'Free Kashmir' ಬೆಂಗಳೂರಿನಲ್ಲೂ ರಾರಾಜಿಸಿದ ಗೋಡೆ ಬರಹಗಳು!
ಬೆಂಗಳೂರು, ಜನವರಿ 14: ಮೈಸೂರಿನಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶನದ ನಂತರ 'ಫ್ರೀ ಕಾಶ್ಮೀರ'ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಗೋಡೆ ಬರಹಗಳ ಹಾವಳಿ ತಲೆ ಎತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಿಡಗೇಡಿಗಳಿಂದ ಇಂತಹ ದುಷ್ಕೃತ್ಯ ನಡೆದಿದೆ.
ವಿಧಾನಸೌಧದ ಕೂಗಳತೆ ದೂರದಲ್ಲಿರುವ ಚರ್ಚ್ ಸ್ಟ್ರೀಟ್ ನ ಕಾಂಪೌಂಡ್‌ಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳ ಶಟರ್‌ಗಳ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಸ್ಪ್ರೇ ಬಣ್ಣದಿಂದ ಬರೆಯಲಾಗಿದೆ. 'ಫ್ರೀ ಕಾಶ್ಮೀರ' ಹೇಳಿಕೆಯನ್ನು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಎ ವಿರೋಧಿಸಿ ಹೇಳಿಕೆಗಳನ್ನು ಬರೆದು ಪ್ರಚೋದಿಸಲಾಗಿದೆ.

ಆಕ್ಷೇಪಾರ್ಹ ಗೋಡೆ ಬರಹಗಳು
ಬೆಂಗಳೂರಿನ ಜನನಿಬಿಡ ಸ್ಥಳವಾಗಿರುವ ಚರ್ಚ್ ಸ್ಟ್ರೀಟ್‌ನಲ್ಲಿ ಮಂಗಳವಾರ ನಸುಕಿನ 3.30 ರ ಸುಮಾರಿಗೆ ಕಿಡಿಗೇಡಿಗಳಿಬ್ಬರು (ಸಿಸಿಟಿವಿ ದಾಖಲೆಗಳ ಪ್ರಕಾರ) ಅಂಗಡಿ ಶೆಟರ್ ಹಾಗೂ ಕಾಂಪೌಂಡ್‌ಗಳ ಮೇಲೆ 'ಫ್ರೀ ಕಾಶ್ಮೀರ', (ಕಾಶ್ಮೀರ ಮುಕ್ತಗೊಳಿಸಿ) 'ಸಿಎಎ ಬೇಡ', 'ಎನ್‌ಆರ್‌ಸಿ ಬೇಡ', 'ಎನ್‌ಪಿಆರ್ ಬೇಡ', 'ಫ್ಯಾಸಿಸ್ಟ್ ಮೋದಿ', 'ಬಿಜೆಪಿ ಕ್ಯಾನ್ಸರ್ ಇದ್ದಂತೆ, ಅದು ನಿಮ್ಮನ್ನು ಕೊಲ್ಲುವ ಮುನ್ನ ನೀವು ಅದನ್ನು ಕೊಲ್ಲಿ', 'ವಾಮಿಟ್ ಶಾ (ಅಮಿತ್ ಶಾ) ರಾಜೀನಾಮೆ ನೀಡಲಿ', ಮೋದಿ, ಶಾ ಡೌನ್ ಡೌನ್ ಎಂದು ಗೋಡೆ ಬರಹಗಳನ್ನು ಬರೆಯಲಾಗಿದೆ.

ಬರಹಗಳನ್ನು ಅಳಿಸಿ ಹಾಕಿದ ಪೊಲೀಸ್
ಬೆಳಿಗ್ಗೆ ಚರ್ಚ್ ಸ್ಟ್ರೀಟ್‌ಗೆ ಹೋದವರಿಗೆ ಅಚ್ಚರಿ ಕಾದಿತ್ತು. ಆಕ್ಷೇಪಾರ್ಹ ಬರಹಗಳನ್ನು ನೋಡಿದ ಸ್ಥಳೀಯರು ಪೊಲೀಸ್‌ರಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಕಿಡಿಗೇಡಿಗಳ ಕೃತ್ಯವನ್ನು ವಿಡಿಯೋ ಚಿತ್ರಿಕರಣ ಮಾಡಿಕೊಂಡು, ನಂತರ ಬರಹಗಳನ್ನು ಅಳಿಸಿ ಹಾಕಿದ್ದಾರೆ.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಿಜೆಪಿ ಹಾಗೂ ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದೇಶ ವಿರೋಧಿ ಹೇಳಿಕೆಗಳನ್ನು ಬರೆದಿರುವವರನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ, ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಚರ್ಚ್ ಸ್ಟ್ರೀಟ್ ಸದ್ಯ ಬಿಗುವಿನ ವಾತಾವರಣದಿಂದ ಕೂಡಿದೆ. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಬಜರಂಗ ದಳದವರ ಜೊತೆ ವಾಗ್ವಾದ
ಸುದ್ದಿ ತಿಳಿದು ಸ್ಥಳಕ್ಕೆ ಬಜರಂಗ ದಳದ ಕಾರ್ಯಕರ್ತರು ಭೇಟಿ ನೀಡಿ, ಗೋಡೆ ಬರಹಗಳನ್ನು ಅಳಿಸಲು ಮುಂದಾಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ 'ಈ ರೀತಿ ಬರಹಗಳನ್ನು ಬರೆದರೆ ಏನು ತಪ್ಪು?' ಎಂದು ಪ್ರಶ್ನಿಸಿದ್ದಕ್ಕೆ ಬಜರಂಗ ದಳದ ಕಾರ್ಯಕರ್ತರು ಆ ವ್ಯಕ್ತಿಯ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಮೈಸೂರಿನಲ್ಲಿ ಫಲಕ ಪ್ರದರ್ಶನ
ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಕಳೆದ ವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಯುವಾಗ ನಳಿನಿ ಎನ್ನುವವರು ಫ್ರೀ ಕಾಶ್ಮೀರ ಫಲಕ ಹಿಡಿದು ಭಾಗಿಯಾಗಿದ್ದರು. ಇದು ಸಾಕಷ್ಟು ವಿವಾದ ಸೃಸಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೂ ಮೋದಿ, ಶಾ ಹಾಗೂ ಸಿಎಎ ವಿರೋಧಿ ಬರಹಗಳ ಪ್ರದರ್ಶನ ತಲೆ ಎತ್ತಿದ್ದು, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.












Click it and Unblock the Notifications