ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಪದಗಳನ್ನು ಕಟ್ಟುವವರಿಗೊಂದು ಕಮ್ಮಟ

By Mahesh
|
Google Oneindia Kannada News

ಬೆಂಗಳೂರು, ನ.20: ಕನ್ನಡ ಭಾಷಯಲ್ಲಿ ಹೊಸ ಹೊಸ ಪದಗಳನ್ನು ಕಟ್ಟಿ, ಆ ಮೂಲಕ ಎಲ್ಲಾ ವಿಷಯಗಳನ್ನೂ ಕನ್ನಡದಲ್ಲೇ ಹೇಳುವ ಪ್ರಯತ್ನವನ್ನು ಹೊನಲು.ನೆಟ್ ತಂಡ ಮಾಡುತ್ತಿದೆ. ಈ ವಿಶಿಷ್ಟ ಕಾರ್ಯಾಗಾರದ ಬಗ್ಗೆ ಹೊನಲು ತಂಡ ಬರೆದಿರುವ ಆಹ್ವಾನಪೂರ್ವಕ ವಿವರಣೆ ಮುಂದೆ ಎಲ್ಲರಕನ್ನಡದಲ್ಲಿದೆ ಓದಿರಿ...

ಕನ್ನಡದಲ್ಲೇ ಹೊಸ ಹೊಸ ಪದಗಳನ್ನು ಕಟ್ಟಿ, ಆ ಮೂಲಕ ಎಲ್ಲಾ ವಿಶಯಗಳನ್ನೂ ಕನ್ನಡದಲ್ಲೇ ಹೇಳುವ ಪ್ರಯತ್ನವೇ ಹೊನಲು ಮಿಂಬಾಗಿಲು. ಬೇರೆ ಬೇರೆ ವಲಯಗಳಿಗೆ ಸಂಬಂದಪಟ್ಟ ಪದಗಳನ್ನು ಕನ್ನಡದಲ್ಲೇ ಕಟ್ಟುವ ಸಲುವಾಗಿ, ಮತ್ತು ಹಾಗೆ ಕಟ್ಟಲಾದ ಪದಗಳನ್ನು ಚರ್ಚೆಗೊಳಪಡಿಸಿ ಒರೆಗೆ ಹಚ್ಚಿನೋಡುವ ಸಲುವಾಗಿ, ಫೇಸ್‍ಬುಕ್ಕಿನಲ್ಲಿ ಪದ ಪದ ಕನ್ನಡ ಪದಾನೇ ಎಂಬ ಹೆಸರಿನ ಗುಂಪೊಂದನ್ನು ನಡೆಯಿಸಿಕೊಂಡು ಬರುತ್ತಿದ್ದೇವೆ. ಈ ಗುಂಪಿನಲ್ಲಿ ಕಟ್ಟಲಾದ ಹಲವಾರು ಪದಗಳನ್ನು ಹೊನಲು ಮಿಂಬಾಗಿಲ ಬರಹಗಳಲ್ಲಿ ಬಳಸಿಕೊಳ್ಳಲಾಗಿದೆ, ಸುಮಾರು ಪದಗಳನ್ನು ಈಗಾಗಲೇ ನಿಮ್ಮ ಮುಂದೆಯೂ ಇಟ್ಟಿದ್ದೇವೆ. [ಹೊಸ ಮೈಲಿಗಲ್ಲು ದಾಟಿದ ಕನ್ನಡ ವಿಕ್ಷನರಿ]

ಕನ್ನಡವನ್ನು ಗಟ್ಟಿಗೊಳಿಸುವ ಈ ಪಯಣದಲ್ಲಿ ನಮಗೆ ಹಲವು ಅನುಬವಗಳು, ಕಲಿಕೆಗಳು ಆಗಿವೆ. ಪದಕಟ್ಟಣೆ ಕೆಲಸದಲ್ಲಿ ನೆರವಾಗಬಹುದಾದ ಹಲವಾರು ಸಲಕರಣೆಗಳನ್ನು ಕಂಡುಕೊಂಡಿದ್ದೇವೆ, ಅವನ್ನು ಬಳಸಿ ಪಳಗಿದ್ದೇವೆ. ಹಾಗಾಗಿ, ಕನ್ನಡದಲ್ಲಿ ಪದ ಕಟ್ಟುವ ಹಂಬಲ ಇರುವವರೊಂದಿಗೆ ಈ ಕಲಿಕೆಯನ್ನು ನಾವು ಹಂಚಿಕೊಳ್ಳ ಬಯಸುತ್ತೇವೆ. ಈ ನಿಟ್ಟಿನಲ್ಲಿ ಒಂದು ದಿನದ 'ಪದ ಕಟ್ಟಣೆ ಕಮ್ಮಟ'ವನ್ನು ಹಮ್ಮಿಕೊಂಡಿದ್ದೇವೆ.

Honulu team Kannada word building workshop

ಈ ಕಮ್ಮಟದಲ್ಲಿ ಕನ್ನಡದಲ್ಲೇ ಪದಗಳನ್ನು ಕಟ್ಟುವ ಆಸಕ್ತಿ ಉಳ್ಳವರೆಲ್ಲ ಒಂದೆಡೆ ಸೇರಿ, ಇಂಗ್ಲೀಶ್ ಮತ್ತು ಸಂಸ್ಕ್ರುತದ ಪದಗಳಿಗೆ ಕನ್ನಡದ್ದೇ ಪದಗಳನ್ನು ಕಟ್ಟುವ ಮೂಲಕ, ಹಾಗೆ ಕಟ್ಟಲಾದ ಪದಗಳ ತಕ್ಕುಮೆಯನ್ನು ಚರ್ಚಿಸುವ ಮೂಲಕ, ಪದಕಟ್ಟಣೆ ಕೆಲಸದ ಒಳಹುಗಳನ್ನು ಅರಿತುಕೊಳ್ಳಬಹುದಾಗಿದೆ.
ಈ ಕಮ್ಮಟದಲ್ಲಿ ಪಾಲ್ಗೊಂಡು, ಕನ್ನಡದಲ್ಲಿ ಪದಕಟ್ಟಣೆಯ ಕೆಲವು ಅಡಿಪಾಯದ ಚಳಕಗಳನ್ನು ಕಲಿಯುವ ಆಸಕ್ತಿ ಇರುವವರು [email protected]ಗೆ ಮಿಂಚೆ ಬರೆದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು.

ಮಿಂಚೆಯಲ್ಲಿ ತಮ್ಮ ಹೆಸರು, ಪೋನ್ ನಂಬರ್ ಮತ್ತು ಈ ಕಮ್ಮಟದಲ್ಲಿ ಏಕೆ ಪಾಲ್ಗೊಳ್ಳಬಯಸುತ್ತೀರಿ ಎಂದು ಚಿಕ್ಕದಾಗಿ ಬರೆದು ಕಳುಹಿಸಿ. ಹಾಗೆಯೇ, ಬೇರೆ ಏನಾದರೂ ಕೇಳ್ವಿಗಳು ಇದ್ದರೆ, ನಮಗೆ ಮಿಂಚೆ ಕಳುಹಿಸಬಹುದು. ಕಮ್ಮಟದ ದಿನದಂದು ಪಾಲ್ಗೊಳ್ಳುಗರಿಗೆ ಬೇಕಾಗುವ ಹೊತ್ತಗೆಗಳು ಮತ್ತು ಸಲಕರಣೆಗಳನ್ನು ಒದಗಿಸಲಾಗುವುದು. ಕುಡಿಯುವ ನೀರಿನ ಏರ್ಪಾಡು, ಊಟದ ಏರ್ಪಾಡು ಕೂಡ ಇರುತ್ತದೆ.

ಪಾಲ್ಗೊಳ್ಳುಗರ ಸಂಕ್ಯೆಗೆ ಮೇಲುಮಿತಿಯಿರುವುದರಿಂದ ಮೊದಲು ಮಿಂಚೆ ಬರೆದು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ. ಹಾಗಾಗಿ, ಪದಕುಳಿಗಳು, ಪದ ಕಟ್ಟುವ ಆಸಕ್ತಿ ಉಳ್ಳವರು, ಮತ್ತು ಕನ್ನಡದಲ್ಲೇ ತಿಳಿವುಗಳನ್ನು ಕಟ್ಟುವ ಹುರುಪಿರುವವರು ಕೂಡಲೇ ನಮಗೆ ಮಿಂಚೆ ಕಳುಹಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿರಿ. ಹೆಚ್ಚಿನ ವಿವರಗಳನ್ನು ನಿಮಗೆ ಮಿಂಚೆಯ ಮೂಲಕ ತಿಳಿಸಲಾಗುವುದು.

ನೆನಪಿರಲಿ, ಈ ಕಮ್ಮಟದಲ್ಲಿ ಪಾಲ್ಗೊಳ್ಳಲು, ಇಂತಹುದೇ ವಿದ್ಯಾರ‍್ಹತೆ ಇರಬೇಕು ಎಂದೇನಿಲ್ಲ. ಕನ್ನಡದಲ್ಲಿ ಪದಗಳನ್ನು ಕಟ್ಟುವ ಕೆಲಸದಲ್ಲಿ ಆಸಕ್ತಿ ಮತ್ತು ಹುರುಪಿದ್ದರೆ ಸಾಕು.

ಆಗುಹದ ಬಗೆಗೆ ಹೆಚ್ಚಿನ ವಿವರಗಳು ಇಲ್ಲಿವೆ.
ದಿನ: 14 ಡಿಸೆಂಬರ್ 2014, ರವಿವಾರ
ಹೊತ್ತು: ಬೆಳಿಗ್ಗೆ 10:00ರಿಂದ ಸಂಜೆ 5:00ರ ವರೆಗೆ
ಪಾಲ್ಗೊಳ್ಳುವಿಕೆ ಶುಲ್ಕ: 200 ರುಪಾಯಿಗಳು (ಶುಲ್ಕವನ್ನು ಕಮ್ಮಟದ ದಿನದಂದು ನೀಡುವುದು)
ಎಡೆ: ಮನೋರಮ ಹಾಲ್, ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ವರ‍್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - 560 004

English summary
Honulu team and Kannada enthusiastic youths have organised a unique workshop to build Kannada language words. This word building process will be herald at IIWC, BP wadia road, Basavanagudi, Bengaluru on Dec.12, 204, Interested persons can join hands with the team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X