ಬೆಂಗಳೂರಿನಿಂದ ನೆರೆ ರಾಜ್ಯಗಳಿಗೆ ಪ್ರಾಣಿ ತ್ಯಾಜ್ಯ ಅಕ್ರಮ ಸಾಗಾಟ: ಖಾಕಿ ಸಹಾಯ ಕೋರಿದ ಬಿಬಿಎಂಪಿ
ಬೆಂಗಳೂರು, ಆಗಸ್ಟ್ 18: ರಾಜ್ಯ ರಾಜಧಾನಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ನೂರಾರು ಟನ್ ಪ್ರಾಣಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಜಾಲವೊಂದು ಸಕ್ರಿಯವಾಗಿದೆ. ಹೀಗೆ ಮಾಡುವುದು ಅಪರಾಧ ಎಂದು ಹೇಳುವ ಬಿಬಿಎಂಪಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಂಬಂಧ ಬಿಬಿಎಂಪಿ ಪೊಲೀಸರ ಸಹಾಯ ಕೇಳಿದೆ.
ಬೆಂಗಳೂರು ನಗರದಲ್ಲಿ ಕೋಳಿ ಮತ್ತು ಮೀನು ಮಳಿಗೆಗಳಿಂದ ನಿತ್ಯ ಉತ್ಪತ್ತಿ ಆಗುವ ಸುಮಾರು 150 ರಿಂದ 250 ಟನ್ ಪ್ರಾಣಿಗಳ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ, ಸಂಬಂಧಪಟ್ಟ ಸಂಸ್ಥೆಗಳು, ಅಧಿಕಾರಿಗಳ ಗಮನಕ್ಕೆ ತರದೇ ನೆರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಮುಖ್ಯವಾಗಿ ಈ ತ್ಯಾಜ್ಯವನ್ನು ಕ್ಯಾಟ್‌ಫಿಶಿಂಗ್‌ಗೆ ಬಳಕೆ ಮಾಡಲಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸದ್ಯ ಇಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯದ ಅಕ್ರಮ ಸಾಗಣೆ ತಡೆಯಲು ಬಿಬಿಎಂಪಿ ಅಧಿಕಾರಿಗಳು ಪೊಲೀಸರ ನೆರವು ಕೋರಿದ್ದಾರೆ. ಅಕ್ರಮವಾಗಿ ಪ್ರಾಣಿ ತ್ಯಾಜ್ಯ ಹೊತ್ತು ಸಾಗುವ ವಾಹನಗಳನ್ನು ಪತ್ತೆಗೆ ಚೆಕ್‌ಪೋಸ್ಟ್ ನಿರ್ಮಿಸುವಂತೆ ಸಂಚಾರಿ ಪೊಲೀಸರಿಗೆ ಬಿಬಿಎಂಪಿ ಅಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪೊಲೀಸರಿಗೆ ಚೆಕ್‌ಪೋಸ್ಟ್ ಸ್ಥಾಪಿಸಲು ಮನವಿ
ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಹಾಗೂ ಪತ್ತೆಯು ಪೊಲೀಸ್ ವ್ಯಾಪ್ತಿಯಲ್ಲಿ ಬರುವುದರಿಂದ ಬಿಬಿಎಂಪಿ ಪತ್ರ ಬರೆದಿದೆ. ಅಲ್ಲದೇ ಚೆಕ್‌ಪೋಸ್ಟ್ ಸ್ಥಾಪಿಸುವುದರಿಂದ ಇಂತಹ ಅಕ್ರಮ ತ್ಯಾಜ್ಯ ಸಾಗಾಣೆ ಪತ್ತೆ ಹೆಚ್ಚಬಹುದೆಂದು ಪಾಲಿಕೆ ಕೋರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿ ಹೇಳುವುದನ್ನು ನೋಡಿದರೆ, ನಗರದ ರೆಂಡರಿಂಗ್ ಘಟಕಗಳು ಮತ್ತು ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳು ಪಡೆದಿವೆ. ದಾಬಾಸ್‌ಪೇಟೆ, ರಾಮನಗರ ಹಾಗೂ ದೊಡ್ಡಬಳ್ಳಾಪುರದಲ್ಲಿ ಖಾಸಗಿ ವ್ಯಕ್ತಿಗಳು ಈ ಘಟಕಗಳನ್ನು ನಡೆಸುತ್ತಾರೆ.
ಮೂರು ಘಟಕಗಳಿಂದ 100ಟನ್ ಪ್ರಾಣಿ ತ್ಯಾಜ್ಯ ಸಂಸ್ಕರಣೆ
ಈ ಖಾಸಗಿ ವ್ಯಕ್ತಿಗಳು ಸಕ್ಷಮ ಪ್ರಾಧಿಕಾರವಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆಗಾಗಿ (CFO) ಒಪ್ಪಿಗೆ ಪಡೆದಿರುತ್ತಾರೆ. ಈ ಮೂರು ಘಟಕಗಳು ದೈನಂದಿನಲ್ಲಿ 100 ಟನ್‌ಗೂ ಹೆಚ್ಚು ಪ್ರಾಣಿ ತ್ಯಾಜ್ಯವನ್ನು ಸಂಸ್ಕರಿಸತ್ತವೆ.
ಘಟಕಗಳ ದಾಖಲಾತಿ ಮತ್ತು ಸಾಮರ್ಥ್ಯಪರಿಶೀಲನೆ ಬಳಿಕವೇ ಪ್ರಾಣಿಗಳ ತ್ಯಾಜ್ಯ ಸಂಗ್ರಹಕ್ಕೆ, ಅದರ ವಿಲೇವಾರಿಗೆ ಬಿಬಿಎಂಪಿ ಈ ಖಾಸಗಿ ವ್ಯಕ್ತಿಗಳಿಗೆ ಅನುಮತಿಸುತ್ತದೆ. ಹೀಗೆ ಅನುಮತಿ ಪಡೆಯುವ ಸೇವಾ ಪೂರೈಕೆದಾರರು ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕೋಳಿ, ಮೀನು ತ್ಯಾಜ್ಯವನ್ನು ಆಯಾ ಅಂಗಡಿಯಿಂದ ಸಂಗ್ರಹಿಸುತ್ತಾರೆ. ಸಂಸ್ಕರಿಸಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ಸಾಕುಪ್ರಾಣಿಗಳ ಆಹಾರವಾಗಿ ನೀಡುತ್ತಾರೆ. ಇಲ್ವೇ ಜೈವಿಕ ಗೊಬ್ಬರ ತಯಾರಿಕೆಗೆ ಕಚ್ಚಾ ವಸ್ತುವಾಗಿ ಪರಿವರ್ತಿಸಲಾಗುತ್ತದೆ.
ಸಾರ್ವಜನಿಕರಿಂದ ಬಿಬಿಎಂಪಿ ದೂರು ಸ್ವೀಕಾರ
ಆದರೆ ಇದೆಲ್ಲಕ್ಕೂ ವಿರುದ್ಧವಾಗಿ ಕೆಲವರು ಇದನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಸಾಗಿಸುತ್ತಿದ್ದು, ಕ್ಯಾಟ್‌ಫಿಶ್ ಸಾಕುತ್ತಿರುವ ರೈತರಿಗೆ ಅಕ್ರಮವಾಗಿ ಈ ತ್ಯಾಜ್ಯವನ್ನು ಪೂರೈಸುತ್ತಿದ್ದಾರೆ. ಈ ಸಂಬಂಧ ನಾವು (ಬಿಬಿಎಂಪಿ) ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಆರಂಭಿಸಿದ್ದೇವೆ. ಹೀಗೆ ಪ್ರಾಣಿ ತ್ಯಾಜ್ಯವನ್ನು ಸಂಬಂಧಿ ಅಧಿಕಾರಿಗಳ ಗಮನ್ನೆ ತರದೇ ಸಾಗಾಣೆ ಮಾಡುವುದು ಅಪರಾಧವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಬರೆದ ಪತ್ರಕ್ಕೆ ಪೊಲೀಸ್ ಇಲಾಖೆಯಿಂದ ಯಾವ ಪ್ರತಿಕ್ರಿಯೆ ಬಂದಿದೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಬಿಬಿಎಂಪಿಗೆ ಸಂಚಾರಿ ಪೊಲೀಸರು ಸಹಕರಿಸಿದ್ದೇ ಆದಲ್ಲಿ ಈ ಅಕ್ರಮ ಪ್ರಾಣಿ ತ್ಯಾಜ್ಯ ಸಾಗಾಣೆಗೆ ಬ್ರೇಕ್ ಬೀಳಲಿದೆ.












Click it and Unblock the Notifications