Bengaluru Rains: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ; ಅಲ್ಲಲ್ಲಿ ವಿದ್ಯುತ್ ಕಡಿತ
ಬೆಂಗಳೂರು, ಏಪ್ರಿಲ್ 13: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ವೇಳೆಗೆ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಕಳೆದ ಎರಡು ತಿಂಗಳಿನಿಂದ ನೆತ್ತಿ ಸುಡುವಂತಹ ಬಿಸಿಲಿಗೆ ಕಾದ ಹಂಚಾಗಿದ್ದ ನಗರದಲ್ಲಿ ವರುಣ ತಂಪೆರೆದಿದ್ದಾನೆ.
ಬೆಂಗಳೂರಿನ ಜಯನಗರ, ಸೌತ್ ಎಂಡ್ ಸರ್ಕಲ್, ಜೆ.ಪಿ. ನಗರ, ಬನಶಂಕರಿ, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಮೈಸೂರು ರಸ್ತೆ, ಕತ್ರಿಗುಪ್ಪೆ, ಪದ್ಮನಾಭನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ.

ಬುಧವಾರ ಸುರಿದ ಮಳೆಗೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ಮನೆ ಸೇರಬೇಕೆಂದುಕೊಂಡವರಿಗೆ ವಾಹನ ದಟ್ಟಣೆ ಎದುರಾಗಿದೆ. ಬೈಕ್ ಸವಾರರು ಅಲ್ಲಲ್ಲಿ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಮಳೆಯಿಂದಾಗಿ ಶಿವಾಜಿನಗರದಲ್ಲಿ ಎಲ್ಲೆಡೆ ವಿದ್ಯುತ್ ಕಡಿತವಾಗಿದೆ.
ಸಂಜೆ ವೇಳೆಗೆ ಒಮ್ಮೆಲೆ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ ಉಂಟಾಗಿದೆ. ಶಾಂತಿನಗರ, ಕೋರಮಂಗಲ, ಅಡುಗೋಡಿ, ಮೆಜೆಸ್ಟಿಕ್, ಜೆ.ಸಿ. ನಗರ, ಜೆ.ಪಿ. ನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದೆ.
ನಗರದಲ್ಲಿ ಬಿಸಲಿನ ತಾಪಮಾನ ಏರಿಕೆ ಹಿನ್ನೆಲೆ ಬೇಸತ್ತಿದ್ದ ಜನರು ಬೆಂಗಳೂರಿನಲ್ಲಿ ಮಳೆ ಕಂಡು ಸಂತಸಗೊಂಡಿದ್ದಾರೆ. ಆದರೆ ಜೋರಾಗಿ ಸುರಿಯುತ್ತಿರುವ ಗಾಳಿ ಮಳೆಗೆ ವಾಹನ ಸವಾರರು ಅಸ್ತವ್ಯಸ್ತರಾಗಿದ್ದಾರೆ. ಕೆಲವೆಡೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ತೊಂದರೆ ಉಂಟಾಗಿದೆ.

ಆನೇಕಲ್‌ನಲ್ಲಿಯೂ ಗಾಳಿ ಸಹಿತ ಗುಡುಗು ಮಳೆ ಕಂಡುಬಂದಿದೆ. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರದಲ್ಲಿ ಗಾಳಿ ಸಹಿತ ಮಳೆಯಾಗಿದೆ. ಅನೀರಿಕ್ಷಿತ ಮಳೆಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
Recommended Video
ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಕೂಡ ಧಾರಾಕಾರ ಮಳೆ ಸುರಿದಿದೆ. ಕಳೆದ ಅರ್ಧ ಗಂಟೆಯಿಂದ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಮಳೆಗೆ ಜನರು ಸಂತಸಗೊಂಡಿದ್ದಾರೆ ಬಿಸಿಲು ತಾಪಮಾನ ಹೆಚ್ಚಳದಿಂದ ಬಿಸಿಯಾಗಿದ್ದ ಭೂಮಿಗೆ ವರುಣ ತಂಪೆರದಿದ್ದಾನೆ. ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.












Click it and Unblock the Notifications