ವಿಮಾನ ನಿಲ್ದಾಣ ರಸ್ತೆಯ ಟೋಲ್ ದರ ಹೆಚ್ಚಳ
ಬೆಂಗಳೂರು, ಮೇ 4 : ಒಂದು ಕಡೆ ಕೆಎಸ್ಆರ್ ಟಿಸಿ ದರ ಏರಿಕೆ ಯಾದರೆ ಮತ್ತೊಂದು ಕಡೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ಶುಲ್ಕವನ್ನು ಶನಿವಾರ ಮಧ್ಯರಾತ್ರಿಯಿಂದ ಏರಿಕೆ ಮಾಡಲಾಗಿದೆ.
ಶನಿವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತರ ಟೋಲ್ ಶುಲ್ಕವನ್ನು 2 ರಿಂದ 3 ಪಟ್ಟು ಹೆಚ್ಚಳ ಮಾಡಿರುವುದು ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರಿ 12 ಗಂಟೆಗೆ ಶುಲ್ಕ ಹೆಚ್ಚಳ ವಿರೋಧಿಸಿ ಸವಾರರು ಪ್ರತಿಭಟನೆ ನಡೆಸಿದರು. ಭಾನುವಾರ ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

22 ಕಿ.ಮೀ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಒಂದು ಬಾರಿ ಪ್ರಯಾಣಿಸಲು ಕಾರು, ಜೀಪು, ಹಗುರ ವಾಹನಗಳು 75 ರೂ., ಲಘು ವಾಣಿಜ್ಯ ವಾಹನ ಹಾಗೂ ಮಿನಿ ಬಸ್ಸುಗಳು 120 ರೂ., ಬಸ್, ಲಾರಿ ಹಾಗೂ ಎರಡು ಆ್ಯಕ್ಸಲ್ ವಾಹನಗಳು 235, ಮೂರರಿಂದ ಆರು ಆ್ಯಕ್ಸಲ್ ವಾಹನಗಳು 380 ರೂ. ಹಾಗೂ ಜೆಸಿಬಿಯಂತಹ ಬೃಹತ್ ಗಾತ್ರದ ವಾಹನಗಳು 470 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ. [ಬೆಂಗಳೂರು-ಹಾಸನ ರಸ್ತೆಯಲ್ಲಿ ಟೋಲ್ ಕಟ್ಟಬೇಕು]
ಹೆದ್ದಾರಿಯಲ್ಲಿ ಹಿಂದೆ ಇದ್ದ ಶುಲ್ಕವೇ ಹೆಚ್ಚಾಗಿತ್ತು. ಸದ್ಯ ಯಾವುದೇ ಮಾಹಿತಿ ನೀಡಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕವನ್ನು ಮತ್ತಷ್ಟು ಹೆಚ್ಚಳ ಮಾಡಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ, ಸಮರ್ಪಕ ತಡೆಗೋಡೆ ಹಾಗೂ ಸರಿಯಾದ ಮಾರ್ಗಸೂಚಿಗಳಿಲ್ಲ, ಆದರೂ ಟೋಲ್ ಶುಲ್ಕ ಮಾತ್ರ ಹೆಚ್ಚಿಸಲಾಗಿದೆ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರ ನಿಯೋಜನೆ : ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಎರಡು ಟೋಲ್ ಕೇಂದ್ರಗಳಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರರನ್ನು ನಿಯೋಜಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕೆಲವು ಸಂಘಟನೆಗಳು ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸುತ್ತಿವೆ.












Click it and Unblock the Notifications