ಬೆಂಗಳೂರಲ್ಲಿ ಧಾರಾಕಾರ ಮಳೆ: ಅಧಿಕಾರಿಗಳಿಗೆ ಬಿಬಿಎಂಪಿ ಕಮಿಷನರ್ ವಾರ್ನಿಂಗ್
Heavy rains in Bengaluru: ಬೆಂಗಳೂರಲ್ಲಿ ಧಾರಾಕಾರ ಮಳೆಯಿಂದ ಭಾರೀ ಅನಾಹುತವೇ ಸೃಷ್ಟಿಯಾಗಿದೆ. ಇದೀಗ ಮಳೆಯ ನಂತರ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಯ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದಲೂ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತರು ಪಾಲಿಕೆಯ ಅಧಿಕಾರಿಗಳಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಯಲಹಂಕ ವಲಯ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಕೆಲವು ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ತುರ್ತು ಕ್ರಮಗಳನ್ನು ಕೈಗೊಂಡು ಸಮಸ್ಯೆ ಪರಿಹರಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಯಲಹಂಕ ವಲಯ ವ್ಯಾಪ್ತಿಯಲ್ಲಿ ಮಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಯಲಹಂಕ ವಲಯ ವ್ಯಾಪ್ತಿಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅವರು ಮಾತನಾಡಿದ್ದು, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಭಾರೀ ಮಳೆಯಿಂದಾಗಿ ಜಾಲಾವೃತವಾಗಿರುವ ಪ್ರದೇಶಗಳಲ್ಲಿ ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚು ಸಮಸ್ಯೆಯಿರುವ ಕಡೆ ನಿವಾಸಿಗಳನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು ಮಳೆಯಿಂದ ಸಮಸ್ಯೆ ಆಗಿರುವ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಮಳೆಯಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಕುಡಿಯುವ ನೀರು, ಹಾಲು, ಬಿಸ್ಕೆಟ್ ಹಾಗೂ ಊಟದ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ನೀರು ಹೊರ ಹಾಕಲು ಸೂಚನೆ: ಬೆಂಗಳೂರಿನ ಹಲವು ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ನೀರು ನಿಲ್ಲುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರಪ್ಪ ಲೇವಟ್ ಹಾಗೂ ಟಾಟಾ ನಗರ ಸೇರಿದಂತೆ ಹೆಚ್ಚು ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ತುರ್ತು ಕ್ರಮ ಅನುಸರಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 10-15 ಎಚ್.ಪಿ ಪಂಪ್‌ಗಳು ಹಾಗೂ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಿಕೊಂಡು ನೀರನ್ನು ಹೊರ ಹಾಕಲು ಕಮಿಷನರ್ ಹೇಳಿದ್ದಾರೆ. ಅಲ್ಲದೇ ಬೆಂಗಳೂರಿನ ಪ್ರಮುಖ ರಾಜಕಾಲುವೆಗಳ ಸ್ಥಳಗಳಲ್ಲಿ ಜೆಸಿಬಿಗಳನ್ನು ನಿಲ್ಲಿಸುವಂತೆ ಹಾಗೂ ರಾಜಕಾಲುವೆಗಳನ್ನು ಸಂಪೂರ್ಣ ಸ್ವಚ್ಛ ಮಾಡಿ ಇರುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಿ ಎಂದು ಕಮಿಷನರ್ ಅವರು ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.
ವಿವಿಧ ಇಲಾಖೆಗಳ ನಿಯೋಜನೆ: ಇನ್ನು ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿ, ಜಲಾವೃತವಾಗಿರುವ ಪ್ರದೇಶಗಳಲ್ಲಿ ಬಿಬಿಎಂಪಿಯ ಅಧಿಕಾರಿಗಳು, ಬೆಸ್ಕಾಂ, ಪೊಲೀಸ್, ಅಗ್ನಿಶಾಮಕ, ಎನ್.ಡಿ.ಆರ್.ಎಫ್, ಎಸ್,ಡಿ.ಆರ್.ಎಫ್ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಇರಬೇಕು ಎಂದು ಸೂಚನೆ ನೀಡಲಾಗಿದೆ. ಮಳೆ ನೀರು ನಿಂತು ಸಮಸ್ಯೆ ಆಗಿರುವ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ನಿಂದ ಫ್ಲಡ್ ಲೈಟ್ಸ್ ವ್ಯವಸ್ಥೆ ಮಾಡಿಕೊಂಡು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ನೀರನ್ನು ಹೊರ ಹಾಕಲು ತಿಳಿಸಲಾಗಿದೆ. ನಗರದ ಕೆಲ ಪ್ರದೇಶಗಳಲ್ಲಿ ಮಂಗಳವಾರ ಸಂಜೆಯೂ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದಲ್ಲಿರುವ ಮಳೆಗಳ ನಿವಾಸಿಗಳಿಗೆ ಮುಂಚಿತವಾಗಿಯೇ ಸುರಕ್ಷಿತವಾಗಿರಲು ಮಾಹಿತಿ ತಿಳಿಸಬೇಕು. ತುಂಬಿರುವ ಕೆರೆಗಳು ಹಾಗೂ ಕೆಳಭಾಗದ ಕೆರೆಗಳಲ್ಲಿ ನೀರು ಹೊರಕ್ಕೆ ಹೋಗುವಂತೆ ನೋಡಿಕೊಳ್ಳಬೇಕು. ಈ ಪ್ರದೇಶಗಳಲ್ಲಿ ಜಲಾವೃತವಾಗದಂತೆ ಮುಂಜಾಗ್ರತಾ ಕ್ರಮ ತಪ್ಪದೇ ತೆಗೆದುಕೊಳ್ಳಿ ಎಂದಿದ್ದಾರೆ.
ಹೆಚ್ಚುವರಿ ಐ.ಎ.ಎಸ್ ಮತ್ತು ಕೆ.ಎ.ಎಸ್ ಅಧಿಕಾರಿಗಳ ನಿಯೋಜನೆ: ಬೆಂಗಳೂರಿನ ಯಲಹಂಕ ವಲಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸುವುದಕ್ಕೆ ಪಾಲಿಕೆ ಇತರೆ ವಲಯಗಳಿಂದಲೂ ಇಲ್ಲಿಗೆ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಐ.ಎ.ಎಸ್, ಕೆ.ಎ.ಎಸ್ ಅಧಿಕಾರಿಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಅಧಿಕಾರಿಗಳಿಗೆ ಒಂದೊಂದು ಪ್ರಮುಖ ಜವಾಬ್ದಾರಿಯನ್ನು ನೀಡಲಾಗಿದೆ. ಈ ಅಧಿಕಾರಿಗಳು ಇಲ್ಲಿನ ಸ್ಥಳಿಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications