Bengaluru Weather: ನಗರದ ಅನೇಕ ಕಡೆಗಳಲ್ಲಿ ಜೋರು ಮಳೆ, ಸಂಚಾರ ಅಸ್ತವ್ಯಸ್ತ: ಮುನ್ಸೂಚನೆ ಇಲ್ಲಿದೆ
ಬೆಂಗಳೂರು, ಸೆಪ್ಟಂಬರ್ 06: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರಬಿಸಲಿನ ಮಧ್ಯ ಮಳೆರಾಯ ಧರೆಗೆ ತಂಪೆರೆದಿದ್ದಾನೆ. ಇಂದು ಸಂಜೆ 4 ಗಂಟೆ ನಂತರ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ವ್ಯಾಪಕ ಮಳೆ ದಾಖಲಾಯಿತು. ಸಮುದ್ರ ಮೇಲ್ಮೈನಲ್ಲಿ ಉಂಟಾದ ನಿರಂತರ ಬದಲಾವಣೆಗಳಿಂದ ಹೀಗೆ ಮುಂಗಾರು ಮಳೆ ರಾಜಧಾನಿಯಲ್ಲಿ ಸಕ್ರಿಯಗೊಂಡಿದೆ.
ಒಂದು ವಾರದಿಂದ ನಗರದಲ್ಲಿ ಸಂಜೆ ಜಿಟಿ ಜಿಟಿ ಮಳೆ, ಕೆಲವು ಬಡಾವಣೆಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಇಂದು ಸಹ ಮುಂದುವರಿಯಿತು. ಸಂಜೆ 4.30 ಗಂಟೆ ಹೊತ್ತಿಗೆ ಬಿಟಿಎಂ, ಕೋರಮಂಗಲ, ಕೆಂಗೇರಿ, ಬೆಳ್ಳಂದೂರು, ಸರ್ಜಾಪುರ ರಸ್ತೆ, ದೊರೆಸಾನಿ ಪಾಳ್ಯ, ಲಾಲ್ ಬಾಗ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹಂಪಿನಗರ, ಮೆಜೆಸ್ಟಿಕ್ ಸುತ್ತಮುತ್ತ, ಹೆಬ್ಬಾಳ, ವಿದ್ಯಾರಣ್ಯಪುರ, ಯಶವಂತಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆ ಆಗಿದೆ.

ಆರಂಭದಲ್ಲಿ ಕೆಲ ಕಾಲ ಜೋರಾಗಿ ಬಂದ ಈ ಮಳೆಯು ನಂತರ ಸಣ್ಣ ಪ್ರಯಾಣದಲ್ಲಿ ನಿರಂತರವಾಗಿ ಮುಂದುವರಿಯಿತು. ಬೆಳಗ್ಗೆಯಿಂದ ಇದ್ದ ಬಿಸಿಲು ದಿಢೀರ್ ಮಾಯವಾಯಿತು. ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಈ ಮಳೆ ಇಂದು ತಡರಾತ್ರಿವರೆಗೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಈ ಭಾಗದಲ್ಲಿ ಜೋರು ಮಳೆ ದಾಖಲು
ಇಂದು ಸಂಜೆ 5.30 ಗಂಟೆವರೆಗಿನ KSNDMC ಮಾಹಿತಿ ಪ್ರಕಾರ, ಬೊಮ್ಮನಹಳ್ಳಿಯಲ್ಲಿ 36, ರಾಜರಾಜೇಶ್ವರಿ ನಗರ 35, ವಿದ್ಯಾಪೀಠ 34 ಮಿ.ಮೀ., ನಾಯಂಡಹಳ್ಳಿ 31 ಮಿ.ಮೀ., ಆರ್‌ಆರ್ ನಗರ 02 29 ಮಿ.ಮೀ., ಹೆಮ್ಮಿಗೆಪುರ 24 ಮಿ.ಮೀ., ಬಿಟಿಎಂ ಬಡಾವಣೆ 25.50 ಮಿ.ಮೀ., ಬಿಳೆಕಹಳ್ಳಿ 23.50 ಮಿ.ಮೀ., ದೊರೆಸಾನಿಪಾಳ್ಯ 20 ಮಿ.ಮೀ., ಪಟ್ಟಾಭಿರಾಮನಗರ 18.50 ಮಿ.ಮೀ., ಕೋರಮಂಗಲ 18 ಮಿ.ಮೀ., ವಿ.ನಾಗೇನಹಳ್ಳಿ 15 ಮಿ.ಮೀ., ಎಚ್‌ಎಸ್‌ಆರ್ ಬಡಾವಣೆ 12.50ಮಿ.ಮೀ. ನಷ್ಟು ಮಳೆ ದಾಖಲಾಗಿದೆ.
ಉಳಿದಂತೆ ಶೇಷಾದ್ರಿಪುರಂ, ರಿಚ್ಮಂಡ್ ವೃತ್ತ, ಡೈರಿ ಸರ್ಕಲ್, ಜಯನಗರ, ಚಾಮರಾಜಪೇಟೆ ಸೇರಿದಂತೆ ಇತರ ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ದಾಖಲಾಗಿದೆ. ತಂಪು ವಾತಾವರಣ, ಚಳಿ ಗಾಳಿ ಕಂಡು ಬಂದಿದೆ. ಮಳೆಗೆ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ನಿವಾಸಿಗಳಿಗೆ ಕಿರಿ ಕಿರಿ ಉಂಟಾಗಿದೆ.
ನಗರ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಸೆಪ್ಟಂಬರ್ 12ರವರೆಗೆ ಇದೇ ರೀತಿ ಹಗುರ ಮಳೆ, ಆಗಾಗ ಜೋರು ಮಳೆ ಕಂಡು ಬರಲಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುಂದಿನ ಒಂದು ವಾರದ ಮಳೆ ಮುನ್ಸೂಚನೆ ನೀಡಿದೆ.












Click it and Unblock the Notifications