HDK-Sumalatha Meet: ಬೆಂಬಲ ಕೋರಿ ಸುಮಲತಾ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ: 5 ವರ್ಷದ ಜಿದ್ದಾ ಜಿದ್ದಿ ಅಂತ್ಯ?
ಬೆಂಗಳೂರು, ಮಾರ್ಚ್ 31: ರಾಜಕಾರಣದಲ್ಲಿ ಯಾರು ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ. ಈ ಮಾತಿಗೆ ಪೂರಕ ಎಂಬಂತಹ ವಾತಾವರಣ ಇಂದಿನ ರಾಜಕಾರಣದಲ್ಲಿ ನಡೆದಿದೆ. ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಭಾನುವಾರ ಸಂಸದೆ ಸುಮಲತಾ ಅವರ ನಿವಾಸಕ್ಕೆ ಭೇಟಿ ನೀಡಿದರು.
ಐದು ವರ್ಷಗಳ ಹಿಂದೆ ಇದೇ ಮಂಡ್ಯ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಒಡ್ಡಿದ್ದ ಸುಮಲತಾ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರು ಬದಲಾದ ಇಂದಿನ ಸನ್ನಿವೇಶದಲ್ಲಿ ರಾಜಕೀಯವಾಗಿ ಪರಸ್ಪರ ಭೇಟಿ ನಡೆಸಿ ಮಾತುಕತೆ ನಡೆಸಿದ್ದಾರೆ.

ಇಂದು ಭಾನುವಾರ ಜೆಪಿ ನಗರದ ಸಂಸದೆ ಸುಮಲತಾ ಅವರ ಮನೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದರು. ಈ ವೇಳೆ ಅವರನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪುತ್ರ ಅಭಿಷೇಕ್ ಅಂಬರೀಶ್ ಸ್ವಾಗತಿಸಿದರು. ಕುಮಾರಸ್ವಾಮಿ ಜೊತೆಗೆ ಜೆಡಿಎಸ್ ನಾಯಕ ಟಿಎ ಶರವಣ ಸಹ ಇದ್ದರು.
ಐದು ವರ್ಷದ ಜಿದ್ದಾ ಜಿದ್ದಿ ಅಂತ್ಯ?
ಸುಮಲತಾ ಭೇಟಿ ಬಳಿಕ ಸುದ್ದಿಗಾರ ಜೊತೆಗೆ ಎಚ್‌ಡಿ ಕುಮಾರಸ್ವಾಮಿ ಅವರು, ಸುಮಲತಾ ಅವರ ನಿವಾಸಕ್ಕೆ ತೆರಳಿ ಬೆಂಬಲ ಕೇಳಿದ್ದೇನೆ. ಇಂದಿನ ಭೇಟಿ ಇದು ಸೌಹಾರ್ದಯುತ ಭೇಟಿ ಆಗಿದೆ. ನಾನು ಅಂಬರೀಶ್ ಅವರು ರಾಜಕಾರಣಲ್ಲಿ ಒಟ್ಟೊಟ್ಟಿಗೆ ಬೆಳೆದವರು. ಅವರ ಸಹಕಾರ ಕೇಳಿದ್ದೇನೆ. ಅವರು ಏಪ್ರಿಲ್ 3ರಂದು ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ನಾನು ಮಂಡ್ಯದಲ್ಲಿ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಈ ನಿಟ್ಟಿನಲ್ಲಿ ನಾನು ಅವರು ಸಹಾಯ ಕೇಳಿದ್ದೇನೆ. ಅವರ ಅಭಿಮಾನಿಗಳು, ಬೆಂಬಲಿಗರ ಜೊತೆ ಚರ್ಚಿಸಿ ಅವರ ಸಮ್ಮುಖದಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ. ಸುಮಲತಾ ಅವರು ಬಿಜೆಪಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ತಿಳಿಸಿದರು.
ಮಂಡ್ಯದಲ್ಲಿ ನನ್ನ ಜತೆ ದರ್ಶನ್, ಅಭಿ ಇರ್ತಾರೆ
ಸುಮಲತಾ ಅವರು ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈಗಾಗಲೇ ಹೇಳಿದ್ದಂತೆ ಮಂಡ್ಯದಲ್ಲಿಯೇ ನಾನು ನೀರ್ಧಾರ ಪ್ರಕಟಿಸುತ್ತೇನೆ. ಕುಮಾರಸ್ವಾಮಿ ಅವರು ನನ್ನ ಸಹಾಯ ಕೇಳಿದ್ದಾರೆ. ಹಳೆಯದೆಲ್ಲ ಮರೆಯುವಂತೆ, ಭಿನ್ನಾಭಿಪ್ರಾಯಗಳಿದ್ದಲ್ಲಿ ಅದನ್ನು ಮನಸಲ್ಲಿ ಇಟ್ಟುಕೊಳ್ಳದಂತೆ ಅವರು ತಿಳಿಸಿದ್ದಾರೆ. ನಮ್ಮ ಸಹಕಾರ ಕೇಳಿದ್ದಾರೆ ಎಂದು ಹೇಳಿದರು.
ಇದ ಆರೋಗ್ಯಕರ ಸಭೆಯಾಗಿದೆ. ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ನನಗಿರುವ ಒಂದಷ್ಟು ಪ್ರಶ್ನೆ, ಅನುಮಾನಗಳು ನಿವಾರಿಸಿಕೊಂಡು ಮಂಡ್ಯದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ನಾವು ಕೂಡ ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಮಂಡ್ಯದಲ್ಲಿ ಏಪ್ರಿಲ್ 3 ರಂದು ನನ್ನೊಂದಿಗೆ ನಟ ದರ್ಶನ್, ಪುತ್ರ ಅಭಿಷೇಕ್ ಸಹ ಇರಲಿದ್ದಾರೆ ಎಂದು ಸುಮಲತಾ ತಿಳಿಸಿದರು.
ಬೆಂಬಲ ನೀಡುವಂತೆ ಎಚ್‌ಡಿಕೆ ಮನವಿ
ಸುಮಲತಾ ಅವರು ಗೆದ್ದು ಬೀಗಿದ್ದ ಮಂಡ್ಯ ಕ್ಷೇತ್ರದಲ್ಲಿ ಈ ಭಾರಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ತಮಗೆ ಬೆಂಬಲ ನೀಡುವಂತೆ ಕೋರಿ ಎಚ್‌ಡಿಕೆ ಅವರು ಸುಮಲತಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಭಾರಿ ಚುನಾವಣೆಗೆ ಸ್ಪರ್ಧಿಸಬೇಕಾ? ಇಲ್ಲ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬೆಂಬಲ ಕೊಡಬೇಕಾ? ಎಂಬುದರ ಬಗ್ಗೆ ಸುಮಲತಾ ಅವರು ಇನ್ನೂ ತಿರ್ಮಾನಿಸಿಲ್ಲ. ಈ ಮಧ್ಯೆ ಅವರು ನೆನ್ನೆ ಶನಿವಾರ ಸೇರಿದಂತೆ ಕೆಲವು ಬಾರಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇದಕ್ಕು ಮೊದಲು ಮೈತ್ರಿ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಏ. 3ರವರೆಗೂ ಕಾಯದೇ ಎಚ್‌ಡಿಕೆ ಭೇಟಿ
ಸುಮಲತಾ ಅವರ ರಾಜಕೀಯ ನಡೆ ಕುತೂಹಲಕಾರಿಯಾಗಿದೆ. ಸದ್ಯ ಅವರು ತಮ್ಮ ರಾಜಕೀಯ ನಿರ್ಧಾರವನ್ನು ಏಪ್ರಿಲ್ 3 ರಂದು ಮಂಡ್ಯದಲ್ಲೆ ತಿಳಿಸುವುದಾಗಿ ಹೇಳಿದ್ದಾರೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.
ಹೀಗಾಗಿ ತಡಮಾಡದೇ, ಬೆಂಬಲ ಕೇಳಲು ಎಚ್‌ಡಿಕೆ ಅವರು ಸುಮಲತಾ ಅವರ ಮನೆಗೆ ಧಾವಿಸಿದ್ದಾರೆ. ಮಂಡ್ಯ ರಾಜಕಾರಣ, ಹಿಂದಿನ ಟೀಕೆಗಳು, ಅಂದಿನ ರಾಜಕೀಯ ಸ್ಥಿತಿಗತಿ, ಸ್ಥಳೀಯರ ನಾಯಕರು ಏನೆಲ್ಲ ಮಾಡಿದ್ದರು ಎಂಬುದೆಲ್ಲವನ್ನು ಅವರು ಕೂತ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೈತ್ರಿ ಅಭ್ಯರ್ಥಿಯಾಗಿರುವ ಅವರು ತಮ್ಮ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದಾರೆ. ಚುನಾವಣೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಕೆಲವು ವಿಚಾರಗಳನ್ನು ಉಭಯ ನಾಯಕರು ಚರ್ಚಿಸಿದ್ದಾರೆ. ಬಿಜೆಪಿ ವರಿಷ್ಠರ ಸೂಚನೆಯಂತೆ ನಡೆದುಕೊಂಡು ಮಂಡ್ಯದಲ್ಲಿ ಪಕ್ಷ ಗೆಲ್ಲಲು ಸಹಕರಿಸುವಂತೆ ಅವರು ಕೇಳಿಕೊಳಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯ ರಾಜಕಾರಣ ಅಸೂಯೆ ತರಿಸುತ್ತಿದೆ: ಡಿಕೆಶಿ ಟಾಂಗ್
ಮಂಡ್ಯ ರಾಜಕಾರಣ ನೋಡಿದರೆ ಅಸೂಯೆ ಅನ್ನಿಸುತ್ತದೆ. ಈ ಹಿಂದೆ ಅಲ್ಲಿ ಏನೆಲ್ಲ ನಡೆಯಿತು. ಹೇಗೆಲ್ಲ ಟೀಕ್ ಮಾಡಿದರೆ ಎಂಬುದು ಗೊತ್ತಿದೆ. ಸ್ವಾಭಿಮಾನದಿಂದ ಮತ ಕೇಳಿದ್ದ ಸುಮಲತಾ ಅವರು ಅದಕ್ಕೆ ಬದ್ಧರಾಗಿರಲಿ. ಎಲ್ಲವನ್ನು ಜನರು ತೀರ್ಮಾನಿಸುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಉಭಯ ನಾಯಕರ ಭೇಟಿ ಕುರಿತು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನಿಖಿಲ್ ಕುಮಾರಸ್ವಾಮಿ ಗೆಲ್ಲಲು ಶ್ರಮಿಸಿತ್ತು. ಅವರನ್ನು ಮೈತ್ರಿ ವೇಳೆ ಸಿಎಂ ಮಾಡಿದ್ದೇವೆ. ವಿಷ ಕೊಟ್ಟರು ಎಂದರೆ ಏನರ್ಥ? ಸಿಎಂ ಸ್ಥಾನ ನೀಡಕ್ಕೆ ಈ ಮಾತು ಕೇಳಬೇಕಾಗಿದೆ. ಅಮೃತ ಕೊಟ್ಟವನಿಗೆ ಬೆನ್ನಿಗೆ ಚೂರಿ ಹಾಕಬೇಕು. ಯಾರು ವಿಷ ಹಾಕಿದರೂ, ಅವರನ್ನು ಸಿಎಂ ಮಾಡಿದ್ದು ನಾವು. ನಾವೇನು ಮಾಡಿದ್ದೇವೆ ಎಂಬುದು ನಮಗೆ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ಎಚ್‌ಡಿಕೆಗೆ ಟಾಂಗ್ ಕೊಟ್ಟರು.












Click it and Unblock the Notifications