Ghost Movie: ಸಂತೋಷ್ ಚಿತ್ರಮಂದಿರದಲ್ಲಿ ಘೋಸ್ಟ್ ಸಿನಿಮಾ ಪ್ರದರ್ಶನದ ವೇಳೆ ಗಲಾಟೆ
ನಟ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಲನಚಿತ್ರ ಘೋಸ್ಟ್ ಇಂದು (ಗುರುವಾರ) ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಘರ್ಷಣೆ ಉಂಟಾಗಿದೆ.
ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ನಿಗದಿತ ಸಮಯಕ್ಕೆ ಚಿತ್ರಮಂದಿರದ ಒಳಗೆ ಬಿಡದ ಕಾರಣ ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಚಿತ್ರಮಂದಿರದ ಹಲವು ಕಡೆಗಳಲ್ಲಿ ರಕ್ತಸಿಕ್ತ ಕಲೆಗಳು ಕೂಡ ಕಂಡು ಬಂದಿದೆ ಎಂದು ವರದಿಯಾಗಿದೆ.
ಸಂತೋಷ್ ಚಿತ್ರಮಂದಿರದ ಹಲವು ಗಾಜುಗಳು ಪುಡಿ ಪುಡಿಯಾಗಿದ್ದು ಗಾಯಗೊಂಡ ಅಭಿಮಾನಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದಿನಂತೆ ಶುಕ್ರವಾರ ಮುಂಜಾನೆಯಿಂದ ಶೋಗಳು ಆರಂಭವಾಗಿದ್ದು, ಮೊದಲ ದಿನವೇ ಅಭಿಮಾನಿಗಳು ಶಿವರಾಜ್ ಕುಮಾರ್ ಅವರ ಘೋಸ್ಟ್ ಅವತಾರವನ್ನು ಕಣ್ತುಂಬಿಕೊಂಡಿದ್ದಾರೆ.
ಘೋಸ್ಟ್ ನೋಡಿ ಫ್ಯಾನ್ಸ್ ಏನಂದ್ರು?
ಜೈಲರ್ ಸಿನಿಮಾದಲ್ಲಿ ಶಿವಣ್ಣನ ಅಭಿನಯ ನೋಡಿದ ನಂತರ ಅವರ ಘೋಸ್ಟ್ ಚಿತ್ರದ ಬಗ್ಗೆ ಕರ್ನಾಟಕದ ಹೊರಗಡೆ ಕೂಡ ಕುತೂಹಲ ಹೆಚ್ಚಾಗಿತ್ತು, ಅದಕ್ಕೆ ತಕ್ಕಂತೆ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಘೋಸ್ಟ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯಾದ್ಯಂತ ಘೋಸ್ಟ್ ಚಿತ್ರಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಹಲವು ಕಡೆಗಳಲ್ಲಿ ಮುಂಜಾನೆಯೇ ಪ್ರದರ್ಶನಗಳನ್ನು ಆರಂಭಿಸಲಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಅಭಿಮಾನಿಗಳಿಗೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಘೋಸ್ಟ್ ಚಿತ್ರವನ್ನು ನೋಡಿದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕನ್ನಡಿಗರಿಗೆ ಇದು ಶಿವಣ್ಣನ ದಸರಾ ಉಡುಗೊರೆ ಎಂದು ಹೇಳಿದ್ದಾರೆ. ಅಭಿಮಾನಿಗಳಿಗೆ ಮಾತ್ರವಲ್ಲದೆ, ಸಾಮಾನ್ಯ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗುತ್ತದೆ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ ಪತ್ರಕರ್ತರಿಗಾಗಿಯೇ ಚಿತ್ರತಂಡ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಶಿವರಾಜ್ ಕುಮಾರ್ ಅಭಿನಯ ನೋಡಿ ಹಿಂದಿ ಪತ್ರಕರ್ತರು ಸಖತ್ ಖುಷಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದಾರೆ.
ಚಿತ್ರವನ್ನು ನೋಡಿದ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಸಿನಿಮಾ ಚನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.
ನಾಯಕನಾಗಿ ಶಿವರಾಜಕುಮಾರ್ ನಟಿಸಿದ್ದರೆ, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀನಿ ಈ ಚಿತ್ರಕ್ಕೆ ಆಕ್ಷನ್ - ಕಟ್ ಹೇಳಿದ್ದಾರೆ.












Click it and Unblock the Notifications