ಕರ್ನಾಟಕದಲ್ಲಿ ಮೂರು ದಿನ ಮಳೆ ಸಾಧ್ಯತೆ
ಬೆಂಗಳೂರು, ಅ,22 : ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಳೆ ಸುರಿದಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಮತ್ತು ಹಿಂಗಾರು ಆಗಮನದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ಮತ್ತು ಶ್ರೀಲಂಕಾದ ಮಧ್ಯಭಾಗದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸೋಮವಾರ ಮಳೆ ಪ್ರಾರಂಭವಾಗಿದ್ದು, ಇನ್ನೂ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ.
ವಾಯುಭಾರ ಕುಸಿತದಿಂದ ಗಾಳಿಯ ವೇಗ ಹೆಚ್ಚಾಗಿದ್ದು, ಬೀಸುವ ಗಾಳಿ ತನ್ನೊಂದಿಗೆ ಮೋಡಗಳನ್ನೂ ತರುತ್ತದೆ. ಆಗ ವಾತಾವರಣದಲ್ಲಿ ತೇವಾಂಶ ಇರುವ ಕಡೆಗಳಲ್ಲೆಲ್ಲಾ ಮಳೆಯಾಗಲಿದೆ. ತಮಿಳುನಾಡಿಗೆ ಹೊಂದಿಕೊಂಡ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ.
ಆದ್ದರಿಂದ, ತಮಿಳುನಾಡಿಗೆ ಹತ್ತಿರ ಇರುವ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.ಹಿಂಗಾರು ಕೂಡಾ ಪ್ರವೇಶವಾಗಿದ್ದು, ಮಳೆ ಸುರಿಯಲು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿ ಸುಮಾರು 20 ದಿನಗಳು ಕಳೆದಿವೆ. ಮಳೆಯನ್ನೇ ಎದುರು ನೋಡುತ್ತಿರುವ ರೈತರ ಮೊಗದಲ್ಲಿ ಈ ವಾಯುಭಾರ ಕುಸಿತ ಹರ್ಷ ತಂದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬೆಳೆಗಳಿಗೆ ಮಳೆ ಅವಶ್ಯಕತೆ ಇತ್ತು. ಇಂತಹ ಸಂದರ್ಭದಲ್ಲಿ ಮಳೆಯ ಆಗಮನವಾಗಿದೆ ಎಂದು ತಿಳಿಸಿದ್ದಾರೆ. (ನವೆಂಬರ್ 1ರ ತನಕ ಹಿಂಗಾರು ಮಳೆ ಅಬ್ಬರ)












Click it and Unblock the Notifications