆಯಿದೆ ಎಂದು ಹೇಳಿದ್ದಾರೆ. ಪೋಷಕರ ಆಕ್ರೋಶ ಹೆಚ್ಚಾದ ಮೇಲೆ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.
ವೆಂಟಿಲೇಟರ್‌ನ ಕೊರತೆಯ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುವಲ್ಲಿ ಕೊಂಚ ವಿಳಂಬವಾಗಿದೆ. ಆಸ್ಪತ್ರೆಯಲ್ಲಿದ್ದ ವೆಂಟಿಲೇಟರ್‌ಗಳನ್ನು ಬೇರೆ ಮಕ್ಕಳಿಗೆ ನೀಡಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಮಗುವಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು. -ಆಶಾ ಬೆನಕಪ್ಪ, ಇಂದಿರಾಗಾಂಧಿ ಆಸ್ಪತ್ರೆಯ ನಿರ್ದೇಶಕಿ ಹೇಳಿದ್ದಾರೆ. ಅದರೆ, ಅಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ಮಗು ತೀವ್ರ ರಕ್ತಸ್ರಾವದಿಂದ ಅಸುನೀಗಿತ್ತು.
ಸುಧಾಮನಗರದ ಗಾರ್ಮೆಂಟ್ಸ್ ನಲ್ಲಿ ಉದ್ಯೋಗಿಯಾಗಿರುವ ವೆಂಕಟೇಶ್ ಹಾಗೂ ಗೃಹಿಣಿ ಸುಮಾ ಅವರ ರೋದನ ಮುಗಿಲು ಮುಟ್ಟುವಂತಿತ್ತು.












Click it and Unblock the Notifications