ಕ್ರಿಮಿನಲ್ ಕೇಸ್ ಮುಚ್ಚಿಟ್ಟ ಆರೋಪ: ಸಿದ್ದರಾಮಯ್ಯ ಆಪ್ತ ಬೈರತಿಗೆ ಸಂಕಷ್ಟ
ಬೆಂಗಳೂರು, ಡಿಸೆಂಬರ್ 3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಶಾಸಕ ಬೈರತಿ ಬಸವರಾಜ್ ಅವರ ವಿರುದ್ಧದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಹಿನ್ನೆಲೆಯಲ್ಲಿ ಚುನಾವಣಾ ತಕರಾರು ಸಂಬಂಧ ತಮ್ಮ ಸದಸ್ಯತ್ವದ ಕುರಿತು ಬೈರತಿ ಪ್ರಕರಣವನ್ನು ಎದುರಿಸುವಂತಾಗಿದೆ. ಬೈರತಿ ಬಸವರಾಜ್ ಅವರ ವಿರುದ್ಧ ಪರಾಜಯಗೊಂಡಿದ್ದ ಬಿಜೆಪಿಯ ನಂದೀಶ್ ರೆಡ್ಡಿ ಹೈಕೋರ್ಟ್‌ಗೆ ದೂರು ನೀಡಿ, ಚುನಾವಣಾ ಅಕ್ರಮ ಎಸಗುವ ಮೂಲಕ ಬೈರತಿ ಬಸವರಾಜ್ ಆಯ್ಕೆಯಾಗಿದ್ದಾರೆ ಎಂದು ದೂರಿದ್ದರು .
ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬೈರತಿ ಬಸವರಾಜು ತಮ್ಮ ವಿದ್ಯಾರ್ಹತೆಯನ್ನು ಅಫಿಡವಿಟ್‌ನಲ್ಲಿ ತಪ್ಪಾಗಿ ಸಲ್ಲಿಸಿದ್ದು, ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಕಾರಣದಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಕೋರಿದ್ದರು. ಬಿಜೆಪಿಯ ನಂದೀಶ್ ರೆಡ್ಡಿ ಸಲ್ಲಿಸಿದ್ದ ಈ ಅರ್ಜಿಯನ್ನು ವಜಾಗೊಳಿಸುವಂತೆ ಬೈರತಿ ಬಸವರಾಜು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ಆದರೆ ಪ್ರಕರಣದ ಪೂರ್ವಾಪರವನ್ನು ಅವಲೋಕಿಸಿದ ಹೈಕೋರ್ಟ್ ಬೈರತಿ ತಮ್ಮ ವಿರುದ್ಧದ ಕ್ರಿಮಿನಲ್ ಕೇಸ್‌ನ್ನು ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿರುವುದರಿಂದ ಪ್ರಕರಣವು ವಿಚಾರಣೆಗೆ ಅರ್ಹವಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಬೈರತಿ ಬಸವರಾಜು ಸಂಕಷ್ಟಕ್ಕೆ ಸಿಲುಕಿದ್ದಾರೆ.












Click it and Unblock the Notifications