ಬೆಂಗಳೂರಲ್ಲಿ 'ಜಾಗತಿಕ ಹೂಡಿಕೆದಾರರ ಸಭೆ': ಕೈಗಾರಿಕಾ ಗುರಿ, ಉದ್ದೇಶಗಳೇನು? ಸರ್ಕಾರ ಕೊಟ್ಟ ಮಾಹಿತಿ
ಬೆಂಗಳೂರು, ಜೂನ್ 20: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಪೂರ್ವ ಭಾವಿ ಸಭೆ (ಕರ್ಟನ್ ರೈಸರ್) ಬುಧವಾರ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸೇರಿದಂತೆ ಇಲಾಖೆ ಮುಖ್ಯಸ್ಥರು ಪಾಲ್ಗೊಂಡು ಮಹತ್ವದ ವಿಷಯಗಳನ್ನು ಕೈಗೆತ್ತುಕೊಂಡು ಚರ್ಚಿಸಿದ್ದಾರೆ.
ಈ ವೇಳೆ ಮಾತನಾಡಿದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಮುಂದಿನ ವರ್ಷ ಫೆಬ್ರವರಿಯಲ್ಲಿ ಮೂರು ದಿನ ಜರುಗಲಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ'ದಲ್ಲಿ ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೂ ಆದ್ಯ ಗಮನ ಹರಿಸಲಾಗುತ್ತಿದೆ.

ಬಂಡವಾಳ ಸೆಳೆಯಲು ವಿಶೇಷ ಉಪಕ್ರಮ
ಈ ಭಾರಿಯು ನವೋದ್ಯಮಗಳಿಗೆ ಬಂಡವಾಳ ಸೆಳೆಯಲು ವಿಶೇಷ ಉಪಕ್ರಮ ಅಳವಡಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಪೂರಕವಾಗಿ 'ಎಸ್ಎಂಇ ಕನೆಕ್ಟ್- 25' ಮತ್ತು 'ವೆಂಚರೈಸ್- 24' ಪರಿಕಲ್ಪನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ರಾಜ್ಯದ ತಯಾರಿಕಾ ವಲಯದ ಕಾರ್ಯ ಪರಿಸರವನ್ನು ಜಾಗತಿಕ ಮಟ್ಟದ ಉದ್ದಿಮೆಗಳಿಗೆ ತೋರಿಸಲು ನಾಲ್ಕು ರೋಡ್ ಶೋ ನಡೆಸಲಾಗುವುದು. ಅಲ್ಲದೆ, ಗಣ್ಯ ಉದ್ಯಮಿಗಳನ್ನು ಖುದ್ದಾಗಿ ಆಹ್ವಾನಿಸಲು ಜೂನ್ 24ರಿಂದ 28ರವರೆಗೆ ಜಪಾನಿನ ಟೋಕಿಯೋ, ನಗೋಯ ಮತ್ತು ಒಸಾಕ ನಗರಗಳಿಗೆ ಹಾಗೂ ಜುಲೈ ಮೊದಲ ವಾರದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್, ಇಂಚೆಯಾನ್ ಮತ್ತು ಜಿಯಾಂಗಿ ನಗರಗಳಿಗೆ ಭೇಟಿ ಕೊಡಲಾಗುವುದು ಎಂದರು.
ಕೈಗಾರಿಕಾ ವಲಯ ಅಭಿವೃದ್ಧಿಗೆ ಸರ್ಕಾರ ಹೊಸ ಪರಿಕಲ್ಪನೆ
'ಬೆಳವಣಿಗೆಯ ಹೊಸ ಪರಿಕಲ್ಪನೆʼ (Reimagining Growth) ಧ್ಯೇಯದಡಿ ನಡೆಯಲಿರುವ ಸಮಾವೇಶದ ಮೂಲಕ ತಯಾರಿಕಾ ವಲಯ, ಮೂಲಸೌಕರ್ಯ ಅಭಿವೃದ್ಧಿ, ಐಟಿ, ಇಂಧನ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಹರಿದುಬರುವಂತೆ ಪ್ಲಾನ್ ಮಾಡಲಾಗುತ್ತಿದೆ ಎಂದು ವಿವರಿಸಿದರು.
1 ಟ್ರಿಲಿಯನ್ ಡಾಲರ್ GDP ಗುರಿ: ಸಿದ್ದರಾಮಯ್ಯ
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2032ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್ GDP ಸಾಧಿಸಲು ವಾರ್ಷಿಕ ಶೇಕಡಾ 15-16ರಷ್ಟು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸಾಧಿಸಲು ಪಣ ತೊಟ್ಟಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಕೈಗಾರಿಕಾ ಕ್ಲಸ್ಟರ್ ಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ. ಮಹಾನಗರಗಳ ಆಚೆಗೂ ಆರ್ಥಿಕ ಪ್ರಗತಿಯನ್ನು ಕೊಂಡೊಯ್ಯಬೇಕು ಎಂಬ ಉದ್ದೇಶ ಹೊಂದಿದ್ದೇವೆ.
ಹೆಚ್ಚು ಹೂಡಿಕೆ ಆಕರ್ಷಿಸಲು ಆದ್ಯತೆ
ಸ್ಥಳೀಯ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು, ವಿಶೇಷ ಪರಿಣತ ಉದ್ದಿಮೆಗಳನ್ನು ಬೆಳೆಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್, ಆಟೋ ಮತ್ತು ಇ.ವಿ., ಫಾರ್ಮಸುಟಿಕಲ್ಸ್, ಜವಳಿ ಮುಂತಾದ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚು ಹೆಚ್ಚು ಹೂಡಿಕೆ ಆಕರ್ಷಿಸಲಾಗುವುದು ಎಂದು ತಿಳಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ವೇದಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ ಗುಂಡೂರಾವ್, ವೈದ್ಯಕೀಯ ಮತ್ತು ಕೌಶಲ ಅಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ, ಜವಳಿ ಮತ್ತು ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಪಾಲ್ಗೊಂಡಿದ್ದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತಿತರ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.












Click it and Unblock the Notifications