ಬೆಂಗಳೂರು: ₹15,00,00,000 ಮೌಲ್ಯದ ಚಿನ್ನ, ₹40 ಲಕ್ಷ ನಗದು ಕಳ್ಳತನ
ಬೆಂಗಳೂರು, ನವೆಂಬರ್, 10: ಬೆಂಗಳೂರಿನಲ್ಲಿ ಕಳ್ಳತನ ಪ್ರಕರಣಗಳು ಪ್ರತಿನಿತ್ಯ ದಾಖಲಾಗುತ್ತಲಿರುತ್ತವೆ. ಆದರೆ ಇದೀಗ ಮತ್ತೆ ಸೆಕ್ಯೂರಿಟಿ ಗಾರ್ಡ್ ತನ್ನ ಮಾಲೀಕನ ಮನೆಯಲ್ಲಿ ಚಿನ್ನ, ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಹಾಗಾದರೆ ಮಾಲೀಕನ ಪ್ರಕಾರ, ಈ ಖದೀಮ ಕದ್ದ ಎಷ್ಟು ರೂಪಾಯಿ ಮೌಲ್ಯದ ಚಿನ್ನ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸೆಕ್ಯೂರಿಟಿ ಗಾರ್ಡ್ ತನ್ನ ಮಾಲೀಕನ ಮನೆಯಲ್ಲಿ ಸುಮಾರು 15,00,00,000 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ 40,00,000 ರೂಪಾಯಿ ನಗದು ಕಳ್ಳತನ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನೇಪಾಳ ಮೂಲದ ನಮ್ರಾಜ್ ತನ್ನ ಮಾಲೀಕನ ಮನೆಯಲ್ಲೇ ಒಂದಲ್ಲ.. ಎರಡಲ್ಲ.. 15.15 ಕೋಟಿ ರೂಪಾಯಿ ಮೌಲ್ಯದ 18.4 ಕೆ.ಜಿ. ಚಿನ್ನಾಭರಣ ಹಾಗೂ 40 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಇನ್ನು ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಈ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೇಪಾಳ ಮೂಲದ ನಮ್ರಾಜ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ವಿಜಯನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಚಿನ್ನದ ವ್ಯಾಪಾರಿ ಮನೆಯಲ್ಲಿ 18.4ಕೆಜಿ ಚಿನ್ನ ಆಗಿದೆ. ಈ ಪೈಕಿ ಸುರೇಂದ್ರ ಕುಮಾರ್ ಜೈನ್ ಕುಟುಂಬಕ್ಕೆ 2.8 ಕೆ.ಜಿ. ಚಿನ್ನ ಸೇದಿದ್ದು, ಅವರ 5 ಸಹೋದರಿಯರ ಒಟ್ಟು 2.7 ಕೆ.ಜಿ. ಚಿನ್ನ ಹಾಗೂ ವ್ಯಾಪಾರದ 12.8 ಕೆ.ಜಿ. ಚಿನ್ನ ಕಳ್ಳತನವಾಗಿದೆ.
ಅಲ್ಲದೆ, ಮನೆಯಲ್ಲಿದ್ದ ವ್ಯಾಪಾರದ 37.8 ಲಕ್ಷ, ವೈಯಕ್ತಿಕ 3 ಲಕ್ಷ ರೂಪಾಯಿ ಹಣವನ್ನು ಕೂಡ ಎಗರಿಸಿದ್ದಾರೆ. ಒಟ್ಟು 18 ಕೆ.ಜಿ. 437 ಗ್ರಾಂ ಚಿನ್ನ, 40.80 ಲಕ್ಷ ನಗದು ಸೇರಿ ಅಂದಾಜು ಮೌಲ್ಯ 15.15 ಕೋಟಿ ರೂಪಾಯಿ ಕಳ್ಳತನ ಆಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ನೇಪಾಳ ಮೂಲದ ನಮ್ರಾಜ್ ಜ್ಯುವೆಲರಿ ಶಾಪ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಆತನಿಗೆ ಮನೆಯಿಲ್ಲದ ಹಿನ್ನೆಲೆ ತಮ್ಮ ನಿವಾಸದ ಬಳಿ ಪಾರ್ಕಿಂಗ್ನಲ್ಲಿ ಸೆಕ್ಯೂರಿಟಿಗೆ ಮನೆ ನೀಡಿದ್ದೆ. ಕಳೆದ 6 ತಿಂಗಳಿನಿಂದ ಪತ್ನಿ ಜೊತೆ ಸೆಕ್ಯೂರಿಟಿ ರೂಂನಲ್ಲಿ ನಮ್ರಾಜ್ ವಾಸ ಇದ್ದ. ಈ ನಡುವೆ ಜ್ಯುವೆಲರಿ ಶಾಪ್ನ ಸೆಕ್ಯೂರಿಟಿ ಕೆಲಸದ ಜೊತೆ ತಮ್ಮ ಮನೆಯಲ್ಲೂ ಕೆಲಸ ಮಾಡುತ್ತಿದ್ದ. ಗಿಡಿಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಎಂದು ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ.
ನವೆಂಬರ್ 1ರಂದು ಸಂಜೆ 5 ಗಂಟೆಗೆ ಕುಟುಂಬ ಸಮೇತ ಗುಜರಾತ್‌ಗೆ ತೆರಳಿದ್ದ ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಅವರು ನವೆಂಬರ್ 7ರಂದು ಊರಿನಿಂದ ವಾಪಸಾದಾಗ ಮನೆ ಕಳ್ಳತನವಾಗಿರುವುದು ತಿಳಿದುಬಂದಿದೆ. ಆಗ ನಮ್ರಾಜ್ಗೆ ಕರೆ ಮಾಡಿದ್ದಾರೆ. ಆದರೆ ಆತನ ನಂಬರ್ ಸ್ವಿಚ್ ಆಫ್ ಬಂದಿದೆ. ಆದ್ದರಿಂದ ಆತನೇ ಕಳ್ಳತನ ಮಾಡಿರಬಹುದು ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications