ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಮಾಡಿಕೊಳ್ಳಲು ಇದು ಸುವರ್ಣಾವಕಾಶ!
ಸ್ವಂತ ಮನೆ ಮಾಡಿಕೊಳ್ಳಬೇಕು, ನಮ್ಮದೇ ಒಂದು ಗೂಡು ಕಟ್ಟಿಕೊಳ್ಳಬೇಕು ಅಂತಾ ಪ್ರತಿ ಮನುಷ್ಯನಿಗೂ ಆಸೆ ಇರುತ್ತದೆ. ಅದರಲ್ಲೂ ಬೆಂಗಳೂರಿಗೆ ಬಂದು ದುಡಿಯುವ ಜನರಿಗೂ ಸ್ವಂತ ಮನೆಯ ಆಸೆ ಇರುತ್ತದೆ. ಹೀಗಿದ್ದಾಗ ಏನೇನೋ ಮಾಡಿ ಮನೆ ಮಾಡಿಕೊಳ್ಳೋದಕ್ಕೆ ಪರದಾಡುವವರನ್ನ ನೋಡಿದ್ದೀವಿ. ಈ ಸಮಯದಲ್ಲಿ ಬಡವರಿಗೆ ಸರ್ಕಾರದ ಯೋಜನೆಗಳು ಸಹಾಯಕ್ಕೆ ಬರುತ್ತವೆ. ಈಗಲೂ ಅಷ್ಟೇ ಬೆಂಗಳೂರಲ್ಲಿ ಮನೆ ಮಾಡಿಕೊಳ್ಳುವ ಆಸೆಯನ್ನ ಹೊಂದಿದವರಿಗೆ ಬಂಪರ್ ಆಫರ್ ಸಿಕ್ಕಂತಾಗಿದೆ.
ಇದು ಸಿಕ್ಕಾಪಟ್ಟೆ ಕಾಸ್ಟ್ಲಿ ದುನಿಯಾ, ಇಲ್ಲಿ ದುಡಿದು ಜೀವನ ನಡೆಸುವುದೇ ಕಷ್ಟ, ಕಷ್ಟ. ಹೀಗಿದ್ದಾಗ ಸ್ವಂತ ಮನೆ ಎಲ್ಲಿಂದ ಮಾಡಿಕೊಳ್ಳುವುದು? ಅನ್ನೋ ಪ್ರಶ್ನೆ ಕಾಡುವುದು ಸಹಜವೇ ಸರಿ. ಹೀಗಿದ್ದಾಗ ಕರ್ನಾಟಕ ಸರ್ಕಾರ ಬಡವರಿಗೆ ಅಂತಾ ಬಂಪರ್ ಆಫರ್ ನೀಡಿದೆ. ಹೀಗೆ ಬೆಂಗಳೂರಿನಲ್ಲಿ ಮನೆ ಮಾಡಿಕೊಳ್ಳಬೇಕು ಅಂತಾ ಕಾಯುತ್ತಿದ್ದ ಬಡವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಹಾಗಾದರೆ ಏನದು ಸಿಹಿಸುದ್ದಿ? ಬೆಂಗಳೂರಿನಲ್ಲಿ ಮನೆ ಕಟ್ಟಬೇಕು ಅಂತಾ ಕಾಯುತ್ತಿದ್ದ ಬಡವರಿಗೆ ಈಗ ಸಿಕ್ಕಿರುವ ಗುಡ್ ನ್ಯೂಸ್ ಏನು? ಬನ್ನಿ ತಿಳಿಯೋಣ.

ಸರ್ಕಾರದಿಂದ ಸ್ವಂತ ಮನೆ ಗ್ಯಾರಂಟಿ?
ಯೆಸ್, ಕರ್ನಾಟಕದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಸದ್ದು ಮಾಡುತ್ತಿದೆ. ಈಗಾಗಲೇ ತಾನೇ ಘೋಷಣೆ ಮಾಡಿರುವಂತೆ 5 ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಹೀಗಿದ್ದಾಗಲೇ ಸದ್ದಿಲ್ಲದೆ ಮತ್ತೊಂದು ಗ್ಯಾರಂಟಿ ಯೋಜನೆ ಜಾರಿಗೆ ತರಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ. ಅದೂ ಬಡವರಿಗೆ ಸೂರನ್ನು ಕಲ್ಪಿಸುವ ಯೋಜನೆ ಆಗಿದೆ. ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಸುದ್ದಿಯ ತಿಳಿಸಿದೆ. ಹಾಗಾದರೆ ಏನಿದು ಸ್ವಂತ ಮನೆಯ ಯೋಜನೆ? ಮುಂದೆ ಓದಿ.
ಬಡವರು ಸ್ವಂತ ಮನೆ ಕಟ್ಟಿಕೊಳ್ಳುವ...
ಇದೀಗ ಬೆಂಗಳೂರಿನಲ್ಲಿ ಬಡವರು ಸ್ವಂತ ಮನೆ ಕಟ್ಟಿಕೊಳ್ಳುವ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ, 'ಕೊಳೆಗೇರಿ ನಿವಾಸಿಗಳು ತಮ್ಮದೊಂದು ಕನಸಿನ ಮನೆ ನಿರ್ಮಿಸಿಕೊಳ್ಳಲು ಪಿಎಂ ಆವಾಸ್ ಯೋಜನೆಯಡಿಯಲ್ಲಿ 4.5 ಲಕ್ಷ ಪಾವತಿಸಬೇಕಿತ್ತು, ಈಗ ಫಲಾನುಭವಿಗಳ ಪಾಲಿನ ಮೊತ್ತದಲ್ಲಿ 3.5 ಲಕ್ಷವನ್ನು ರಾಜ್ಯ ಸರ್ಕಾರವೇ ಪಾವತಿಸಲಿದೆ. ಫಲಾನುಭವಿಗಳು ಪಾವತಿಸಬೇಕಾದ ಮೊತ್ತವನ್ನು ಕೇವಲ 1 ಲಕ್ಷಕ್ಕೆ ಇಳಿಕೆಯಾಗಿದೆ. ಪ್ರಧಾನಿ @narendramodi ಅವರು ಸರ್ವರಿಗೂ ಸೂರು ಎಂದಿದ್ದು ಕೇವಲ ಬಾಯಿಚಪಲದ ಮಾತುಗಳಷ್ಟೇ, ಅಸಲಿಗೆ ಸರ್ವರಿಗೂ ಸೂರಿನ ಕನಸನ್ನು ಸಾಕಾರಗೊಳಿಸುತ್ತಿರುವುದು ಕಾಂಗ್ರೆಸ್ ಸರ್ಕಾರ. ಈ ಯೋಜನೆಗೆ 6,170 ಕೋಟಿ ಮೀಸಲಿಟ್ಟು, ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ ಮಾಡಲಾಗಿದೆ. ಸಚಿವ @BZZameerAhmedK ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬಡವರ ಸೂರಿನ ಕನಸನ್ನು ನನಸು ಮಾಡುವ ಮಹತ್ವದ ಹೆಜ್ಜೆ ಇಟ್ಟಿದೆ.' ಎಂದು ತಿಳಿಸಲಾಗಿದೆ.

ಒಟ್ನಲ್ಲಿ ರಾಜ್ಯ ಸರ್ಕಾರ ಬಡವರಿಗಾಗಿ ಹೊಸ ಯೋಜನೆ ಜಾರಿಗೆ ತರುತ್ತಿದ್ದು ಇದರಿಂದಾಗಿ ಹೊಸ ಭರವಸೆ ಮೂಡುವ ನಿರೀಕ್ಷೆ ಇದೆ. ಆದರೆ ಯೋಜನೆಯಲ್ಲಿ ಮಧ್ಯವರ್ತಿಗಳು ಮತ್ತು ಇತರರ ಕಾಟ ಇರದೆ ನಿಜವಾದ ಬಡವರಿಗೆ ಇದರಿಂದ ಲಾಭ ಆಗಬೇಕು ಅನ್ನೋದು ಜನರ ಆಗ್ರಹ. ಅದ್ರಲ್ಲೂ ಬೆಂಗಳೂರಲ್ಲಿ ಮನೆ ಮಾಡಿಕೊಳ್ಳಲು ಪರದಾಟ ಪಡುತ್ತಿದ್ದ ಬಡವರಿಗೆ ಈ ಅವಕಾಶ ಬಲ ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ. ಇಷ್ಟೆಲ್ಲದರ ನಡುವೆ ಬಿಜೆಪಿ & ಕಾಂಗ್ರೆಸ್ ನಡುವೆ ಈ ಯೋಜನೆ ಬಗ್ಗೆ ಕ್ರೆಡಿಟ್ ವಾರ್ ಕೂಡ ಶುರುವಾಗುವ ಸಾಧ್ಯತೆ ಈಗ ದಟ್ಟವಾಗಿದೆ. ಇದೆಲ್ಲಾ ಏನೇ ಇರಲಿ ಬಡವರಿಗೆ ಇದರಿಂದ ಒಳ್ಳೆಯದಾದರೆ ಸಾಕು ಅಂತಾ ಹೇಳ್ತಿದ್ದಾರೆ ಸಾಮಾನ್ಯ ಜನರು.












Click it and Unblock the Notifications