ಬೆಂಗಳೂರು ಟ್ರಾಫಿಕ್ ಜಾಮ್ ಕಂಟ್ರೋಲ್‌ಗೆ ಜಿಬಿಎ ಮಾಸ್ಟರ್ ಪ್ಲ್ಯಾನ್!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಬಗ್ಗೆ ದೇಶದಾದ್ಯಂತ ಭಾರೀ ಚರ್ಚೆ ಆಗುತ್ತಿದೆ. ಇದೀಗ ಈ ವಿಚಾರವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಹೆಬ್ಬಾಳ ಜಂಕ್ಷನ್ ವರೆಗಿನ ಹೊರ ವರ್ತುಲ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೆಗೆದುಕೊಳ್ಳಬೇಕಿರುವ ಸೂಕ್ತ ಕ್ರಮಗಳ ಕುರಿತು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು. ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡುವ ಸಲುವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಮೇಲ್ಮೈ ದುರಸ್ತಿ ಕಾರ್ಯ ಕೈಗೊಳ್ಳುವುದು, ಜಂಕ್ಷನ್ ಗಳ ಅಭಿವೃದ್ಧಿ, ವೈಟ್ ಟಾಪಿಂಗ್ ಕಾಮಗಾರಿ, ರಸ್ತೆಗಳ ಮೇಲೆ ನೀರು ನಿಲ್ಲದಂತೆ ಕ್ರಮವಹಿಸಲು ಹಾಗೂ ಮೆಟ್ರೋ ಕಾಮಗಾರಿ ನಡೆಯುವ ಕಡೆ ರಸ್ತೆಗಳನ್ನು ಸುಸ್ತಿಯಲ್ಲಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಾಂತಲಾ ನಗರದ ಹತ್ತಿರ ಹೊಸೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲನೆಯ ವೇಳೆ, ಕಾಮಗಾರಿ ಪೂರ್ಣಗೊಂಡಿರುವ ಕಡೆ ರಸ್ತೆ ಮೇಲೆ ಅಳವಡಿಸಿರುವ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿ ನಡೆಸುವ ಇಲಾಖೆಗಳ ನಾಮಫಲಕ ಅಳವಡಿಸಿ: ಮೆಟ್ರೋ, ಜಲಮಂಡಳಿ, ಬೆಸ್ಕಾಂ, ಜಲಮಂಡಳಿ ಇಲಾಖೆಗಳು ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿರುವ ಕಡೆ ಅವರೇ ರಸ್ತೆ ಸುಸ್ತಿಯಲ್ಲಿಡಬೇಕಿದ್ದು, ಆ ರಸ್ತೆಯಲ್ಲಿ ಮೇಲ್ಮೈ ಹಾಳಾಗಿದ್ದರೆ, ರಸ್ತೆ ಗುಂಡಿಗಳು ಬಿದ್ದಿದ್ದರೆ ಅವರೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಸಂಬಂಧ ವಿವಿಧ ಇಲಾಖೆಗಳು ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಯಾವ ಇಲಾಖೆ ಕಾಮಗಾರಿ ನಡೆಸಿತ್ತಿದೆ ಎಂಬ ನಾಮಫಲಕವನ್ನು ಅಳವಡಿಸಲು ತಿಳಿಸಲಾಗಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಅಭಿವೃದ್ಧಿಗೆ ಕ್ರಮ: ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಜಲಾವೃತವಾಗುವುದನ್ನು ತಪ್ಪಿಸಬೇಕು. ಈ ಸಂಬಂಧ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತಿ ಸ್ವಚ್ಚವಾಗಿರುವಂತೆ ನೋಡಿಕೊಳ್ಳಬೇಕು. ಜಂಕ್ಷನ್ ಅಭಿವೃದ್ಧಿಗಾಗಿ ವಿನ್ಯಾಸ ಸಿದ್ದಪಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಅಗರ ಕೆರೆ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿಗೆ ಕೈಗೆತ್ತಿಕೊಂಡಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಅದಲ್ಲದೆ ಅಗರ ಕೆರೆ ಸುತ್ತಮುತ್ತಲಿನ ರಸ್ತೆಗಳು ತುಂಬಾ ವರ್ಷಗಳಿಂದ ಹಾಳಾಗಿದ್ದು, ತಾತ್ಕಾಲಿಕ ಕ್ರಮ ಕೈಗೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲು ಯೋಜನೆ ರೂಪಿಸಲು ಸೂಚನೆ ನೀಡಿದರು.
ಇಬ್ಲೂರು ಜಂಕ್ಷನ್ ಅಭಿವೃದ್ಧಿಗೆ ಕ್ರಮ: ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡಬೇಕು. ಜೊತೆಗೆ ಜಂಕ್ಷನ್ ನಲ್ಲಿ ಜಲಾವೃತವಾಗದಂತೆ ಹಾಗೂ ಜಂಕ್ಷನ್ ಸಮಗ್ರ ಅಭಿವೃದ್ಧಿ ಮಾಡಲು ಸೂಚನೆ ನೀಡಿದರು. ಅದರ ಜೊತೆಗೆ ವಾಹನಗಳ ಸಂಚಾರಕ್ಕಾಗಿ ಮ್ಯಾಜಿಕ್ ಬಾಕ್ಸ್ ಅಳವಡಿಸುವ ಬಗ್ಗೆ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಸೂಚನೆ ನೀಡಿದರು.
ಒಳಗೆ-ಹೊರಗೆ ಹೋಗಲು ವಿನ್ಯಾಸ ರೂಪಿಸಿ: ಹೊರ ವರ್ತುಲ ರಸ್ತೆಯಲ್ಲಿ 20 ಸ್ಥಳಗಳಲ್ಲಿ ಸರ್ವೀಸ್ ರಸ್ತೆಯಿಂದ ಪ್ರಮುಖ ರಸ್ತೆಗೆ ಒಳಗೆ-ಹೊರಗೆ ಹೋಗಲು ವಿನ್ಯಾಸ ರೂಪಿಸಿದರೆ ಶೇ. 30 ರಿಂದ 40 ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಈ ಸಂಬಂಧ ಪಾಲಿಕೆ ಹಾಗೂ ಸಂಚಾರಿ ವಿಭಾಗದ ಸಹಕಾರದೊಂದಿಗೆ ವಿನ್ಯಾಸ ರೂಪಿಸಿ ತ್ವರಿತವಾಗಿ ಅನುಷ್ಠಾನಗೊಳಿಸಬೇಕು.
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಮಾತಮಾಡಿ, ಶಾಂತಲಾ ನಗರದ ಲಾಂಗ್ ಫೋರ್ಡ್ ರಸ್ತೆಯಲ್ಲಿ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ಗಮನಿಸಿ, ಸ್ವತಃ ಮೊಬೈಲ್ ಮೂಲಕ ಫೋಟೋ ತೆಗೆದು ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.
ಅಗರ ಜಂಕ್ಷನ್ ಬಳಿ ಮೇಲ್ಸೇತುವೆಯ ಮೇಲೆ ಬೀಳುವ ನೀರಿಗೆ ಅಳವಡಿಸಿರುವ ಪೈಪ್ ಹಾಳಾಗಿದ್ದು, ರಸ್ತೆ ಮೇಲೆ ನೀರು ಬೀಳುತ್ತಿದೆ. ಈ ಸಂಬಂಧ ರಸ್ತೆ ಮೇಲೆ ನೀರು ಬೀಳದಂತೆ ಪೈಪ್ ಗಳನ್ನು ಅಳವಡಿಸಬೇಕು. ಮೇಲ್ಸೇತುವೆ ಕೆಳಭಾಗ ಸಂಪೂರ್ಣ ಹಾಳಾಗಿದ್ದು, ಮಿಲ್ಲಿಂಗ್ ಮಾಡಿ ಇಕೋಫಿಕ್ಸ್ ಬಳಸಿ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.












Click it and Unblock the Notifications