ಕ್ರಿಕೆಟ್ ಪ್ರೇಮಿಗಳಿಗೆ ಶಾಕ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆಗೆ ನಿಷೇಧ: ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಭದ್ರತಾ ನಿಯಮ ಪಾಲಿಸಿದರೆ ಮಾತ್ರವೇ ಅನುಮತಿ ನೀಡಲಾಗುವುದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲೆ ಪಂದ್ಯಾವಳಿ ನಡೆಸುವ ಕುರಿತಂತೆ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ ) ಸಮಿತಿ ರಚಿಸಲಾಗಿದೆ. ಸಮಿತಿ ಇಂದು ಮಧ್ಯಾಹ್ನ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಗೃಹ ಸಚಿವರಾದ ಜಿ.ಪರಮೇಶ್ವರ ಅವರು ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುವ ಕುರಿತಂತೆ ವಿಧಾನಸೌಧದ ಉಪಸಮಿತಿ ಕೊಠಡಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಪದಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿಸೆಂಬರ್ 24ರಂದು ವಿಜಯ್ ಹಜಾರೆ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ನೀಡುವಂತೆ ಕೆಎಸ್‌ಸಿಎ ಮನವಿ ಮಾಡಿದೆ. ಅನುಮತಿ ನೀಡಿದಲ್ಲಿ ಪಂದ್ಯಗಳನ್ನು ಮಾತ್ರ ನಡೆಸುತ್ತೇವೆ. ಆದರೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಇಂದು ಸ್ಟೇಡಿಯಂ ಪರಿಶೀಲನೆ, ವರದಿ ಸಲ್ಲಿಕೆ
ಮನವಿ ಸ್ವೀಕರಿಸಿದ ಡಾ.ಜಿ.ಪರಮೇಶ್ವರ ಅವರು, ಪ್ರೇಕ್ಷಕರ, ಕ್ರೀಡಾಪಟುಗಳ ಸುರಕ್ಷತೆಯೆ ಹಿತದೃಷ್ಟಿಯಿಂದ ಜಿಬಿಎ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಲೋಕೋಪಯೋಗಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆಯನ್ನೊಳಗೊಂಡ ಸಮಿತಿಯು ಇಂದು ಮಧ್ಯಾಹ್ನ 3 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ, ಪರಿಶೀಲಿಸುತ್ತದೆ. ಬಳಿಕ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ, ಪಂದ್ಯಾವಳಿಗೆ ಅನುಮತಿ ನೀಡಬೇಕೋ ಬೇಡವೋ ಎಂದು ನಿರ್ಧರಿಸಲಾಗುವುದು ಎಂದರು.
ಭದ್ರತಾ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ ಟೂರ್ನಿ ನಡೆಸಲು ಅನುಮತಿಗೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು 17 ಅಂಶಗಳ ಸಲಹೆ ಸೂಚನೆಗಳ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ಏನೆಲ್ಲ ಪೂರ್ಣಗೊಳಿಸಿದ್ದಾರೆ ಎಂಬುದನ್ನು ಪರಿಶೀಲಿಸಿ, ಇಂದು ಸಂಜೆ 5 ಗಂಟೆಯೊಳಗೆ ಸಮಿತಿಯು ಸರ್ಕಾರಕ್ಕೆ ತಿಳಿಸಲಿದೆ. ಕೆಲ ದಿನಗಳ ಹಿಂದೆಯಷ್ಟೇ ಕೆಎಸ್‌ಸಿಎ ಹೊಸ ಸಮಿತಿ ರಚನೆಯಾಗಿದೆ. ಎಲ್ಲವನ್ನು ಪೂರ್ಣಗೊಳಿಸುವುದಾಗಿ ಕೆಎಸ್‌ಸಿಎ ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಕಾಲ್ತುಳಿತ: ಸರ್ಕಾರದಿಂದ ಜಾಗರೂಕ ಹೆಜ್ಜೆ
ಇದೇ ವರ್ಷ ಐಪಿಎಲ್ 2025 ಅನ್ನು ಆರ್‌ಸಿಬಿ ಗೆಲ್ಲುತ್ತಿದ್ದಂತೆ ತಂಡದ ನಾಯಕರು ಬೆಂಗಳೂರಿಗೆ ಆಗಮಿಸಿದ್ದರು. ಆಗ ನಿರೀಕ್ಷೆಗೂ ಮೀರಿ ಕ್ರಿಕೆಟ್ ಪ್ರೇಮಿಗಳು ಆಗಮಿಸಿದ್ದರಿಂದ ನೂಕು ನುಗ್ಗಲಾಗಿತ್ತು. ಕಾಲ್ತುಳಿತ ಸಂಭವಿಸಿತ್ತು. ಸಾವು ನೋವುಗಳಾಗಿದ್ದವು. ಅದಾದ ಬಳಿಕ ಕ್ರೀಡಾಂಗಣ ಪರಿಶೀಲಿಸಿ, ಹಾಲಿ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು. ಮುಂದೆ ಪಂದ್ಯಗಳನ್ನು ನಡೆಸುವಾಗ ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ನಿರಂತರವಾಗಿ ಯೋಚಿಸಲಾಗಿತ್ತು. ಪೊಲೀಸರು ಮತ್ತು ಗೃಹ ಸಚಿವರು ಚರ್ಚಿಸಿದ್ದರು. ಅದರಂತೆ ಪೊಲೀಸರು 17 ಮಾರ್ಗಸೂಚಿಗಳನ್ನು ನೀಡಿದ್ದಾರೆ. ಅದರ ಬೆನ್ನಲ್ಲೆ ವಿಜಯ್ ಹಜಾರೆ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ಕೋರಲಾಗಿದೆ. ಅನುಮತಿ ನೀಡುವುದರ ಬಗ್ಗೆ ಇಂದು ಸಂಜೆ ಗೊತ್ತಾಗಲಿದೆ.
ಪೊಲೀಸರ 17 ಮಾರ್ಗಸೂಚಿಗಳಲ್ಲಿ ಏನೇನಿದೆ?
ಪಂದ್ಯಗಳು ನಡೆಯುವಾಗ ಪ್ರೇಕ್ಷಕರಿಗೆ ಕ್ರೀಡಾಂಗಣ ಹೊರಗೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವುದು, ಸರತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ, ಕಿರಿದಾದ ಗೇಟ್‌ಗಳ ದುರಸ್ತಿ, ಮಹಿಳೆಯರು ಮತ್ತು ಮಕ್ಕಳ ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ, ಆಂಬ್ಯುಲೆನ್ಸ್‌ಗೆ ಪ್ರತ್ಯೇಕ ವ್ಯವಸ್ಥೆ, ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಪರಿಶೋಧಿಸಬೇಕು, ಗೇಟ್‌ಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ, ಸಿಸಿಟಿವಿ ಕಣ್ಗಾವಲು, ಟಿಕೆಟ್ ಮಾರಾಟ, ವಿತರಣೆಗೆ ಪ್ರತ್ಯೇಕ ಸ್ಥಳ ಕಲ್ಪಿಸುವಂತೆ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಇದೆಲ್ಲ ಆದಲ್ಲಿ ಪಂದ್ಯಾವಳಿಗಳಿಗೆ ಅನುಮತಿ ನೀಡುಬಹುದೆಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಶೀಘ್ರವೇ ಸಿಗಲಿದೆ.












Click it and Unblock the Notifications