ಸಾರಿಗೆ ನೌಕರರ ಮುಷ್ಕರ; ಸಭೆ ನಂತರ ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 12: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಎರಡನೇ ದಿನವಾದ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡನೇ ದಿನವೂ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್‌ಗಳನ್ನು ಡಿಪೋದಲ್ಲಿರಿಸಿರುವ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ಮುಂದುವರೆಸಿದ್ದಾರೆ.
ಮುಷ್ಕರದ ಕುರಿತು ಸಿಎಂ ಯಡಿಯೂರಪ್ಪ ಅವರೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿದ್ದು, ಈ ಕುರಿತು ನೌಕರರಿಗೆ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
"ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮುಖಂಡರ ಜೊತೆ ಈ ಕುರಿತಂತೆ ಚರ್ಚೆ ನಡೆಸಿದ್ದಾರೆ. ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿದ್ದುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲರ ರಕ್ಷಣೆ ಮಾಡಲಾಗುತ್ತದೆ" ಎಂದು ಹೇಳಿದರು.

"ಕೋವಿಡ್ ಸಂದರ್ಭದಲ್ಲಿ ನಷ್ಟದಲ್ಲಿದ್ದರೂ ಸಾರಿಗೆ ಸಿಬ್ಬಂದಿಗೆ ಸಂಬಳ ಕೊಟ್ಟಿದ್ದೇವೆ. ಕೂಡಲೇ ಮಾತುಕತೆಗೆ ಬನ್ನಿ. ಮುಷ್ಕರ ನಿಲ್ಲಿಸಿ, ಕೆಲಸಕ್ಕೆ ಹಾಜರಾಗಿ" ಎಂದು ತಿಳಿಸಿದ್ದಾರೆ.
"ನಿಮ್ಮ ಈ ಬೇಡಿಕೆಗಳನ್ನು ಕೋವಿಡ್ ನಂಥ ಸಂಕಷ್ಟದ ಸಂದರ್ಭದಲ್ಲಿ ಈಡೇರಿಸಲು ಸಾಧ್ಯವಿಲ್ಲ. ಕೂಡಲೇ ಕೆಲಸಕ್ಕೆ ಹಾಜರಾಗಿ. ಸದ್ಯಕ್ಕೆ ಎಸ್ಮಾ ಜಾರಿಗೊಳಿಸುವ ಚಿಂತನೆಯಿಲ್ಲ. ನೌಕರಿಗೆ ಇವತ್ತೇ ಹಾಜರಾಗಿ, ಮಾತುಕತೆಗೆ ನಾವು ಸಿದ್ಧವಾಗಿದ್ದೇವೆ" ಎಂದು ಹೇಳಿದ್ದಾರೆ. ಇನ್ನೆರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.












Click it and Unblock the Notifications