Greater Bengaluru: "ಅಂದು ಭಾರತ - ಪಾಕಿಸ್ತಾನ್ ವಿಷಯದಲ್ಲಾಗಿದ್ದೇ ಇಂದು ಬೆಂಗಳೂರಿಗೆ"
Greater Bengaluru: ಕಾಂಗ್ರೆಸ್ ಪಕ್ಷವು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತೊಮ್ಮೆ ಆರೋಪಿಸಿದೆ. ಇದಕ್ಕೆ ಕಾರಣ ಇದೀಗ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಏಳು ಅಥವಾ 5 ಪಾಲಿಕೆಗಳನ್ನು ವಿಭಜನೆ ಮಾಡುವ ಪ್ರಸ್ತಾವನೆ. ಬೆಂಗಳೂರಿನ ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷವು ಈ ಪ್ರಸ್ತಾವನೆಯನ್ನು ಮಾಡಿದೆ ಎಂದು ಬಿಜೆಪಿ ದೂರಿದೆ. ಅಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಅಂದು ಭಾರತ - ಪಾಕಿಸ್ತಾನ್ ವಿಭಜನೆ ಇಂದು ಬೆಂಗಳೂರು ವಿಭಜನೆ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ. ಇದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ನಗರದಲ್ಲಿ ಮೂರು ಹಂತದ ಆಡಳಿತವನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಮಸೂದೆಯನ್ನು ಮಂಡಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ಮಸೂದೆ ಪರಿಶೀಲನಾ ವರದಿಯನ್ನು ಈಚೆಗೆ ವಿಧಾನಸಭೆಯ ಸ್ವೀಕರ್ ಯು ಟಿ ಖಾದರ್ ಅವರಿಗೆ ಮಂಡಿಸಲಾಗಿದೆ. ಆದರೆ, ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರು ವಿಭಜನೆಯ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಿರಿ ಎಂದು ಆಗ್ರಹಿಸಲಾಗುತ್ತಿದೆ.

ಯಾವ ಕಾರಣಕ್ಕೆ ಏಳು ಪಾಲಿಕೆ: ಗ್ರೇಟರ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಮೂರು ಹಂತದಲ್ಲಿ ಆಡಳಿತ ನೀಡುವುದು. ಬೆಂಗಳೂರಿನ ವಿವಿಧ ಹಾಗೂ ಪ್ರಮುಖ ಸಂಸ್ಥೆಗಳಾದ ಜಲಮಂಡಳಿ, ಬೆಸ್ಕಾಂ, ಮೆಟ್ರೋ ಹಾಗೂ ಬೆಸ್ಕಾಂ ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವುದು ಹಾಗೂ ಮೇಲ್ವಿಚಾರಣೆ ನಡೆಸುವುದು ಇದರ ಉದ್ದೇಶವಾಗಿದೆ. ಈ ಪರಿಕಲ್ಪನೆ ಚೆನ್ನಾಗಿದೆಯಾದರೂ ಪಾಲಿಕೆಯನ್ನು ಅಂದರೆ ಬೆಂಗಳೂರನ್ನು ವಿಭಜನೆ ಮಾಡುವ ಪ್ರಸ್ತಾವಕ್ಕೆ ಭಾರೀ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿ ಅಂತಲೇ ಬಿಜೆಪಿ ದೂರಿದೆ.
ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ: ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಈ ವಿಷಯವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಅತ್ತ ಬೆಳಗಾವಿಯಲ್ಲಿ ಮರಾಠಿ vs ಕನ್ನಡ ಭಾಷಾ ಸಮಸ್ಯೆ ಶುರುವಾಗಿರುವ ಸಂದರ್ಭದಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರವು ಸದ್ದಿಲ್ಲದೆ ಬೆಂಗಳೂರು ವಿಭಜನೆಯಂತಹ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ಬಿಜೆಪಿಯು, ಅಂದು ಸ್ವಾರ್ಥಕ್ಕಾಗಿ ನೆಹರೂ ಹಾಗೂ ಜಿನ್ನಾ ಅವರು ಭಾರತವನ್ನು ವಿಭಜಿಸಿದ ರೀತಿ, ಇಂದು ನಾಡದ್ರೋಹಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರನ್ನು ವಿಭಜಿಸುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದೆ.
28ಕ್ಕೆ ಮುಖ್ಯಮಂತ್ರಿ ಭೇಟೆ: ಇನ್ನು ಬೆಂಗಳೂರಿನಲ್ಲಿ ಮೆಟ್ರೋ ದರ ಇಳಿಕೆ, ಇ-ಖಾತೆಯ ಸಮಸ್ಯೆ ಬಗೆಹರಿಸುವಿಕೆ, ಅವೈಜ್ಞಾನಿಕ ಟನಲ್ ರೋಡ್ ಯೋಜನೆ ಕೈ ಬಿಡುವಂತೆ ಹಾಗೂ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡುವ ಪ್ರಯತ್ನವನ್ನು ನಿಲ್ಲಿಸಿ, ಶೀಘ್ರ ಚುನಾವಣೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ನಿಯೋಗವು ಫೆ. 28 ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ ಎಂದು ಹೇಳಲಾಗಿದೆ.












Click it and Unblock the Notifications