ಬೆಂಗಳೂರು ಹೋಟೆಲ್ ಸಿಬ್ಬಂದಿ ಬ್ಯಾಗ್‌ನಲ್ಲಿ ಹ್ಯಾಂಡ್ ಗ್ರೆನೇಡ್: ಮತ್ತೊಂದು ಬ್ಲಾಸ್ಟ್‌ಗೆ ಸಂಚು?
ಇತ್ತೀಚೆಗೆ ನಡೆದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ಬಳಿಕ ಎಲ್ಲೆಡೆ ಪೊಲೀಸರು ಫುಲ್ ಅಲರ್ಟ್ ಕೂಡ ಆಗಿದ್ರು. ಈಗ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸಿಬ್ಬಂದಿಯ ಬ್ಯಾಗ್‌ನಲ್ಲಿ ಸ್ಫೋಟಕವಾದ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಹೋಟೆಲ್ ಸಪ್ಲೈಯರ್ ಬ್ಯಾಗ್‌ನಲ್ಲಿ ಹ್ಯಾಂಡ್ ಗ್ರೆನೇಡ್ ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ನಗರದ ಸಂಪಿಗೇಹಳ್ಳಿ ಬಳಿಯ ಹೋಟೆಲ್‌ವೊಂದರಲ್ಲಿ ಸಪ್ಲೈಯರ್ ಆಗಿದ್ದ ಅಬ್ದುಲ್ ರೆಹಮಾನ್ ಎಂಬುವರ ಬ್ಯಾಗಿನಲ್ಲಿ ಗ್ರೆನೇಡ್ ಸಿಕ್ಕಿದೆ. ಹೋಟೆಲ್‌ನ ಸಿಬ್ಬಂದಿ ಆತನ ಆಧಾರ್‌ಕಾರ್ಡ್‌ಗಾಗಿ ಬ್ಯಾಗ್ ಪರಿಶೀಲಿಸಿದ ವೇಳೆ ಈ ಗ್ರೆನೇಡ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದು ಹೋಟೆಲ್‌ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಅಲ್ಲಿಗೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಅಬ್ದುಲ್ ರೆಹಮಾನ್ ಬ್ಯಾಗ್ನಲ್ಲಿ ಸಿಕ್ಕ ಸ್ಫೋಟಕಗಳನ್ನೂ ವಶಕ್ಕೆ ಪಡೆದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳಿಸಿದ್ದಾರೆ. ಈತ ಬೆಂಗಳೂರಿನ ಕೋಗಿಲು ಕ್ರಾಸ್ ಸಮೀಪದ ಬೆಳ್ಳಹಳ್ಲೀಯ ನಿವಾಸಿ ಎಂದು ತಿಳಿದುಬಂದಿದೆ. ಆತನ ಬ್ಯಾಗ್‌ನಲ್ಲಿ ಗ್ರೆನೇಡ್ ಪತ್ತೆಯಾದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಇದು ರಸ್ತೆಯಲ್ಲಿ ಸಿಕ್ಕಿದ್ದು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಮೊದಲಿಗೆ ಈತ ಸ್ಥಳೀಯ ಎಂದು ಹೇಳಿಕೊಂಡು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಹೋಟೆಲ್‌ನವರು ಈತನ ಆಧಾರ್ ಕಾರ್ಡ್ ಕೇಳಿದಾಗ ಕೊಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್‌ನವರು ಎರಡು ದಿನಗಳ ಬಳಿಕ ಆತನ ಬ್ಯಾಗ್ ಚೆಕ್ ಮಾಡಿದಾಗ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದೆ. ಬಳಿಕ ಕೂಡಲೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ.
ಗ್ರೆನೇಡ್ ಆಗಿರುವುದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆತನ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದು, ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಇನ್ನು ಈ ಗ್ರೆನೇಡ್ ಮೂಲದ ಬಗ್ಗೆಯೂ ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಮತ್ತೊಂದು ಬ್ಲಾಸ್ಟ್ ಏನಾದರೂ ಸಂಚು ನಡೆದಿತ್ತಾ? ಎಂಬ ಆಯಾಮದ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈತ ಹೋಟೆಲ್‌ನಲ್ಲಿ ಏಕೆ ಕೆಲಸಕ್ಕೆ ಬಂದಿದ್ದ? ಈತನ ಮೂಲ ಏನು? ಬ್ಯಾಗ್‌ನಲ್ಲಿ ಗ್ರೆನೇಡ್ ಪತ್ತೆ ಹಿಂದೆ ಯಾರ ಕೈವಾಡ ಇದೆ ಎಂದೆಲ್ಲ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಹಿಂದೆಯೂ ರಾಮೇಶ್ವರಂ ಕೆಫೆಯಲ್ಲಿ ಇದೇ ರೀತಿ ಸ್ಫೋಟ ನಡೆದಿತ್ತು. ಅಲ್ಲದೆ ಆರೋಪಿಗಳನ್ನು ಸೆರೆಹಿಡಿದಾಗ ಕರ್ನಾಟಕ ಬಿಜೆಪಿ ಕಚೇರಿಯಲ್ಲೂ ಸ್ಫೋಟಕ್ಕೆ ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈಗ ಈತ ಕೂಡ ಹೋಟಲ್‌ನಲ್ಲೇ ಸಿಕ್ಕಿಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತನ ಹಿನ್ನೆಲೆಯನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು, ಆಧಾರ್ ಕಾರ್ಡ್ ಅನ್ನು ಯಾವ ಕಾರಣಕ್ಕೆ ಹೋಟೆಲ್‌ನವರಿಗೆ ನೀಡಲಿಲ್ಲ ಎಂಬ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ.












Click it and Unblock the Notifications