ಪಾರ್ಲಿಮೆಂಟ್ ಏನು ಆರೆಸ್ಸೆಸ್ ಕಚೇರಿಯೇ? ಹೆಚ್.ಡಿ. ದೇವೇಗೌಡ ಪ್ರಶ್ನೆ
ಬೆಂಗಳೂರು, ಮೇ 25: ಸಂಸತ್ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹಾಜರಾಗುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಖಚಿತಪಡಿಸಿದ್ದಾರೆ. ಸಂಸತ್ ಭವನ ಈ ದೇಶದ ಆಸ್ತಿ ಅದು ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ ನಿಜ, ಆದರೆ; ಅದು ಅವರ ವೈಯಕ್ತಿಕ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ ಎಂದರು.

ನೂತನ ಸಂಸತ್ ಭವನದ ಕಟ್ಟಡ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಬಿಜೆಪಿ ಅಥವಾ ಆರೆಸ್ಸೆಸ್ ಕಚೇರಿ ಅಲ್ಲ. ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಓರ್ವ ಮಾಜಿ ಪ್ರಧಾನಮಂತ್ರಿಯಾಗಿ, ದೇಶದ ಪ್ರಜೆಯಾಗಿ ಭಾಗಿಯಾಗುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಲ ವಿಚಾರಗಳಲ್ಲಿ ರಾಜಕೀಯ ಮಾಡಬಾರದು
ಬಿಜೆಪಿಯನ್ನು ರಾಜಕೀಯವಾಗಿ ವಿರೋಧ ಮಾಡಲಿಕ್ಕೆ ನನ್ನಲ್ಲಿ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ. ನಾನು ಸಂಸತ್ತಿನ ಎರಡು ಸದನಗಳಿಗೆ ಆಯ್ಕೆಯಾಗಿದ್ದೇನೆ. ಅಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ, ಈಗಲೂ ಸದಸ್ಯನಾಗಿದ್ದೇನೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ಸಂವಿಧಾನದ ವಿಷಯದಲ್ಲಿ ನಾನು ರಾಜಕೀಯ ಮಾಡಲಾರೆ ಎಂದರು.
ಅನೇಕ ಪಕ್ಷಗಳು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಓರ್ವ ಮಾಜಿ ಪ್ರಧಾನಿಯಾಗಿ ನೀವು ಹೋಗುತ್ತೀರಾ? ಇಲ್ಲವಾ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹೌದು, ನಾನು ಸಂವಿಧಾನಕ್ಕೆ ಬದ್ಧನಾಗಿದ್ದೇನೆ. ಅದಕ್ಕಾಗಿ ಸಂಸತ್ ಭವನ ಉದ್ಘಾಟನೆಗೆ ಹೋಗುತ್ತೇನೆ ಎಂದು ಪ್ರಶ್ನೆ ಮಾಡಿದವರಿಗೆ ಉತ್ತರ ನೀಡಿದರು.
ಬದುಕಿರುವವರೆಗೆ ಪಕ್ಷಕ್ಕಾಗಿ ಕೆಲಸ ಮಾಡ್ತೇನೆ
ಪಕ್ಷಕ್ಕಾಗಿ ನನ್ನ ಜೀವ ಸವೆಸಿದ್ದೇನೆ. ನಾನು ಬದುಕಿರುವಷ್ಟು ಕಾಲವೂ ಪಕ್ಷಕ್ಕಾಗಿಯೇ ಬದುಕುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ನಾನು ಪಕ್ಷಕ್ಕೇ ಮೀಸಲು ಎಂದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂಬುದಕ್ಕೆ ನನಗೆ ಬಹಳ ನೋವಿದೆ. ಅದೇ ನೋವಿನಿಂದ ಕಾಲ ದೂಡಲು ಸಾಧ್ಯವೇ? ಪುಟಿದೆದ್ದು ಪಕ್ಷ ಕಟ್ಟಬೇಕು, ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಸೋತಿದ್ದಕ್ಕೆ ಪ್ರಾಮಾಣಿಕವಾಗಿ ಕಾರಣ ಹುಡುಕೋಣ. ಅವುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯೋಣ. 1989ರಲ್ಲಿ ನಮ್ಮ ಪಕ್ಷ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಅದಾದ ಮೇಲೆ ಐದು ವರ್ಷಗಳ ನಂತರ ನಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ನಾನೇ ಮುಖ್ಯಮಂತ್ರಿ ಆದೆ. ಆಮೇಲೆ ಪ್ರಧಾನಿಯೂ ಆದೆ. ಜನರ ಆಶೀರ್ವಾದದಿಂದ ಅದು ಸಾಧ್ಯವಾಯಿತು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
ಸೋತಾಗ ನಿರಾಶೆ, ನೋವು ಸಹಜ. ನಾನು ಈ ಎಲ್ಲಾ ಹಂತಗಳನ್ನು ದಾಟಿಕೊಂಡು ಮುಂದೆ ಬಂದಿದ್ದೇನೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಈ ಪಕ್ಷವನ್ನು ಉಳಿಸುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ ಎಂದರು.












Click it and Unblock the Notifications