ಯುವತಿಯನ್ನು ಟ್ರೋಲ್ ಮಾಡಿದ ಹುಡಗನ ತಲೆ ಸೀಳಿದ ಪುಂಡರ ಗ್ಯಾಂಗ್ ಸೆರೆ
ಬೆಂಗಳೂರು, ಅ. 05: ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲ ತಾಣದಲ್ಲಿ ಅಪರಿಚಿತರಿಗೆ ಸಂದೇಶ ಕಳಿಸುವ ಚಾಳಿ ಅನೇಕರು ಮೈಗೂಡಿಸಿಕೊಂಡಿದ್ದಾರೆ. ಈ ಸಂದೇಶಗಳು ಒಮ್ಮೆ ಜೀವಕ್ಕೆ ಕುತ್ತು ತಂದು ಬಿಡುತ್ತವೆ. ಅಂತದ್ದೇ ಒಂದು ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯುವತಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂದೇಶ ರವಾನಿಸಿದ ಯುವಕನ ಕೊಲೆಗೆ ಸ್ಕೆಚ್ ಹಾಕಿದ ನಾಲ್ವರು ಪುಂಡರು ಜೈಲು ಪಾಲಾಗಿದ್ದಾರೆ. ತನ್ನ ಹುಡುಗಿಗೆ ಮೆಸೇಜ್ ಮಾಡಿ ಟ್ರೋಲ್ ಮಾಡಿಸಿದ್ದಾನೆ ಎಂದು ಭಾವಿಸಿ ಪುಂಡರ ಗ್ಯಾಂಗ್ ಯುವಕನ ತಲೆ ಸೀಳಿದೆ. ಕೊಲೆಗೆ ಯತ್ನಿಸಿದ ನಾಲ್ವರು ಜೈಲು ಪಾಲಾಗಿದ್ದಾರೆ.
ಯುವತಿಯೊಬ್ಬಳಿಗೆ ನವೀನ್ ಎಂಬಾತ ಇನ್ಸ್ಟಾಗ್ರಾಮ್ ಜಾಲ ತಾಣದಲ್ಲಿ ಮೆಸೇಜ್ ಕಳಿಸಿದ್ದಾನೆ. ಇದರಿಂದ ಕುಪಿತಗೊಂಡ ಪಟ್ಟೆಗಾರಪಾಳ್ಯದ ಪ್ರಜ್ವಲ್ ಎಂಬಾತ, ಪೋನ್ ಮಾಡಿ ನವೀನ್‌ಗೆ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಅದೇ ಯುವತಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಮಾಡಿದ್ದಾರೆ. ನವೀನ ನನ್ನ ಹುಡುಗಿಯನ್ನು ಟ್ರೋಲ್ ಮಾಡಿಸಿದ್ದಾನೆ ಎಂದು ಭಾವಿಸಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದಾನೆ.

ಅದರಂತೆ ರಾಜೀ ಮಾತುಕತೆಗೆಂದು ನವೀನ್ ನನ್ನು ಮಾಚೋಹಳ್ಳಿಯ ಕಾಮತ್ ಬಡಾವಣೆ ಬಳಿ ಕರೆಸಿಕೊಂಡ ಪ್ರಜ್ವಲ್ ಮತ್ತು ತಂಡ ಮಾರಕಸ್ತ್ರಗಳಿಂದ ದಾಳಿ ಮಾಡಿದ್ದಾರೆ. ನವೀನ್ ಮತ್ತು ಅತನ ಗೆಳೆಯ ಹರೀಶ್ ಎಂಬಾತನ ಮೇಲೆ ತಲೆ ಮತ್ತು ಹೊಟ್ಟೆ ಮೇಲೆ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಘಟನೆ ಸಂಬಂಧ ತನಿಖೆ ನಡೆಸಿದ ಮಾದನಾಯಕನಹಳ್ಳಿ ಪೊಲೀಸರು, ಪ್ರಜ್ವಲ್ ಕಿರಣ್ಮ ಮನೋಜ್, ಮೂರ್ತಿ, ಸಂದೀಪ್ ಎಂಬುವರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಯುವರಾಜ್, ದರ್ಶನ್, ಕುಮಾರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ತರಕಾರಿ ವ್ಯಾಪಾರಿಗಳ ಧ್ವನಿವರ್ಧಕಗಳಿಂದ ಶಬ್ಧ ಮಾಲಿನ್ಯ:
ವಸತಿ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಕರ್ಕಶ ಶಬ್ಧ ಮಾಡುವ ತರಕಾರಿ ವ್ಯಾಪಾರಿಗಳಿಗೆ ಎಚ್ಚರಿಕೆ. ತರಕಾರಿ ಮಾರಲು ಧ್ವನಿ ವರ್ಧಕ ಬಳಿಸಿ ಕೂಗಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳಿಗೆ ಅಡಚಣೆ ಉಂಟು ಮಾಡಿದರೆ ಕರ್ಕಶ ಸದ್ದು ಮಾಡುವ ಧ್ವನಿವರ್ಧಕಗಳು ಪೊಲೀಸ್ ಠಾಣೆ ಸೇರಲಿವೆ. ಹೌದು ವಸತಿ ಪ್ರದೇಶದಲ್ಲಿ ಧ್ವನಿವರ್ಧಕ ಬಳಿಸಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ಅಡಚಣೆ ಉಂಟು ಮಾಡುತ್ತಿದ್ದ ತರಕಾರಿ ವ್ಯಾಪಾರಿಗಳ ವಿರುದ್ಧ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲ ದಿನವೇ ಹದಿನೈದು ತರಕಾರಿ ವ್ಯಾಪಾರಿಗಳ ಕರ್ಕಶ ಧ್ವನಿ ವರ್ಧಕಗಳನ್ನು ಜಪ್ತಿ ಮಾಡಿದ್ದಾರೆ. ಬಳಿಕ ಬುದ್ಧಿವಾದ ಹೇಳಿ ವಾಪಸು ನೀಡಿ ಕಳುಹಿಸಲಾಗಿದೆ.

ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದಂತೆ ವಸತಿ ಪ್ರದೇಶಗಳಲ್ಲಿ ತರಕಾರಿ ವ್ಯಾಪಾರಿಗಳು ಮೆಗೋ ಪೋನ್ ಬಳಿಸಿ ತರಕಾರಿ ಬಗ್ಗೆ ಪ್ರಕಟಣೆ ನೀಡುವುದು ಸಾಮಾನ್ಯ. ಈ ಧ್ವನಿಯಿಂದ ವೃದ್ಧರಿಗೆ ಹಾಗೂ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ಕಿರಿಕಿರಿ ಉಂಟು ಆಗುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪುಲಿಕೇಶಿನಗರ, ಹಟ್ಸನ್ ರಸ್ತೆ, ವ್ಹೀಲರ್ಸ್ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಹದಿನೈದು ತರಕಾರಿ ವ್ಯಾಪಾರಿಗಳ ಮೆಗಾ ಪೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಮೆಗಾ ಪೋನ್ ಬಳಿಸಿ ಪ್ರಕಟಣೆ ನೀಡದಂತೆ ತಿಳುವಳಿಕೆ ನೀಡಲಾಗಿದೆ.

Recommended Video
ಈ ಕುರಿತು ಪ್ರಕಟಣೆ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು, ತರಕಾರಿ ವ್ಯಾಪಾರಿಗಳು ಬದುಕಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಯಾರೂ ಮೆಗಾ ಪೋನ್ ಬಳಿಸಿ ವೃದ್ಧರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ತೊಂದರೆ ಮಾಡುವ ರೀತಿಯಲ್ಲಿ ಮೆಗಾ ಪೋನ್ ಬಳಿಸಿ ಕೂಗಬಾರದು. ಶಬ್ದಮಾಲಿನ್ಯದಿಂದ ಜನರಿಗೆ ತೊಂದರೆ ಆಗುತ್ತಿದ್ದು, ಇಂತಹ ಪೋನ್ ಬಳಿಸಿ ಜೋರಾಗಿ ಕೂಗಿದರೆ ಇನ್ಮುಂದೆ ಕಾನೂನು ಕ್ರಮ ಜರುಗಿಸಲಾಗುವುದು. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications