ಅನಧಿಕೃತ ಕಟ್ಟಡಗಳ ತೆರವು: ಕ್ರಿಯಾ ಯೋಜನೆ ಸಲ್ಲಿಸಲು BBMP ಹಾಗೂ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು, ಆಗಸ್ಟ್, 15: ಬೆಂಗಳೂರು ಮಹಾನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವಿಗೆ ಮೂರು ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಇದರಿಂದಾಗಿ ಬಿಬಿಎಂಪಿ ಇನ್ನು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾ. ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.

ಇದನ್ನು ಪರಿಶೀಲಿಸಿದ ನ್ಯಾಯಪೀಠ, ಕೋರ್ಟ್‌ನ ಹಿಂದಿನ ಆದೇಶಗಳ ಪಾಲನೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪಾಲಿಕೆಗೆ ತೆರವು ಕಾರ್ಯ ಕೈಗೊಳ್ಳಲು ಹೆಚ್ಚುವರಿ ಮಾನವ ಸಂಪನ್ಮೂಲ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಲಾಗಿತ್ತು. ಆ ನಿರ್ದೇಶನ ಪಾಲನೆ ಆಗಿದೆಯೋ ಇಲ್ಲವೋ ತಿಳಿದಿಲ್ಲ ಎಂದು ಹೇಳಿದೆ.
ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿಯನ್ನು ಗಮನಿಸಿದರೆ ಎರಡು ಬಗೆಯ ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಆದರೆ ತೆರವು ಕೈಗೊಂಡಿರುವುದು ಬೆರಳಣಿಕೆಯಷ್ಟರಲ್ಲಿ ಮಾತ್ರ. ಇದು ಬಿಬಿಎಂಪಿ ಸ್ಪಷ್ಟವಾಗಿ "ಸೆಲೆಕ್ಟಿವ್ ಅಪ್ರೋಚ್" ಪಾಲಿಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿ ಪಾಲಿಕೆ ಸುಮ್ಮನಾಗಿದೆ. ಅದು ತೆರವು ಕಾರ್ಯಕ್ಕೆ ಮುಂದಾಗಿರುವುದು ಕೆಲವೇ ಕೆಲವು ವ್ಯಕ್ತಿಗಳ ವಿರುದ್ಧ, ಅವರು ಯಾರೂ ಆರ್ಥಿಕವಾಗಿ ಶಕ್ತಿವಂತರಲ್ಲ, ಬಡವರು. ಹಾಗಾಗಿ ಸುಮ್ಮನೆ ನಾಮಕಾವಸ್ತೆಗೆ ಬಿಬಿಎಂಪಿ ತೆರವು ಕಾರ್ಯ ಕೈಗೊಳ್ಳುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿತು.
ಬೆಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅಭಿವೃದ್ದಿ ಹೊಂದುತ್ತಿರುವ ನಗರವಾಗಿದ್ದು, ಇಲ್ಲಿ ಕಟ್ಟಡಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿರುತ್ತದೆ. ಅವುಗಳನ್ನು ರಾತ್ರೋರಾತ್ರಿ ನಿಲ್ಲಿಸಲಾಗದು. ಅವುಗಳ ಮೇಲ್ವಿಚಾರಣೆಗೆ ನಿರಂತರ ಮತ್ತು ಸಮಗ್ರ ಕ್ರಮ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಬಿಬಿಎಂಪಿ, ಸರ್ಕಾರ ಸೇರಿ ಎಲ್ಲ ಜವಾಬ್ದಾರಸ್ಥರು ಸೇರಿ ಕ್ರಮ ಕೈಗೊಳ್ಳಬೇಕೆಂಬುದು ಕೋರ್ಟ್ ನಿರೀಕ್ಷೆಯಾಗಿದೆ ಎಂದು ಹೇಳಿತು.
ಹೈಕೋರ್ಟ್‌ನ ಹಿಂದಿನ ಆದೇಶಗಳ ಅನುಷ್ಠಾನದ ವಿಚಾರದಲ್ಲಿ ಏನೂ ಪ್ರಗತಿ ಆಗದಿರುವುದನ್ನು ಹಾಗೂ ಬಿಬಿಎಂಪಿ ಸುಮ್ಮನೆ ಕಾಟಾಚಾರಕ್ಕೆ ಅನಧಿಕೃತ ಕಟ್ಟಡಗಳ ತೆರವು ಕೈಗೊಂಡಿರುವ ಕುರಿತು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ನ್ಯಾಯವಾದಿ ಪ್ರಮೋದ್ ಕಟಾವಿ ಅವರು ವರದಿಯನ್ನು ಸಲ್ಲಿಸಿದರು.
ಅನಧಿಕೃತ ಕಟ್ಟಡಗಳ ವಿಚಾರವನ್ನು ಸಮಗ್ರ ರೀತಿಯಲ್ಲಿ ನೋಡಬೇಕಿದೆ, ಎಲ್ಲ ಬಾಧ್ಯಸ್ಥರು ಜಂಟಿಯಾಗಿ ಸೇರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಒಂದೊಂದು ಸಂಸ್ಥೆಗಳು ಒಂದೊಂದು ದಿಕ್ಕಿಗೆ ಹೋದರೆ ಕೆಲಸ ಆಗದು. ಅದಕ್ಕಾಗಿ ಒಂದು ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕಿದೆ. ಈವರೆಗಿನ ಪ್ರಗತಿ ತೃಪ್ತಿ ತಂದಿಲ್ಲ. ಪ್ರಗತಿ ಕೇವಲ ಕಾಗದದಲ್ಲೇ ಉಳಿದಿದೆ ಎಂದು ನ್ಯಾಯಪೀಠ ಹೇಳಿತು.
ಕೊನೆಗೆ ಬಿಬಿಎಂಪಿ, ಸರ್ಕಾರ ಸೇರಿ ಎಲ್ಲ ಸಂಬಂಧಿಸಿದ ಸಂಸ್ಥೆಗಳು ಸಭೆ ನಡೆಸಿ ಮೂರು ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಬೇಕು. ಜೊತೆಗೆ ಹಿಂದಿನ ಆದೇಶಗಳ ಅನುಪಾಲನಾ ವರದಿಯನ್ನೂ ಸಹ ಸಲ್ಲಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.
2019ರ ನವೆಂಬರ್ 25ರಂದು ಹೈಕೋರ್ಟ್ ವಿಭಾಗೀಯಪೀಠ ವಿವರವಾದ ಸರಣಿ ನಿರ್ದೇಶನಗಳನ್ನು ಬಿಬಿಎಂಪಿ ಮತ್ತು ಸರ್ಕಾರಕ್ಕೆ ನೀಡಿದೆ. ಅದರಲ್ಲಿ ಬಿಬಿಎಂಪಿ ಹಂತ ಹಂತವಾಗಿ ಅನಧಿಕೃತ ಕಟ್ಟಡಗಳ ಸರ್ವೆ ಮಾಡಬೇಕು ಮತ್ತು ಅವುಗಳ ತೆರವು ಕಾರ್ಯಾಚರಣೆಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂಬುದು ಪ್ರಮುಖವಾದುದು.
ಅಲ್ಲದೆ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಸರ್ಕಾರ ಪಾಲಿಕೆಗೆ ಅಗತ್ಯ ಯಂತ್ರೋಪಕರಣ ಹಾಗೂ ಮಾವನ ಸಂಪನ್ಮೂಲ ಒದಗಿಸಬೇಕು. ಈ ಕುರಿತು ಪಾಲಿಕೆ ಸರ್ಕಾರಕ್ಕೆ ಸಮಗ್ರವಾದ ಪ್ರಸ್ತಾವವನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.












Click it and Unblock the Notifications