ಅಕ್ಷರಶಃ ಕೆಸರುಗದ್ದೆಯಾಗಿರುವ ನಾಯಂಡಹಳ್ಳಿ ಜಂಕ್ಷನ್
ಬೆಂಗಳೂರು, ಜೂ. 6 : ಮೈಸೂರು ರಸ್ತೆಯಲ್ಲಿ ಓಡಾಡುವ ವೈಭವದ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ. ಅದರಲ್ಲೂ ನಾಯಂಡಹಳ್ಳಿ ಜಂಕ್ಷನ್ ಮತ್ತು ರಾಜರಾಜೇಶ್ವರಿ ಹೆಬ್ಬಾಗಿಲು ಬಳಿಯಿರುವ 'ಅಂತಾರಾಷ್ಟ್ರೀಯ' ಮಟ್ಟದ ರಸ್ತೆಗಳು ಬೆಂಗಳೂರಿನ ಘನತೆಗೆ ಕಿರೀಟವಿಟ್ಟಂತಿವೆ! ಅತ್ತ ಕಡೆ ಓಡಾಡಿರದಿದ್ದರೆ ಒಂದು ಬಾರಿ ಹೋಗಿಬನ್ನಿ. ಪ್ರಯಾಣ ಸುಖಕರವಾಗಿರಲಿ!
ಇದು ವಂಗ್ಯದ ಮಾತಾದರೆ, ವಸ್ತುಸ್ಥಿತಿಯ ಬಗ್ಗೆ ಒಮ್ಮೆ ಕಣ್ಣಾಡಿಸಿಬಿಡೋಣ ಬನ್ನಿ. ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ನಾಯಂಡಹಳ್ಳಿ ಜಂಕ್ಷನ್ ಅಕ್ಷರಶಃ ಕೆಸರುಗದ್ದೆಯಾಗಿದ್ದರೆ, ರಾಜರಾಜೇಶ್ವರಿ ಹೆಬ್ಬಾಗಿಲ ಮುಂದಿನ ರಸ್ತೆ ಹಲವಾರು ವರ್ಷಗಳಿಂದ ತನ್ನ 'ಯಥಾಸ್ಥಿತಿ'ಯನ್ನು ಕಾಪಾಡಿಕೊಂಡು ಬಂದಿದೆ. ಎಚ್ಚರಿಕೆ : ಮೈಸೂರಿಗೆ ಹೋಗಲು ಬೇರೆ ಯಾವುದಾದರೂ ದಾರಿಯಿದ್ದರೆ ಹುಡುಕಿಕೊಳ್ಳಿ. [ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್]
ಹೊರವರ್ತುಲ ರಸ್ತೆಯನ್ನು ನಾಗರಬಾವಿಗೆ ಸೇರಿಸುವ ಮೇಲು ಸೇತುವೆಯ ನಿರ್ಮಾಣದಿಂದಾಗಿ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಸುಧಾರಿಸುತ್ತದೆ ಎಂಬ ಕಲ್ಪನೆ ಸಂಪೂರ್ಣ ಸುಳ್ಳಾಗಿದೆ. ಟ್ರಾಫಿಕ್ ಸಿಗ್ನಲ್ ಗಳಿಲ್ಲದೆ ಉಸಿರುಗಟ್ಟಿದಂತಾಗಿರುವ ಈ ರಸ್ತೆಯ ಮೇಲೆ ಶುಕ್ರವಾರ ಓಡಾಡುವುದೇ ದುಸ್ತರವಾದಂತಾಗಿದೆ. ಅದು ಹೇಗಾಯಿತು ಮುಂದೆ ಓದಿರಿ. [ಕಿತ್ತುಹೋದ ರಸ್ತೆಗೆ ಮತ್ತೊಂದು]

ರಸ್ತೆಪಕ್ಕದ ಗುಡ್ಡದಿಂದ ಹರಿದುಬಂದ ಮಣ್ಣು
ಅದ್ಯಾವ ಉದ್ದೇಶದಿಂದ ಮಣ್ಣನ್ನು ಗುಡ್ಡೆಹಾಕಿ ಗುಡ್ಡ ಮಾಡಲಾಗಿದೆಯೇ ಪರಮಾತ್ಮನೇ ಬಲ್ಲ. ವೃಷಭಾವತಿ ಕಾಲುವೆಯ ಬದಿಯಿರುವ ಮಣ್ಣು ಮಳೆಯಿಂದಾಗಿ ರಿಂಗ್ ರೋಡ್ ರಸ್ತೆಯಲ್ಲೆಲ್ಲ ಹರಿದುಬಂದು ರಂಪಾಟ ಎಬ್ಬಿಸಿದೆ.

ದ್ವಿಚಕ್ರ ವಾಹನ ಚಾಲಕರಿಗೆ ಸರ್ಕಸ್
ನಾಲ್ಕು ಚಕ್ರದ ವಾಹನಗಳೇನೋ ಹಾಗೂಹೀಗೂ ಸಾಗಿಬಿಡುತ್ತವೆ. ಸವಾಲಿರುವುದು ದ್ವಿಚಕ್ರ ವಾಹನ ಚಾಲಕರಿಗೆ. ಆ ಕೊಚ್ಚೆಯಲ್ಲಿ ವಾಹನ ಸ್ಕಿಡ್ ಆಗದೆ ಸಾಗಿಬಂದರೆ ಅದೇ ಪುಣ್ಯ.

ಯದ್ವಾತದ್ವಾ ಟ್ರಾಫಿಕ್ ಜಾಮ್
ಮೊದಲೇ ಸಿಗ್ನಲ್ ದೀಪಗಳಿಲ್ಲ ನಾಯಂಡಹಳ್ಳಿ ಜಂಕ್ಷನ್ ನಲ್ಲಿ. ಜೊತೆಗೆ ಈ ಕೊಚ್ಚೆಯಿಂದಾಗಿ ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಮುಂಗಾರು ಶುರುವಾಗಿ ಬಿಟ್ಟರೆ ದೇವರೇ ಗತಿ
ಈಗಲೇ ಹೀಗೆ. ಇನ್ನು ಮುಂಗಾರು ಶುರುವಾಗಿಬಿಟ್ಟರಂತೂ ಆ ದೇವರೇ ಗತಿ. ವೃಷಭಾವತಿ ಚರಂಡಿಯಲ್ಲಿಯೂ ಸಾಕಷ್ಟು ಹೂಳು ತುಂಬಿಕೊಂಡಿದೆ. ಇನ್ನು ಪ್ರವಾಹೋಪಾದಿಯಲ್ಲಿ ಚರಂಡಿಗೆ ನೀರು ಹರಿದುಬಂದರೆ ನಾಯಂಡಹಳ್ಳಿ ಜಂಕ್ಷನ್ ಸಂಪೂರ್ಣ ಕ್ಲೋಸ್.

ರಾಜರಾಜೇಶ್ವರಿ ಗೇಟ್ ಬಳಿ ಒಮ್ಮೆ ಮಾಡಿ ಸವಾರಿ
ಈ ರಸ್ತೆಗೆ ಡಾಂಬರು ಬಳಿದು ಅದೆಷ್ಟು ವರ್ಷಗಳಾದವೋ? ಕಿರಿದಾದ ರಸ್ತೆ, ಪಕ್ಕದಲ್ಲೇ ಮಾಲ್, ವಿಪರೀತ ವಾಹನದಟ್ಟಣೆ, ಅಡ್ಡಾದಿಡ್ಡಿ ಚಲಿಸುವ ಬಸ್ಸುಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಿತ್ತುಹೋಗಿರುವ ರಸ್ತೆ ಇಲ್ಲಿ ವಾಹನ ಸಂಚಾರಿಗಳಿಗೆ ನರಕವನ್ನೇ ಸೃಷ್ಟಿಸಿವೆ.











Click it and Unblock the Notifications