Uber: ಬೆಂಗಳೂರಿನಲ್ಲಿ ಉಬರ್ ಗ್ರೀನ್ ಆರಂಭ: ಎಲೆಕ್ಟ್ರಿಕ್ ವಾಹನ ಸೇವೆ ಬಗ್ಗೆ ಇಲ್ಲಿದೆ ವಿವರ
ಬೆಂಗಳೂರು, ಡಿಸೆಂಬರ್ 01: ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಗಳಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಯಾಬ್ ಅಗ್ರಿಗೇಟರ್ ಉಬರ್ ನಗರದಲ್ಲಿ ಎಲೆಕ್ಟ್ರಿಕ್ ವಾಹನ ಸೇವೆ ಉಬರ್ ಗ್ರೀನ್‌ಅನ್ನು ಪ್ರಾರಂಭಿಸಿದೆ.
ನವೆಂಬರ್ 30ರಂದು ಅರಮನೆ ಮೈದಾನದಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ 2023ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಉಬರ್ ಗ್ರೀನ್‌ಗೆ ಚಾಲನೆ ನೀಡಿದರು.

ಉಬರ್ ಗ್ರೀನ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ " ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಉಬರ್‌ನ ಈ ಕ್ರಮ ಶ್ಲಾಘನೀಯ. ನಾವು ದೀರ್ಘಾವಧಿಯಲ್ಲಿ ಪರಿಣಾಮಕಾರಿ ಬದಲಾವಣೆಗಳಿಗೆ ತರಲು ಹಾಗೂ ಪರಿಸರ ಉಳಿಸಲು ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಇಂದಿನಿಂದಲೇ ಮಧ್ಯ ಬೆಂಗಳೂರು ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಊಬರ್ ಗ್ರೀನ್ ಈಗ ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ನಗರದ ಹೆಚ್ಚಿನ ಭಾಗಗಳಿಗೆ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಊಬರ್ ಗ್ರೀನ್ ವಾಹನದಲ್ಲಿ ಪ್ರಯಾಣ ಮಾಡಲಿದ್ದಾರೆ. ಈ ಸೇವೆಯು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಊಬರ್ ಕಂಪನಿ ತಿಳಿಸಿದೆ.
ಇಂದಿನಿಂದ ನಗರದ ಅನೇಕ ಭಾಗಗಳಲ್ಲಿನ ಸವಾರರು ತಮ್ಮ ರೈಡ್‌ಗಳನ್ನು ಬುಕ್ ಮಾಡಲು ಊಬರ್ ಅಪ್ಲಿಕೇಶನ್ ತೆರೆದರೆ ಉಬರ್ ಗ್ರೀನ್ ಆಯ್ಕೆ ಸಿಗುತ್ತದೆ. ಪ್ರಯಾಣಿಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನ ಬಳಸುಲು ಊಬರ್ ಸಹಾಯ ಮಾಡಲಿದೆ.
ಈ ಬಗ್ಗೆ ಉಬರ್ ಇಂಡಿಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಮಾತನಾಡಿ 'ಉಬರ್ ಸುಸ್ಥಿರತೆಗೆ ಅಚಲವಾದ ಬದ್ಧತೆಯನ್ನು ಹೊಂದಿದೆ ಮತ್ತು ಉಬರ್ ಗ್ರೀನ್ ಅದರತ್ತ ಒಂದು ಹೆಜ್ಜೆಯಾಗಿದೆ. ಬೆಂಗಳೂರಿನಲ್ಲಿ ಉಬರ್ ಗ್ರೀನ್ ಆರಂಭವಾಗಿರುವುದು ದೇಶದಲ್ಲಿ ನಮ್ಮದು ಎರಡನೇ ಹೆಜ್ಜೆಯಾಗಿದೆ. ಇದು ಈಗಾಗಲೇ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಅನೇಕ ಜನರು ಊಬರ್ ಗ್ರೀನ್ ಬಳಸುತ್ತಿದ್ದಾರೆ' ಎಂದರು.












Click it and Unblock the Notifications