Greater Bengaluru: ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದ್ರೆ ಮುಳುಗುತ್ತೆ, ಕಡಿಮೆ ಸುರಿದರೆ ತೇಲುತ್ತೆ
ಭವಿಷ್ಯದ ಬೆಂಗಳೂರಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024 ಅನ್ನು ಅನುಷ್ಠಾನ ಮಾಡಿದೆ. ಇದಕ್ಕೆ ವಿರೋಧ ಕೂಡ ದೊಡ್ಡಮಟ್ಟದಲ್ಲಿಯೇ ಇದೆ. ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ಗ್ರೇಟರ್ ಬೆಂಗಳೂರು ಬಗ್ಗೆ ವ್ಯಂಗ್ಯ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ, ಕಡಿಮೆ ಸುರಿದರೆ ತೇಲುತ್ತದೆ ಎಂದು ಹರಿಹಾಯ್ದಿದ್ದಾರೆ.
ರಸ್ತೆಗಳಲ್ಲಿಯೇ ಕೆರೆ, ಚರಂಡಿ, ಗುಂಡಿಗೆ ಹಿಡಿ ಮಣ್ಣಾಕುವುದಕ್ಕೂ ಬಿಡಿಗಾಸಿಲ್ಲ. ಸುರಂಗಕ್ಕೆ ಮಾತ್ರ ಸಾವಿರಾರು ಕೋಟಿ ಟೆಂಡರ್, ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎಂದು ವ್ಯಂಗ್ಯವಾಡಿದ್ದಾರೆ. ವಾರಕ್ಕೊಮ್ಮೆ ತೆರಿಗೆ ಬರೆ, ದರ ಏರಿಕೆ. ಜನರೆಂದರೆ ಜೀವರಹಿತ ಕಲ್ಲುಬಂಡೆಗಳೇ? ಮನಸೋಇಚ್ಛೆ ಒಡೆದು ಬಡಿದು ನುಂಗಲು? ಎಂದು ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಕುಟುಕಿದ್ದಾರೆ.
ನಾಡು ಎಂದರೆ ಕಲ್ಲು ಬಂಡೆಗಳಲ್ಲ, ನಾಡು ಎಂದರೆ ಮನುಷ್ಯರು. ಕೆರೆಯ ನೀರನು ಕೆರೆಗೆ ಚೆಲ್ಲುತ್ತಿಲ್ಲವೇಕೆ? ಕೆರೆ ನೀರಿಗೆ ಕಮೀಷನ್ ಕೋಡಿ ಬಿದ್ದಿದೆ. ತೆರಿಗೆ ಥೈಲಿ, ಬೆಲೆ ಸುಲಿಗೆ ಹಣವೆಲ್ಲಿ? ಜಾಹೀರಾತುಗಳಲ್ಲಿ ಬಣ್ಣಬಣ್ಣವಾಗಿ ಕಾಣುವ ಬೆಂಗಳೂರು, ನೈಜವಾಗಿ ನಿಟ್ಟುಸಿರು ಬಿಡುತ್ತಿದೆ ಏಕೆ? ಎಂದು ಪ್ರಶ್ನಿಸಿದ್ದಾರೆ.

ಬರುತ್ತಿರುವ ಆದಾಯ ಎಲ್ಲಿ ಹೋಗುತ್ತಿದೆ? ನಗರ ಜನರ ಬೆವರಿನ ಹಣ ಏನೇನಾಗುತ್ತಿದೆ? ಕಲೆಕ್ಷನ್ ಎಷ್ಟು? ವೆಚ್ಚ ಎಷ್ಟು? ಸ್ವಾಹಾ ಎಷ್ಟು? ಗುಂಡಿ ಮುಚ್ಚಲು ಗತಿ ಇಲ್ಲ, ಚರಂಡಿ ಕಸ ಎತ್ತಲು ದಿಕ್ಕಿಲ್ಲ. ನಿತ್ಯವೂ ಗುದ್ದಲಿ ಪೂಜೆ, ಶಂಕುಸ್ಥಾಪನೆ. ಹೊಸ ಶೀಶೆ, ಹಳೇ ಮದ್ಯ. ಹಳೇ ಕಾಮಗಾರಿ, ಹೊಸ ಹೊಸ ಬಿಲ್ಲು. ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್‌ಗಳ ಬೆಂಗಳೂರು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಸುಮಾರು 25 ಗ್ರಾಮದ 9,600 ಎಕರೆಯಷ್ಟು ಫಲವತ್ತಾದ ಭೂ ಪ್ರದೇಶವನ್ನು ರೈತರ ಆಶಯಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ ಎಂದು ಬಿಜೆಪಿ ಸಂಸದ ಡಾ.ಸಿಎನ್ ಮಂಜುನಾಥ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರೇಟರ್ ಬೆಂಗಳೂರು ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸಿದರೆ, ರೈತರ ಬೆನ್ನೆಲುಬು ಮುರಿದಂತೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ರೈತರು ಹಾಗೂ ಅನೇಕ ರೈತಪರ ಸಂಘಟನೆಗಳು ಸೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭೂ ಸ್ವಾಧೀನದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕಳೆದ ಮೂರು ವಾರದ ಹಿಂದೆಯೇ ನಾನು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ ದೇವೇಗೌಡರು ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದಿದ್ದಾರೆ.
ಈ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಿದರೆ ರೈತರ ಬೆನ್ನೆಲುಬು ಮುರಿದಂತಾಗುತ್ತೆ. ಹಣ ಶಾಶ್ವತ ಅಲ್ಲ ಭೂಮಿ ಶಾಶ್ವತ ಎಂದಿದ್ದಾರೆ. ಹಸಿದ ಹೊಟ್ಟೆಗೆ ಚಿನ್ನಕ್ಕಿಂತ ಅನ್ನ ಮುಖ್ಯ, ದೇಶದಲ್ಲಿ ಪ್ರತಿ ವರ್ಷ ಬೇಸಾಯ ಮಾಡುವ ಜಮೀನು ಕಡಿಮೆಯಾಗುತ್ತಿದೆ. ಇನ್ನೊಂದು ಕಡೆ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಹಣ ಕೇವಲ ಒಂದು ಜನರೇಷನ್‌ಗೆ ಮಾತ್ರ ಸೀಮಿತವಾಗುತ್ತೆ. ಭೂಮಿಯು ಸೂರ್ಯ ಚಂದ್ರ ಇರುವ ತನಕ ಶಾಶ್ವತವಾಗಿರುತ್ತೆ. ರೇಷ್ಮೆನಾಡು ಆಗಿರುವ ರಾಮನಗರ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ, ಈಗ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಸರ್ಕಾರ ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications