BMTC: ಮಹಿಳೆಯರಿಗೆ ಮೀಸಲಾದ ಸೀಟ್‌ನಲ್ಲಿ ಕುಳಿತ ಪುರುಷರಿಗೆ ಬಿತ್ತು ಭಾರೀ ದಂಡ!
ಬೆಂಗಳೂರು, ಜನವರಿ 17: ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್‌ನಲ್ಲಿ ಚಲಿಸುವ ಪ್ರಯಾಣಿಕರಿಗೆ ಸಂಸ್ಥೆ ಮೊದಲಿನಿಂದಲೂ ಒಂದಿಷ್ಟು ನಿಯಮಗಳನ್ನು ಹಾಕಿದೆ. ಈ ನಿಯಮಗಳನ್ನು ಮೀರಿದರೆ ದಂಡ ವಿಧಿಸುವ ಎಚ್ಚರಿಕೆಯನ್ನು ಸಹ ನಿಗಮ ನೀಡಿದೆ. ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರು ಈ ನಿಯಮಗಳ ಬಗ್ಗೆ ಅರಿತುಕೊಂಡಿರಬೇಕು ಇಲ್ಲವಾದರೆ ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ.
ಬಿಎಂಟಿಸಿ ಬಸ್ ಹತ್ತಿದ ಕೂಡಲೇ ಪ್ರಯಾಣಿಕರು ಬಸ್ ನಿರ್ವಾಹಕರಿಂದ ಟಿಕೆಟ್ ಪಡೆದುಕೊಳ್ಳಬೇಕು, ಧೂಮಪಾನ ಮಾಡುವಂತಿಲ್ಲ, ನಿಗದಿಯಾದ ಬಸ್ ನಿಲ್ದಾಣಗಳಲ್ಲೇ ಇಳಿಯಬೇಕು, ಬಸ್‌ನ ಬಾಗಿಲು ಬಳಿ ನಿಲ್ಲುವಂತಿಲ್ಲ, ಹೀಗೆ ಬಿಎಂಟಿಸಿ ಸಂಸ್ಥೆಯಿಂದ ಅನೇಕ ನಿಯಮಗಳಿದ್ದು, ಈ ಪೈಕಿ ನಿಗದಿ ಪಡಿಸಿದ ಆಸನಗಳಲ್ಲೇ ಕುಳಿತುಕೊಳ್ಳಬೇಕು ಎನ್ನುವ ನಿಯಮ ಮುಖ್ಯವಾಗಿದೆ.

ಸಾರಿಗೆ ಬಸ್‌ನಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿಕಲ ಚೇತನರಿಗೆ ಹೀಗೆ ವಿಶೇಷವಾಗಿ ಕೆಲವು ಆಸನಗಳನ್ನು ನಿಗದಿ ಪಡಿಸಲಾಗಿದೆ. ಈ ಸೀಟುಗಳಲ್ಲಿ ಅರ್ಹರನ್ನು ಬಿಟ್ಟು ಬೇರೆಯವರು ಕುಳಿತುಕೊಂಡರೆ ದಂಡ ಕಟ್ಟಬೇಕಾಗುತ್ತದೆ. ಇದೀಗ ಈ ನಿಯಮ ಉಲ್ಲಂಘನೆಯಿಂದಲೇ ಬಿಎಂಟಿಸಿ ನಿಗಮಕ್ಕೆ ಸಾವಿರಾರು ರೂಪಾಯಿ ದಂಡ ಸಂಗ್ರಹವಾಗಿದೆ.
ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು, ಸಂಸ್ಥೆಗೆ ಭಾರೀ ದಂಡದ ಮೊತ್ತ ಸಂಗ್ರವಾಗಿದೆ. ಮಹಿಳಾ ಪ್ರಯಾಣಿಕರ ಆಸನದಲ್ಲಿ ಕುಳಿತ 347 ಪುರುಷ ಪ್ರಯಾಣಿಕರಿಂದ 34,700 ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ.
ಇನ್ನು ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ ಉಚಿತ ಪ್ರಯಾಣಿಸುವ ಮಹಿಳೆಯರು ಆಧಾರ್ ಕಾರ್ಡ್ ಅಥವಾ ಇನ್ನಿತರೆ ಗುರುತಿನ ಚೀಟಿ ತೋರಿಸಿ ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಬೇಕು.

ಆದರೆ ಗುರುತಿನ ಚೀಟಿ ತರಲು ಮರೆತ ಕೆಲವು ಮಹಿಳೆಯರು ಟಿಕೆಟ್ ಪಡೆಯದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಜೊತೆಗೆ ಜನದಟ್ಟಣೆಯಲ್ಲಿ ಕೆಲ ಪುರುಷ ಪ್ರಯಾಣಿಕರು ಕೂಡ ಹಣ ನೀಡಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಬಿಎಂಟಿಸಿ ಅಧಿಕಾರಿಗಳು ಫೀಲ್ಡ್‌ಗಿಳಿದಿದ್ದಾರೆ.
ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸಿದ ಪ್ರಯಾಣಿಕರಿಗೆ ಅಧಿಕಾರಿಗಳು ಭಾರೀ ದಂಡ ವಿಧಿಸಿದ್ದಾರೆ. ಡಿಸೆಂಬರ್ 2023ರಲ್ಲಿ 16, 785 ಟ್ರಿಪ್ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 3,502 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 7,02,340 ರೂ. ದಂಡ ವಸೂಲಿ ಮಾಡಿದ್ದಾರೆ. ಇನ್ನು ಸಂಸ್ಥೆಯ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಬಿಎಂಟಿಸಿ ಬಸ್‌ನ ನಿಮಯ ಉಲ್ಲಂಘಿಸಿದ ಆರೋಪದ ಮೇಲೆ ಡಿಸೆಂಬರ್-2023 ರ ತಿಂಗಳಲ್ಲಿ 3,849 ಪ್ರಯಾಣಿಕರಿಂದ ಒಟ್ಟು 7,37,040 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications