ವಿಡಿಯೋ; ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ, ರಸ್ತೆಗಳು ಜಲಾವೃತ
ಬೆಂಗಳೂರು, ಅಕ್ಟೋಬರ್ 11; ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ. ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕ ನಗರದಲ್ಲಿ ಮಳೆಯಾಗಿತ್ತು. ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ 6 ಗಂಟೆಯ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ನಗರದಲ್ಲಿ ಭಾರೀ ಮಳೆಯಾಗಿದೆ.
ಹೆಬ್ಬಾಳ, ಮಲ್ಲೇಶ್ವರ, ರಾಜಾಜಿನಗರ, ಮೆಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಜಯನಗರ, ಹನುಮಂತನನಗರ, ವಿದ್ಯಾಪೀಠ ವೃತ್ತ, ಆರ್. ಆರ್. ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ.

ರಸ್ತೆಗಳು ಜಲಾವೃತವಾಗಿದ್ದು ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವಾಹನ ಸವಾರರು ಪರದಾಡಿದರು. ಸಂಜೆ ಸುರಿದ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿದೆ ಎಂದು ಶಂಕಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಕ್ಯಾಬ್‌ಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಳೆಯಿಂದ ಸಮಸ್ಯೆಯಾಗಿರುವ ಕುರಿತು ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.
ದಸರಾ ಸಂದರ್ಭದಲ್ಲಿ ಊರಿಗೆ ಹೊರಟ ಜನರು ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿ ಮಳೆಯಿಂದ ಉಂಟಾದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಅಕ್ಟೋಬರ್ 15ರ ತನಕ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿತ್ತು.
ಶನಿವಾರ ಬೆಳಗ್ಗೆ ಮತ್ತು ಭಾನುವಾರ ಸಂಜೆ ಸಹ ನಗರದಲ್ಲಿ ಭಾರೀ ಮಳೆಯಾಗಿತ್ತು. ಕಳೆದ ವಾರ ಶಾಹೀನ್ ಚಂಡಮಾರತದ ಪ್ರಭಾವದಿಂದಾಗಿ ನಗರದಲ್ಲಿ ಮಳೆಯಾಗಿತ್ತು.











Click it and Unblock the Notifications