Bengaluru Rain: ಭಾರಿ ಮಳೆಯಿಂದಾಗಿ ವಾರದ ಮೊದಲ ದಿನವೇ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್!
ಬೆಂಗಳೂರಿನಲ್ಲಿ ಮತ್ತೆ ಮಳೆ ಬಿರುಸು ಪಡೆದುಕೊಂಡಿದೆ. ವಾರದ ಮೊದಲ ದಿನವೇ ನಗರದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಸಂಜೆ ವೇಳೆಗೆ ಮಳೆ ಹೆಚ್ಚಾದ ಕಾರಣ ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಗರದ ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಉತ್ತರಹಳ್ಳಿ, ಸದಾಶಿವನಗರ, ಶೇಷಾದ್ರಿಪುರ, ಅಂಜನಾಪುರದಲ್ಲಿ ಭಾರಿ ಮಳೆಯಾಗಿದೆ.

ಕಂಟೋನ್ಮೆಂಟ್, ದೊಮ್ಮಲೂರು, ಇಂದಿರಾನಗರ, ಮಲ್ಲೇಶ್ವರ, ಶಿವಾಜಿನಗರ, ಹಲಸೂರು, ಕಲ್ಯಾಣ್ ನಗರ, ಹೆಬ್ಬಾಲ, ಜಾಲಹಳ್ಳಿ, ಮತ್ತಿಕೆರೆ, ಪೀಣ್ಯ, ಯಶವಂತಪುರ, ಬನಶಂಕರಿ, ಕೆಂಗೇರಿ, ಬಸವನಗುಡಿ, ನಂದಿನಿ ಲೇಔಟ್, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಕೆಐಎಲ್ ವಿಮಾನ ನಿಲ್ದಾಣ, ವಿಜಯನಗರ, ವಿದ್ಯಾರಣ್ಯಪುರದಲ್ಲಿ ಕೂಡ ಉತ್ತಮ ಮಳೆಯಾಗಿದೆ.
ಹಲವು ಕಡೆ ಟ್ರಾಫಿಕ್ ಜಾಮ್
ಸಂಜೆ ಸುರಿದ ಮಳೆಗೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಚೇರಿಗಳಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಉದ್ಯೋಗಿಗಳು ಪರದಾಡಿದರು. ಅನೇಕ ಕಡೆ ನಿಧಾನಗತಿಯ ವಾಹನ ಸಂಚಾರ ಇದ್ದರೆ, ಕೆಲವು ಅಂಡರ್ ಪಾಸ್‌ಗಳನ್ನು ಮುಚ್ಚಲಾಗಿತ್ತು.
ಸಿಬಿಐ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರ ಉಂಟಾಗಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವ ಹೆಬ್ಬಾಳ ಮೇಲ್ಸೇತುವೆ ಮೇಲೆ ಕೂಡ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.
ಚಕ್ರವರ್ತಿ ಲೇಔಟ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಜಟಕಾ ಸ್ಟ್ಯಾಂಡ್ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ್ ಹೋಟೆಲ್ ಹತ್ತಿರ ಮಳೆ ನೀರು ನಿಂತಿದ್ದರಿಂದ ರಾಮಮೂರ್ತಿ ನಗರ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಸಂಚಾರ ಪೊಲೀಸರು ನೀರು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು.
ಮಾರ್ಕೆಟ್ ಫ್ಲೈಓವರ್ ಡೌನ್ ರಾಂಪ್ ಹತ್ತಿರ ನೀರು ನಿಂತಿರುವುದರಿಂದ ಎಸ್‌ಜೆಪಿ ಜಂಕ್ಷನ್ ಕಡೆಗೆ ನಿಧಾನ ಸಂಚಾರ ಉಂಟಾಗಿತ್ತು. ವಿಂಡ್ಸರ್ ಮ್ಯಾನರ್ ಸೇತುವೆ ಹತ್ತಿರ, ಕ್ವೀನ್ಸ್ ರಸ್ತೆ, ಬಿನ್ನಿ ಮಿಲ್ ಯಿಂದ ಹುಣಸೇಮರದ ಕಡೆಗೆ ಸಾಗುವ ಮಾರ್ಗದಲ್ಲಿ ನೀರು ನಿಂತು ಸಮಸ್ಯೆಯಾಗಿತ್ತು.
ಆರ್.ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಾರಿ ಮುಖ್ಯರಸ್ತೆಯ ಸಂಜಯನಗರ ಕ್ರಾಸ್ ಬಳಿ ನೀರು ನಿಂತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.
ಮಳೆಯ ನಡುವೆಯೂ ಬೆಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರವನ್ನು ಸುಗಮವಾಗಿಸಲು ಕೆಲಸ ಮಾಡುತ್ತಿದ್ದಾರೆ. ರಸ್ತೆಯಲ್ಲಿ ನಿಂತಿರುವ ನೀರು ಸರಾಗವಾಗಿ ಹರಿಯುವಂತೆ ಮಾಡಲು ತಾವೇ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications