ಉದ್ಯಮಿಗಳಿಗೆ ಟೋಪಿ ಹಾಕಿ ಉದ್ಯಮ ಕಟ್ಟಿದ್ದ ವಂಚಕರ ಚಿನ್ನದ ಗಟ್ಟಿ ಸ್ಟೋರಿ
ಬೆಂಗಳೂರು, ಡಿ. 24: ನಿರುದ್ಯೋಗಿ ಯುವಕನಿಗೆ ಕಂಪನಿ ಎಂಡಿ ಹುದ್ದೆ ನೀಡಿದ್ದರು. ಆತನದ್ದೇ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಕಂಪನಿಯೊಂದು ತೆರೆದಿದ್ರು. ಖರೀದಿಸಿದ ಚಿನ್ನಕ್ಕೆ ಬರೋಬ್ಬರಿ 33 ಲಕ್ಷ ಜಿಎಸ್ ಟಿ ತೆರಿಗೆ ಪಾವತಿಸಿದ್ದರು. ಅಬ್ಬಾ ಇವರೆಂಥಾ ಸಾಧಕರು ಎಂದು ಖುಷಿಪಡಬೇಡಿ. ಉದ್ಯಮಿಗಳಿಗೆ ಲೋನ್ ಕೊಡಿಸುವ ನೆಪಲ್ಲಿ ಕೋಟಿ ಕೋಟಿ ವಂಚಿಸಿ ಜೈಲು ಸೇರಿರುವ ಖತರ್ನಾಕ್ ಕಿಲಾಡಿಗಳ ಸ್ಟೋರಿ.
ಈ ಖದೀಮರು ಓಡಾಡಲಿಕ್ಕೆ ಐಶಾಮಿ ಕಾರುಗಳನ್ನೇ ಬಳಸುತ್ತಿದ್ದರು. ಚಿನ್ನದ ಒಡವೆ ಖರೀದಿ ಮಾಡಿದ್ರೆ ವೆಸ್ಟೇಜ್ ಹೋಗುತ್ತೆ ಅಂತ ಆರು ಕೋಟಿ ರೂ. ಪಾವತಿಸಿ ಚಿನ್ನದ ಗಟ್ಟಿಗಳನ್ನು ಖರೀದಿಸಿದ್ದರು. ಸರ್ಕಾರಕ್ಕೆ 33 ಲಕ್ಷ ರೂ. ಜಿಎಸ್ ಟಿ ಪಾವತಿಸಿದ್ದರು. ಆದರೆ ಇವರ ವಿರುದ್ಧ ದಾಖಲಾದ ಒಂದು ದೂರಿನಿಂದ ಇವರ ಅಸಲಿ ಕಥೆ ಬೆಳಕಿಗೆ ಬಂದಿದೆ.

ವಂಚಕ ಕಂಪನಿ ಹುಟ್ಟುಹಾಕಿದ್ರು:
ಉದ್ಯಮಿಗಳಿಗೆ ಸಾಲ ಕೊಡಿಸುವ ಕನ್ಸಲ್ಟೆನ್ಸಿ ಹೆಸರಿನಲ್ಲಿ ಕಂಪನಿ ಹುಟ್ಟು ಹಾಕಿದ್ದ ಐವರು ವಂಚಕರು, ಬಾಡಿಗೆಗೆ ಕಂಪ್ಯೂಟರ್ ಮತ್ತು ಕುರ್ಚಿ ತಂದು ಹಾಕಿದ್ದರು. ಏಸ್ ವೆಂಚರ್ಸ್ ಕ್ಯಾಪಿಟಲ್ ಮ್ತು ಎಂಓಯು ಗ್ರೂಪ್ ಆಫ್ ಕಂಪನಿ ಎಂಬ ಎರಡು ಕಂಪನಿ ತೆರೆದಿದ್ದರು. ಕೆಲಸ ಹುಡುಕುತ್ತಿದ್ದ ನಿರುದ್ಯೋಗಿ ಯುವಕನ್ನು ಎಂಡಿ ಮಾಡಿದ್ರು. ಕಚೇರಿ ನೋಡಿದವರಿಗೆ ದೊಡ್ಡ ಉದ್ಯಮಿಗಳ ತರಹ ಫೋಸ್ ಕೊಡುತ್ತಿದ್ದರು.

ಉದ್ಯಮಿಗಳಿಗೆ ಗಾಳ
ನಿರುದ್ಯೋಗಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದ ಕಿರಾತಕರು ಉದ್ಯಮಿಗಳಿಗೆ ಕೋಟಿ ಕೋಟಿ ಸಾಲ ಕೊಡಿಸುವ ಅಮಿಷೆ ಒಡ್ಡಿದರು. ಪಾಪ ಉದ್ಯಮ ಸ್ಥಾಪಿಸುವ ಆಸೆ ಹೊತ್ತು ಒಂದಷ್ಟು ಕಾಸು ಇಟ್ಟುಕೊಂಡಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಲೋನ್ ಕೊಡಿಸುವ ಬಗ್ಗೆ ಪುಕ್ಕಟ್ಟೆ ಭಾಷಣ ಹೊಡೆದಿದ್ದಾರೆ. ಇದನ್ನು ನಂಬಿ ಉದ್ಯಮ ಕಟ್ಟಲು ಮುಂದಾದವರು ಈ ವಂಚಕರಿಂದ ಹಣಕಾಸು ಸಲಹೆ ಪಡೆದು ಕಮೀಷನ್ ಮತ್ತು ಮೂರು ತಿಂಗಳ ಬಡ್ಡಿ ಗ್ಯಾರೆಂಟಿ ಹೆಸರಿನಲ್ಲಿ ಕೋಟಿಕೋಟಿ ಸುರಿದಿದ್ದಾರೆ. ಸಾಲ ಕೊಡಿಸುವುದಾಗಿ ಆಸೆ ಹುಟ್ಟಿಸಿ ಉದ್ಯಮಿಗಳಿಂದ ಹಣ ಪಡೆದಿದ್ದಾರೆ. ಸುಮಾರು 390 ಕೋಟಿ ರೂ. ಲೋನ್ ಕೊಡಿಸುವ ಆಸೆ ಹುಟ್ಟಿಸಿ ಹಲವು ಉದ್ಯಮಿಗಳಿಂದ ಹಣ ಪಡೆದ್ದಾರೆ.

ಯಾವ ಲೋನ್ ಇಲ್ಲ
ಹೀಗೆ ಮುಂಗಡವಾಗಿ ಬಡ್ಡಿ ಹಾಗೂ ಕಮೀಷನ್ ಪಡೆದಿದ್ದ ಕಿರಾತಕರು ಮೋಜು ಮಸ್ತಿ ಮಾಡಲು ಆರಂಭಿಸಿದ್ದಾರೆ. ಎರಡು ಐಶರಾಮಿ ಕಾರು ಖರೀದಿ ಮಾಡಿದ್ದಾರೆ. ಆನಂತರ ಸುಮಾರು ಆರು ಕೋಟಿ ವೆಚ್ಚ ಮಾಡಿ 11 ಕೆ.ಜಿ ಚಿನ್ನದ ಗಟ್ಟಿ ಖರೀದಿ ಮಾಡಿದ್ದಾರೆ. ಇಬ್ಬರು ಉದ್ಯಮಿಗಳಿಂದ ಪಡೆದಿದ್ದ ಆರು ಕೋಟಿ ಹಣದಲ್ಲಿ ಕೆಜಿ ಗಟ್ಟಲೇ ಚಿನ್ನ ಖರೀದಿ ಮಾಡಿ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚಕರ ಬಲೆಗೆ ಬಿದ್ದು ಮೋಸ ಹೋದ ಗಿರೀಶ್ ಮತ್ತು ಪಣಿತರನ್ ಎಂಬ ಉದ್ಯಮಿಗಳು ಸುದ್ದುಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೊನೆಗೂ ಬಲೆಗೆ ಬಿದ್ದ ವಂಚಕರು
ನಿರುದ್ಯೋಗಿಯನ್ನು ಎಂಡಿ ಮಾಡಿ ಉದ್ಯಮಿಗಳಿಗೆ ದೋಖಾ ಮಾಡಿ ಪರಾರಿಯಾಗಿದ್ದ ಐವರು ಅಂತರರಾಜ್ಯ ವಂಚಕರನ್ನು ಕೊನೆಗೂ ಸುದ್ದುಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಶಿವರಾಮನ್ , ರಘುವರನ್, ಸಯ್ಯದ್ ಇಬ್ರಾಹಿಂ, ರಾಘವನ್ ಅಲಿಯಾಸ್ ಕ್ರಿಸ್ಟೋಪರ್, ವಿವೇಕ್ ಬಂಧಿತ ಅರೋಪಿಗಳು. ಬಂಧಿತರಿಂದ ಎಂಟು ಕೆ.ಜಿ. ಚಿನ್ನ, 36 ಲಕ್ಷ ರೂ. ನಗದು, ಎರಡು ಕಾರು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ತಲೆ ಮೆಸಿಕೊಂಡಿದ್ದ ಆರೋಪಿಗಳು ಪೊಲೀಸರು ತನಿಖೆ ಸುಳಿವು ಪಡೆದು ಕೇರಳಾಗೆ ಎಸ್ಕೇಪ್ ಆಗಿದ್ದರು. ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ನಿರುದ್ಯೋಗಿಗೆ ಪೀಕಲಾಟ
ಇನ್ನು ನಿರುದ್ಯೋಗಿಯನ್ನು ಎಂಡಿ ಮಾಡಿದ್ದ ವಂಚಕರು, ಆತನಿಗೆ ಸುಳಿವು ನೀಡದಂತೆ ವಂಚನೆ ಮಾಡಿದ್ದರು. ಕೇವಲ ಆರು ತಿಂಗಳ ವಂಚನೆ ಪ್ಲಾನ್ ಮಾಡಿ ಕಾರ್ಯಗತ ಮಾಡಿದ್ದಾರೆ. ಹಣ ಪಡೆದು ಎಸ್ಕೇಪ್ ಆದ ಬಳಿಕ ವಂಚಕರ ಕಥೆ ಕೇಳಿ ನಿರುದ್ಯೋಗಿ ಎಂಡಿ ಜೀವನ ಇಂಗು ತಿಂದ ಮಂಗನಂತಾಗಿದೆ. ಇನ್ನು ಇದೇ ಪ್ರಕರಣದಲ್ಲಿ ತನಿಖೆ ಎದುರಿಸಿದ್ದ ಗಾಯಿಕಿ ಹರಿಣಿ ಅವರ ತಂದೆ ಎ.ಕೆ. ರಾವ್ ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಐವರು ವಂಚಕರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.












Click it and Unblock the Notifications