ಆರ್‌ಟಿಐ ಆಯುಕ್ತರ ನೇಮಕ ಪ್ರಶ್ನಿಸಿದ್ದ ವ್ಯಕ್ತಿಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು, ಸೆ.21: ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಸುಳ್ಯದ ವ್ಯಕ್ತಿ ತಾನು ವಕೀಲನಾಗಿದ್ದರೂ ಆ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡದೆ ಇದ್ದುದಕ್ಕೆ ಹೈಕೋರ್ಟ್ 5 ಲಕ್ಷ ರೂ.ಗಳ ಭಾರಿ ದಂಡ ವಿಧಿಸಿದೆ.
ಇದು ಇನ್ನು ಮುಂದೆ ಸುಖಾಸುಮ್ಮನೆ ಅರ್ಜಿ ಸಲ್ಲಿಸುವವರಿಗೆ ಎಚ್ಚರಿಕೆ ಗಂಟೆಯಾಗಿದೆ. ಪಿ.ಮೋಹನ್ ಚಂದ್ರ ದಂಡನೆಗೆ ಒಳಗಾಗಿರುವ ವ್ಯಕ್ತಿ.
ಅರ್ಜಿದಾರರು ಸ್ವತಃ ವಕೀಲರಾಗಿದ್ದರೂ ಹಲವು ಅಂಶಗಳನ್ನು ಮುಚ್ಚಿಟ್ಟು ನ್ಯಾಯಾಂಗದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿರುವ ವಿಭಾಗೀಯಪೀಠ, ಕ್ಷುಲ್ಲಕ ಅರ್ಜಿ ಹೂಡಿ ನ್ಯಾಯಾಂಗದ ಘನತೆ ಕುಂದು ಮಾಡುವ ಪ್ರಯತ್ನಗಳನ್ನು ಸಹಿಸಲಾಗದು ಎಂದು ಎಚ್ಚರಿಕೆ ನೀಡಿದೆ.
ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಹಿರಿಯ ನ್ಯಾ. ಬಿ. ವೀರಪ್ಪ ನೇತೃತ್ವದ ವಿಭಾಗೀಯಪೀಠ ಈ ಮಹತ್ವದ ಆದೇಶ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡುವ ಜೊತೆಗೆ ನ್ಯಾಯಾಂಗದ ಘನತೆಗೆ ಕುಂದು ತರುವ ಪ್ರಯತ್ನಗಳು ಹೆಚ್ಚುತ್ತಿವೆ.
ಇಂತಹ ಕ್ರಮಗಳನ್ನು ಕಠಿಣವಾಗಿ ಹತ್ತಿಕ್ಕಬೇಕು ಎಂದು ಹೇಳಿರುವ ನ್ಯಾಯಪೀಠ, ನ್ಯಾಯಾಲಯಗಳು ದೇವಾಲಯಗಳಿದ್ದಂತೆ, ಜನರು ನ್ಯಾಯಕ್ಕಾಗಿ ನಂಬಿಕೆ ಇಟ್ಟಿರುವುದು ಕೋರ್ಟ್‌ಗಳ ಮೇಲೆ. ಆದರೆ ಅದಕ್ಕೆ ಚ್ಯುತಿ ತರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕ್ರಮಗಳನ್ನು ಸಹಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, 2019ರಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರನ್ನಾಗಿ ಎನ್.ಸಿ. ಶ್ರೀನಿವಾಸ್ ಮತ್ತು ಆಯುಕ್ತರನ್ನಾಗಿ ಮತ್ತು ನಿವೃತ್ತ ಐಎಫ್ ಎಸ್ ಅಧಿಕಾರಿ ಎಸ್.ಎಂ.ಸೋಮಶೇಖರ್ ಹಾಗೂ ವಕೀಲ ಮಂಜುನಾಥ್ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ.












Click it and Unblock the Notifications