ಸಿಎಂ ಕಚೇರಿಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ: ಎಚ್ಡಿಕೆ ಸ್ಪಷ್ಟನೆ
ಬೆಂಗಳೂರು. ಅಕ್ಟೋಬರ್ 15: ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹೊರಗುತ್ತಿಗೆ, ಗುತ್ತಿಗೆ ಆಧಾರ ಹಾಗೂ ನಿಯೋಜನೆ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆದುಬಂದಿದೆ, ಅದರಲ್ಲಿ ಯಾವುದೇ ಹೊಸ ಪದ್ಧತಿ ಅನುಸರಿಸಿಲ್ಲ ಮಾತ್ರವಲ್ಲ ಇದು ಅಕ್ರಮವೂ ಅಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿಗಳು ಕೂಡ ತಮ್ಮ ಕಚೇರಿಯಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ. ಈಗಲೂ ಕೂಡ ಅದೇ ಮುಂದುವರೆದಿದೆ.ಹೀಗಾಗಿ ನಿಯಮ ಬಾಹಿರವಾಗಿ ಯಾವುದೇ ನೇಮಕ ಮಾಡಿಕೊಂಡಿಲ್ಲ ಎಂದು ಹೇಳಿದರು.
ಆರ್‌ಟಿಐ ಕಾರ್ಯಕರ್ತ ಮಾಧ್ಯಮಗಳ ದಾರಿ ತಪ್ಪಿಸಿದ್ದಾರೆ, ನಾನು ಯಾವುದೇ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ, ಜನತಾ ದರ್ಶನಕ್ಕೆ ಬಂದ ಹತ್ತು ಜನರನ್ನು ಮಾತ್ರ ನೇಮಕ ಮಾಡಿಕೊಂಡಿದ್ದೇನೆ, ದುಂದು ವೆಚ್ಚಕ್ಕೆ ಕಡಿವಾಣ ಹಾಕಲ ನಾನು ಬದ್ಧವಾಗಿದ್ದೇನೆ ಎಂದರು.

ಗುತ್ತಿಗೆ ಆಧಾರದ ಮೇಲೆ 189, ಡೆಪ್ಯುಟೇಷನ್ ಮೇಲೆ 56 ಮಂದಿ ಕೆಲಸ ಮಾಡುತ್ತಿದ್ದಾರೆ, ಇದು ಹಿಂದಿನ ಸರ್ಕಾರದಿಂದ ಮಾಡಿಕೊಂಡು ಬಂದಿದ್ದಾರೆ, ಹೊರ ಗುತ್ತಿಗೆ ಆಧಾರದ ಮೇಲೆ ಆರು ಜನ ಕೆಲಸ ಮಾಡುತ್ತಿದ್ದಾರೆ.
ಜನತಾ ದರ್ಶನಕ್ಕೆ ಬಂದವರಲ್ಲಿ ಆರು ಮಂದಿ ಕೆಲಸ ಮಾಡುತ್ತಿದ್ದಾರೆ. 88 ಜನ ಅನ್ಯ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಒಟ್ಟಾಗಿ 250 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ನಾನು ಅಪಾಯಿಂಟ್‌ಮೆಂಟ್ ಕೊಟ್ಟಿಲ್ಲ ಎಂದು ಹೇಳಿದರು.












Click it and Unblock the Notifications