Jamco: ವಿಮಾನಗಳ ಒಳಾಂಗಣ ಉತ್ಪನ್ನ ತಯಾರಿಕಾ ಕಂಪನಿಯಿಂದ ಬೆಂಗಳೂರಲ್ಲಿ ಘಟಕ ಸ್ಥಾಪನೆ
ಬೆಂಗಳೂರು: ವಿಮಾನಗಳ ಕ್ಯಾಬಿನ್ ಒಳಾಂಗಣ ಉತ್ಪನ್ನಗಳನ್ನು ತಯಾರಿಸುವ ಕ್ಷೇತ್ರದ ಪ್ರಮುಖ ಕಂಪನಿಯಾದ 'ಜಮ್ಕೊ' (Jamco) ಕರ್ನಾಟಕದಲ್ಲಿ ತನ್ನ ವಹೀವಾಟು ವಿಸ್ತರಣೆ ಮಾಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಉತ್ಪನ್ನ ತಯಾರಿಕಾ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸೋಮವಾರ ಅಧಿಕೃತ ಮಾಹಿತಿ ನೀಡಿದ್ದು, ಜಮ್ಕೊ ವಿಮಾನ ಕ್ಯಾಬಿನ್ ಒಳಾಂಗಣ ಕ್ಷೇತ್ರದಲ್ಲಿ ಜಾಗತಿಕವಾಗಿ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿದೆ. ಜಮ್ಕೊ ಪೂರ್ಣ ಪ್ರಮಾಣದ ಉತ್ಪನ್ನ ತಯಾರಿಕಾ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸಲು ತಯಾರಿ ನಡೆಸಿದೆ. ರಾಜ್ಯದಲ್ಲಿ ವ್ಯಾಪಾರ ಹೆಚ್ಚಿಸಲಿದೆ.

ಕರ್ನಾಟಕ ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯವಿರುವ ಪರಿಣಿತ ಎಂಜಿನಿಯರಿಂಗ್ ಉದ್ಯೋಗಿಗಳು ಮತ್ತು ಭದ್ರವಾಗಿ ನೆಲೆವೂರಿರುವ ವೈಮಾಂತರಿಕ್ಷ ವಲಯವು ಜಾಗತಿಕವಾಗಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಈ ಮಾತಿಗೆ ಪೂರಕವೆಂಬಂತೆ ಜಮ್ಕೊದ ಹೂಡಿಕೆಯು ಮತ್ತೊಂದು ನಿದರ್ಶನವಾಗಿದೆ ಎಂದು ಅವರು ರಾಜ್ಯದಲ್ಲಿನ ಹೂಡಿಕೆಗೆ ಇರುವ ವಿಫಲ ಅವಕಾಶಗಳನ್ನು ವಿವರಿಸಿದರು.
ಕಂಪನಿಯ ಸಿಒಒ ಸಂಜೀವ್ ಸೆನ್ ಮತ್ತು ನಿರ್ದೇಶಕ ಮಂಡಳಿ ಅಧ್ಯಕ್ಷೆ ಕೇಟ್ ಷೆಫರ್ ನೇತೃತ್ವದ ತಂಡ ಆಯುಕ್ತರನ್ನು ಭೇಟಿ ಮಾಡಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದರು. ಇಂದಿನ ಭೇಟಿಯಲ್ಲಿ ಬೆಂಗಳೂರಿನಲ್ಲಿ ಕಂಪನಿಯ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ನಿರ್ಧಾರವನ್ನು ಆಯುಕ್ತರು ಪ್ರಕಟಿಸಿದರು. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಕಂಪನಿಗಳ ಸಾಲಿಗೆ ಜಮ್ಕೊ ಸೇರ್ಪಡೆಯಾಗಿದೆ ಎಂದರು.
ವಿವಿಧ ವರ್ಗದ ವಿಮಾನಗಳ ಒಳಾಂಗಣ ಉತ್ಪನ್ನ ತಯಾರು
ಬೆಂಗಳೂರಿನ ಈ ಎಂಜಿನಿಯರಿಂಗ್ ಕೇಂದ್ರವು ಬೋಯಿಂಗ್, ಏರ್‌ಬಸ್ ಮತ್ತು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳ ವಿಮಾನಗಳ ಒಳಾಂಗಣದಲ್ಲಿ ಬಳಕೆಯಾಗುವ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ತಯಾರಿಸಲಿದೆ. ಜಾಗತಿಕವಾಗಿ ಪ್ರಮಾಣೀಕೃತ ವೈಮಾಂತರಿಕ್ಷ ಉತ್ಪನ್ನ ತಯಾರಿಸುವ ಸಾಮರ್ಥ್ಯ ವೃದ್ಧಿಸಲು ರಾಜ್ಯದಲ್ಲಿ ಮಾಡುತ್ತಿರುವ ಈ ಹೂಡಿಕೆಯು ಕರ್ನಾಟಕ ಕುರಿತ ದೀರ್ಘ ಕಾಲೀನ ಬದ್ಧತೆಗೆ ನಿದರ್ಶನವಾಗಿದೆ.
ವಿಮಾನಯಾನ ಕ್ಷೇತ್ರದಲ್ಲಿ ಭಾರತ ಪ್ರಗತಿ
ಭಾರತದ ವಿಮಾನಯಾನ ಮಾರುಕಟ್ಟೆ ಕ್ಷಿಪ್ರವಾಗಿ ವಿಸ್ತರಣೆಯಾಗುತ್ತಿದೆ. ಕರ್ನಾಟಕವು ಈ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಜಮ್ಕೊ-ದ ನೆರವಿನಿಂದ ವಿಮಾನಗಳಲ್ಲಿ ಹೊಸ ತಲೆಮಾರಿನ ಕ್ಯಾಬಿನ್ ನಾವೀನ್ಯತೆ ರೂಪಿಸಲು ನೆರವಾಗುತ್ತಿದೆ. ಜೊತೆಗೆ ವಿಶ್ವದ ಅತ್ಯಾಧುನಿಕ ವೈಮಾಂತರಿಕ್ಷ ಎಂಜಿನಿಯರಿಂಗ್ ಕೇಂದ್ರವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಅಲ್ಲದೇ ನಮ್ಮ ಹೂಡಿಕೆಗೆ ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತಿರುವ ಬೆಂಬಲ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿನ ರಾಜ್ಯದ ನಾಯಕತ್ವವನ್ನು ಕೇಟ್ ಷೆಫರ್ ಅವರು ಶ್ಲಾಘಿಸಿದರು ಎಂದು ಕೈಗಾರಿಕೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications