Darshan Thoogudeepa: ದರ್ಶನ್ ಮನೆಯೂಟದ ಭವಿಷ್ಯ ಇಂದು ನಿರ್ಧಾರ
ಬೆಂಗಳೂರು, ಜುಲೈ 31: ಮನೆಯಿಂದ ಊಟ, ಬಟ್ಟೆ ಮತ್ತು ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಸೂಚಿಸುವಂತೆ ಕೋರಿ ನಟ ದರ್ಶನ್ ಹೈಕೋರ್ಟ್‌ಗೆ ಮಂಗಳವಾರ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಇಂದು(ಜುಲೈ 31) ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬರಲಿದೆ.
ಈ ಕುರಿತಂತೆ ದರ್ಶನ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದ ಅಧೀಕ್ಷಕರು ಮತ್ತು ಕಾಮಾಕ್ಷಿಪಾಳ್ಯದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೂನ್ 22ರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್, ಜೈಲಿನಲ್ಲಿ ನೀಡುತ್ತಿರುವ ಆಹಾರ ಜೀರ್ಣವಾಗುತ್ತಿಲ್ಲ. ಇದರಿಂದ ಅಜೀರ್ಣ, ಅತಿಸಾರ ಬೇಧಿ ಸೇರಿ ಇನ್ನಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ, ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆಯನ್ನು ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿ ಜು.9ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕಾರ
ಈ ಕುರಿತಂತೆ ಮೊದಲು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ಜುಲೈ 19ರಂದು ಹೈಕೋರ್ಟ್ ಸೂಚಿಸಿ ವಿಚಾರಣೆ ಮುಂದೂಡಿತ್ತು. ಅದರಂತೆ ಜು.20ರಂದು ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ಕೊಲೆ ಆರೋಪ ಹೊತ್ತಿರುವುದರಿಂದ ಮನೆಯಿಂದ ಊಟ ತರಿಸಿಕೊಳ್ಳಲು ದರ್ಶನ್ ಅರ್ಹರಾಗಿಲ್ಲ ಎಂದು ಜುಲೈ 25ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಹೊಸದಾಗಿ ಅರ್ಜಿ ಸಲ್ಲಿಸುವ ಉದ್ದೇಶದಿಂದ ಮೊದಲಿಗೆ (ಜು.9ರಂದು) ದಾಖಲಿಸಿದ್ದ ತಕರಾರು ಅರ್ಜಿಯನ್ನು ಸೋಮವಾರವಷ್ಟೇ (ಜು.29) ದರ್ಶನ್ ಹಿಂಪಡೆದುಕೊಂಡಿದ್ದರು. ಇದೇ ವಿಚಾರವಾಗಿ ಬುಧವಾರ ಮತ್ತೆ ಹೊಸದಾಗಿ ತಕರಾರು ಅರ್ಜಿ ಸಲ್ಲಿಸಿರುವ ಅವರು, ಮ್ಯಾಜಿಸ್ಟ್ರೇಟ್‌ಕೋರ್ಟ್ ಆದೇಶ ರದ್ದುಪಡಿಸಬೇಕು. ಮನೆಯಿಂದ ಊಟ, ಬಟ್ಟೆ ಮತ್ತು ಹಾಸಿಗೆ ತರಿಸಿಕೊಳ್ಳಲು ತನಗೆ ಅನುಮತಿ ನೀಡುವಂತೆ ಕಾರಾಗೃಹದ ಅಧೀಕ್ಷಕರಿಗೆ ಸೂಚಿಸುವಂತೆ ಹೈಕೋರ್ಟ್‌ಗೆ ಕೋರಿದ್ದಾರೆ.












Click it and Unblock the Notifications