HD Kumaraswamy: ಸುಮಲತಾ ಬಗ್ಗೆ ಟೀಕೆ ಮಾಡುವ ವ್ಯಕ್ತಿತ್ವ ನನ್ನದಲ್ಲ ಎಂದ ಹೆಚ್‌ಡಿ ಕುಮಾರಸ್ವಾಮಿ
ಒಂದೇ ಕುಟುಂಬದ ಅಭಿವೃದ್ಧಿಯಾದ್ರೆ ಸಾಕಾ ಎಂದು ಜೆಡಿಎಸ್ ವಿರುದ್ಧ ಸುಮಲತಾ ನೀಡಿದ್ದ ಹೇಳಿಕೆ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು. "ಅವರಿಷ್ಟ ಅವರು ಅವರ ಹೇಳಿಕೆ ಕೊಟ್ಟಿದ್ದಾರೆ ಅದುಕ್ಕೆ ನಾನು ಯಾಕೆ ಟೀಕೆ ಮಾಡಲಿ, ಅದರ ಅವಶ್ಯಕತೆ ನನಗಿಲ್ಲ. ಅವರ ಬಗ್ಗೆ ಟೀಕೆ ಮಾಡುವಷ್ಟು ವ್ಯಕ್ತಿತ್ವ ಬೆಳೆಸಿಕೊಂಡಿಲ್ಲ" ಎಂದರು.
ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದು, ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಬುಧವಾರ ನಡೆದ ಬಿಜೆಪಿ ರೋಡ್‌ಶೋನಲ್ಲಿ ಯೋಗಿ ಆದಿತ್ಯನಾಥ್ ಜೊತೆ ಸುಮಲತಾ ಕೂಡ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಸಂಸದೆ ಸುಮಲತಾ, "ನೀವು ಕೊಡುವ ಒಂದು ಮತದಿಂದ ಒಂದು ಕುಟುಂಬ ಅಭಿವೃದ್ಧಿಯಾದರೆ ಸಾಕಾ, ಅಥವಾ ಎಲ್ಲಾ ಕುಟುಂಬಗಳ ಅಭಿವೃದ್ಧಿಯಾಗಬೇಕಾ, ತೀರ್ಮಾನ ಮಾಡಿ" ಎಂದು ಜೆಡಿಎಸ್ ವಿರುದ್ಧ ಟೀಕೆ ಮಾಡಿದ್ದರು.

ಕಳೆದ ಬಾರಿ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ, ಏಳು ಜನ ಜೆಡಿಎಸ್ ಶಾಸಕರು ಇದ್ದರೂ ಜಿಲ್ಲೆ ಅಭಿವೃದ್ಧಿಯಾಗಿದೆಯಾ ಎಂದು ಪ್ರಶ್ನೆ ಮಾಡಿದರು. ಜಿಲ್ಲೆಯ ಪ್ರತಿ ಕುಟುಂಬ ಅಭಿವೃದ್ಧಿಯಾಗಬೇಕು ಎಂದಾದರೆ ಬಿಜೆಪಿಗೆ ಮತ ನೀಡಿ ಎಂದು ಸುಮಲತಾ ಮನವಿ ಮಾಡಿದ್ದರು.
ಇಬ್ಬರ ನಡುವೆ ಮುಂದುವರೆದ ವಾಕ್ಸಮರ
ಹೆಚ್‌ಡಿಕೆ ಮತ್ತು ಸುಮಲತಾ ನಡುವಿನ ವಾಕ್ಸಮರ ಹಲವು ದಿನಗಳಿಂದ ತಾರಕಕ್ಕೇರಿದೆ. ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತಂದಿದ್ದು ನಾನು ಎನ್ನುವ ಹೆಚ್‌ಡಿಕೆ ಹೇಳಿಕೆಗೆ ಸುಮಲತಾ ಕೆಂಡಾಮಂಡಲವಾಗಿದ್ದರು, ಅಂಬರೀಶ್ ಅವರಿಗೆ ಗೌರವ ಸಿಕ್ಕಿದ್ದು, ಹೆಚ್‌ಡಿಕೆಯಿಂದ ಅಲ್ಲ ರಾಜ್ಯದ ಜನ ಅವರಿಗೆ ಈ ಸ್ಥಾನಮಾನ ಕೊಟ್ಟಿದ್ದಾರೆ ಎಂದು ಹೇಳಿದ್ದರು. ಹೆಚ್‌ಡಿಕೆ ಸಿಎಂ ಆಗಲು ಅಂಬರೀಶ್ ಅವರೇ ಕಾರಣ ಎಂದು ಸುಮಲತಾ ವಾಗ್ದಾಳಿ ನಡೆಸಿದ್ದರು.
ರಾಜ್ಯದಲ್ಲಿ ಈ ಬಾರಿ ಅತಂತ್ರ ಸರ್ಕಾರ ಬರುತ್ತೆ ತಾನು ಸಿಎಂ ಆಗಬಹುದು ಎಂದು ಒಬ್ಬರು ಕಾಯುತ್ತಾ ಕೂತಿದ್ದಾರೆ, ಒಂದೇ ಕುಟುಂಬ ಅಧಿಕಾರ ಅನುಭವಿಸಬೇಕು ಎಂದು ಕನಸು ಕಾಣುತ್ತಿದ್ದಾರೆ ಎಂದು ಪರೋಕ್ಷವಾಗಿ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.












Click it and Unblock the Notifications