ರಾಜ್ಯದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು: ಗರ್ಭಿಣಿಗೆ ಮುಖ್ಯ ಪರೀಕ್ಷೆ ಬರೆಯಲು ವಿಶೇಷ ಅವಕಾಶ
ಬೆಂಗಳೂರು ನವೆಂಬರ್ 18. ಕರ್ನಾಟಕ ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಂಟೂವರೆ ತಿಂಗಳ ತುಂಬು ಗರ್ಭಿಣಿ ನೇತ್ರಾವತಿ ನೆರವಿಗೆ ಧಾವಿಸಿದೆ. ಅಲ್ಲದೇ, ಅವರ ಮನೆ ಸಮೀಪದ ಕೋರ್ಟ್‌ನಲ್ಲೇ ಸಿವಿಲ್ ನ್ಯಾಯಾಧೀಶರ ಹುದ್ದೆಯ ಮುಖ್ಯ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಮೊದಲೇ ನಿಗದಿಯಾಗಿದ್ದಂತೆ ಇಂದು ಮತ್ತು ನಾಳೆ (ನ.18 ಮತ್ತು19)ಸಿವಿಲ್ ನ್ಯಾಯಾಧೀಶರ ನೇಮಕದ ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ. ಆದರೆ ನೇತ್ರಾವತಿ ತುಂಬು ಗರ್ಭಿಣಿಯಾಗಿರುವುದರಿಂದ ಬೆಂಗಳೂರಿಗೆ ಪ್ರಯಾಣಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತು ಹೈಕೋರ್ಟ್ ಮಂಗಳೂರಿನಲ್ಲಿಯೇ ಪರೀಕ್ಷೆಗೆ ಅವಕಾಶ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿರುವ ಅಪರೂಪದ ವಿಶೇಷ ಪ್ರಕರಣ ಇದಾಗಿದೆ.

ಈ ರೀತಿ ಅಭ್ಯರ್ಥಿಯ ಮನೆಯ ಬಳಿಯೇ ಪರೀಕ್ಷೆ ಬರೆಯಲು ಹೈಕೋರ್ಟ್ ಅವಕಾಶ ನೀಡಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಘಟನೆಯ ಹಿನ್ನೆಲೆ ಏನು..?
ಹೈಕೋರ್ಟ್ 57 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇರ ನೇಮಕಕ್ಕೆ 2023ರ ಮಾ.9ರಂದು ಅರ್ಜಿಗಳನ್ನು ಕರೆದಿತ್ತು. ಅದಕ್ಕೆ ಜು.23ರಂದು ನಡೆಸಿದ ಪ್ರಾಥಮಿಕ ಪರೀಕ್ಷೆಗೆ 6ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು ಮತ್ತು 1022 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಆ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೇತ್ರಾವತಿ ಅವರೂ ಸಹ ಇದ್ದರು.
ನ.18.19ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರೀಕ್ಷೆಗೆ ನೇತ್ರಾವತಿ ಹಾಜರಾಗಬೇಕಿತ್ತು. ಆದರೆ ಎಂಟೂವರೆ ತಿಂಗಳ ಗರ್ಭಿಣಿಯಾಗಿರುವುದರಿಂದ ವೈದ್ಯರ ಸಲಹೆಯಂತೆ ಪ್ರಯಾಣ ಮಾಡಲಾಗದು, ಆದ್ದರಿಂದ ಮಂಗಳೂರಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು.
ಆ ಮನವಿ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್‌ಕುಮಾರ್ ನೇತೃತ್ವದ ಐವರು ಸದಸ್ಯರ ನೇಮಕ ಸಮಿತಿಯ ಮುಂದೆ ಬಂದಿತ್ತು. ಆಗ ಆ ಅಭ್ಯರ್ಥಿಯ ಆರೋಗ್ಯ ಸ್ಥಿತಿಯನ್ನು ಅರಿತು ಸಮಿತಿ ಅವರಿಗೆ ಮಂಗಳೂರಿನಲ್ಲಿರುವ ಕೋರ್ಟ್‌ನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರ್ಧರಿಸಿತು. ಆ ನಿರ್ಧಾರವನ್ನು ಸಿಜೆ ಪಿ.ಬಿ.ವರ್ಲೆ ಅವರು ಅನುಮೋದಿಸಿದರು.
ಪ್ರತ್ಯೇಕ ನಿಗಾ ವ್ಯವಸ್ಥೆ
ಈ ತೀರ್ಮಾನದ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್‌ಕುಮಾರ್ ಅವರು ಮಂಗಳೂರಿನಲ್ಲಿ ನೇತ್ರಾವತಿ ಅವರು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಒರ್ವ ಮಹಿಳಾ ನ್ಯಾಯಾಂಗ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಈ ಪರೀಕ್ಷೆಯ ಮೇಲೆ ನಿಗಾ ವಹಿಸಲಿದ್ದಾರೆ ಹಾಗೂ ಅಭ್ಯರ್ಥಿ ಪರೀಕ್ಷೆ ಬರೆಯುವ ನ್ಯಾಯಾಲಯದಲ್ಲಿ ಅಗತ್ಯ ತುರ್ತು ವೈದ್ಯಕೀಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications