ಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ
Recommended Video
ತುಮಕೂರು, ಅಕ್ಟೋಬರ್ 12: ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ಆದ ಬೆನ್ನಲ್ಲೆ ಪರಮೇಶ್ವರ್ ಅವರ ಆಪ್ತ ರಮೇಶ್ ಅವರು ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಗ್ರೌಂಡ್ರ್ ಬಳಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಶವ ಪತ್ತೆ ಆಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಹಲವು ವರ್ಷಗಳಿಂದ ರಮೇಶ್ ಅವರು ಪರಮೇಶ್ವರ್ ಗೆ ಆಪ್ತರಾಗಿದ್ದಾರೆ. ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ಆದಾಗ ರಮೇಶ್ ಅವರನ್ನೂ ಸಹ ಹಲವು ಗಂಟೆಗಳ ಕಾಲ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಇಂದು ಬೆಳಿಗ್ಗೆ ಹಲವರಿಗೆ ಕರೆ ಮಾಡಿದ್ದ ರಮೇಶ್ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದರು. ರಮೇಶ್ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು, ಆದರೆ ಕೆಲವೇ ಹೊತ್ತಿನ ಮುಂಚೆ ಅವರು ಹೆಣವಾಗಿ ಪತ್ತೆ ಆಗಿದ್ದಾರೆ.

ರಮೇಶ್ ಆತ್ಮಹತ್ಯೆ ಅನುಮಾನಕ್ಕೆ ದಾರಿಯಾಗಿದೆ
ಐಟಿ ಅಧಿಕಾರಿಗಳಿಂದ ತೀವ್ರ ವಿಚಾರಣೆಗೆ ಒಳಪಟ್ಟ ಬೆನ್ನಲ್ಲೇ ರಮೇಶ್ ಆತ್ಮಹತ್ಯೆಗೆ ಶರಣಾಗಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ. ರಮೇಶ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಇರುವುದು ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ ಎಂಬ ಮಾಹಿತಿ ಇದೆ.

ಕೆಪಿಸಿಸಿ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ರಮೇಶ್
ರಮೇಶ್ ಅವರು ಕೆಪಿಸಿಸಿ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದರು. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಿನಿಂದಲೂ ಜೊತೆಗೆ ಇಟ್ಟುಕೊಂಡಿದ್ದರು. ರಮೇಶ್ ಅವರು ಕುಣಿಗಲ್‌ನ ಮೆಳ್ಳೆಹಳ್ಳಿ ಗ್ರಾಮದವರಾಗಿದ್ದರು.

ಅಕ್ಟೋಬರ್ 9 ರಿಂದ ರಮೇಶ್ ವಿಚಾರಣೆ
ಅಕ್ಟೋಬರ್ 9 ರಂದಿನಿಂದ ಐಟಿ ಅಧಿಕಾರಿಗಳು ರಮೇಶ್ ಅವರನ್ನು ವಿಚಾರಣೆಗೆ ಒಳಪಡಸಿದ್ದರು. ಐಟಿ ಅಧಿಕಾರಿಗಳು ರಮೇಶ್ ಅವರನ್ನು ಕಾರಿನಲ್ಲಿ ಕರೆದೊಯ್ಯುವ ದೃಶ್ಯಗಳು ಮಾಧ್ಯಮದ ಕ್ಯಾಮೆರಾಗಳಲ್ಲಿ ಸೆರೆ ಆಗಿದ್ದವು. ಇಂದು ಬೆಳಗ್ಗಿನವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಮುಗಿದ ಬಳಿಕ ಅವರು ನೇಣಿಗೆ ಶರಣಾಗಿದ್ದಾರೆ.

ಒಂಬತ್ತು ಗಂಟೆ ವೇಳೆಗೆ ಸ್ವೇಹಿತರಿಗೆ ಕರೆ ಮಾಡಿದ್ದ ರಮೇಶ್
ಒಂಬತ್ತು ಗಂಟೆ ವೇಳೆಗೆ ಕೆಲವು ಆಪ್ತರಿಗೆ ಕರೆ ಮಾಡಿದ್ದ ರಮೇಶ್ ಅವರು, ತುಂಬಾ ಪ್ರಶ್ನೆಗಳನ್ನು ಐಟಿಯವರು ಕೇಳುತ್ತಿದ್ದಾರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ನಂತರ ಪೊಲೀಸರ ನೆರವಿನೊಂದಿಗೆ ಅವರನ್ನು ಹುಡುಕುವ ಯತ್ನ ಮಾಡಿದಾಗ ಜ್ಞಾನ ಭಾರತಿ ಕ್ಯಾಂಪಸ್ ವ್ಯಾಪ್ತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಪತ್ತೆಯಾಗಿದ್ದರು.

ಚನ್ನಪಟ್ಟಣದಲ್ಲಿ ಮನೆ, ಬೆಂಗಳೂರಲ್ಲಿ ಸೈಟು
ರಮೇಶ್ ಅವರಿಗೆ ಚನ್ನಪಟ್ಟಣದಲ್ಲಿ ಮೂರು ಅಂತಸ್ಥಿನ ಮನೆ ಒಂದು ಮನೆ ಇದೆ. ಬೆಂಗಳೂರಿನಲ್ಲಿ ಮನೆ ಹಾಗೂ ಬೆಂಗಳೂರಿನ ಕೆಲವು ಕಡೆ 4 ಸೈಟುಗಳನ್ನು ರಮೇಶ್ ಹೊಂದಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಇದೆ.












Click it and Unblock the Notifications