BBMP ಕಚೇರಿಯಲ್ಲಿ ಅಗ್ನಿ ಅವಘಡ: ವ್ಯಾಪಕ ಟೀಕೆ ಬೆನ್ನಲ್ಲೇ "ಆ" ಟ್ವೀಟ್ ಡಿಲೀಟ್ ಮಾಡಿದ ಕಾಂಗ್ರೆಸ್
ಬೆಂಗಳೂರು, ಆಗಸ್ಟ್, 12: ನಿನ್ನೆ ನಡೆದ ಬಿಬಿಎಂಪಿ ಅಗ್ನಿ ಅವಘಡದ ವಿಚಾರದಲ್ಲಿ ರಾಜಕೀಯ ಬೇಳೆ ಜೋರಾಗಿ ಬೇಯುತ್ತಿದೆ. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಾಕ್ಸಮರದಲ್ಲಿ ತೊಡಗಿಕೊಂಡಿವೆ. ಈ ನಡುವೆ, ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಟ್ವೀಟ್ ಅನ್ನು ಡಿಲಿಟ್ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಗ್ನಿ ಅವಘಡದ ಹಿಂದೆ ಬಿಜೆಪಿ ಕೈವಾಡವಿದೆ, ದಾಖಲೆಗಳ ನಾಶ ಮಾಡುವ ಪ್ರಯತ್ನ ಅಂತೆಲ್ಲಾ ಕಾಂಗ್ರೆಸ್ ಆರೋಪ ಮಾಡಿತ್ತು. ಈ ಸಂಬಂಧ ಘಟನೆ ನಡೆದ ಅರ್ಧ ಗಂಟೆಯಲ್ಲೇ ಟ್ವೀಟ್ ಕೂಡ ಮಾಡಿದ್ದು, ಇದು ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಖಾತೆಯಿಂದ ಟ್ವೀಟ್ ಡಿಲಿಟ್ ಕೂಡ ಆಗಿದೆ. ಇದು, ಇನ್ಯಾವ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

ಈ ನಡುವೆ ಗಾಯಾಳುಗಳ ಪರಿಸ್ಥಿತಿ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ. ಈಗಾಗಲೇ, ವೈದ್ಯರ ತಂಡದಿಂದ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇವೆ. ಎಲ್ಲಾ ಸ್ಪೆಷಾಲಿಸ್ಟ್ ವೈದ್ಯರಿಂದ ಟ್ರೀಟ್ಮೆಂಟ್ ನಡೆಯುತ್ತಿದೆ. ಎಲ್ಲಾ ಗಾಯಾಳುಗಳು ಸದ್ಯ ಆರಾಮಾಗಿದ್ದಾರೆ ಎಂದು ರಮೇಶ್ ಕೃಷ್ಣ ಹೇಳಿದ್ದಾರೆ .
"48 ಗಂಟೆಗಳ ಕಾಲ 9 ಜನರನ್ನು ಅಬ್ಸರ್ವೇಷನ್‌ನಲ್ಲಿ ಇಟ್ಟಿದ್ದೇವೆ. 9 ಜನರಲ್ಲಿ ಶಿವಕುಮಾರ್ ಮತ್ತು ಜ್ಯೋತಿ ಕಂಡಿಷನ್ ಕ್ರಿಟಿಕಲ್ ಇದೆ. ಇವರಿಬ್ಬರಿಗೆ ಸ್ಪೇಷಲಿಸ್ಟ್ ಡಾಕ್ಟರ್‌ಗಳಿಂದ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಎಲ್ಲರನ್ನು ಐಸಿಯುನಲ್ಲಿ ಇರಿಸಲಾಗಿದೆ" ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 9 ಜನ ಗಾಯಾಳುಗಳು ಮತ್ತು ಅವರ ಆರೋಗ್ಯ ವಿವರ ನೋಡೋದಾದರೆ, 32 ವರ್ಷದ ಮನೋಜ್ ಅವರಿಗೆ 17% ಸುಟ್ಟಗಾಯಗಳಾಗಿವೆ. ಸದ್ಯ ಅವರ ಸ್ಥಿತಿ ನಾರ್ಮಲ್ ಆಗಿದೆ. 35 ವರ್ಷದ ಕಿರಣ್ ಅವರಿಗೆ 12% ಬರ್ನಿಂಗ್ ಆಗಿದ್ದು, ಸದ್ಯ ಆರೋಗ್ಯ ಸ್ಥಿತಿ ಸುಧಾರಿಸಿದೆ. ಇನ್ನು 37 ವರ್ಷ ಶ್ರೀನಿವಾಸ ಎಂಬುವವರಿಗೆ 27% ಸುಟ್ಟಿದ್ದು, ಇವರ ಸ್ಥಿತಿ ಕೂಡ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಇನ್ನೂ 29 ವರ್ಷದ ಸೀರಾಜ್ ಅವರಿಗೆ 28% ಸುಟ್ಟಿದ್ದು, ಅವರ ಆರೋಗ್ಯ ಕೂಡ ನಾರ್ಮಲ್ ಆಗಿದೆ. 38 ವರ್ಷದ ಶ್ರೀಧರ್ ಎಂಬುವವರಿಗೆ 18% ಬರ್ನಿಂಗ್ ಆಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾರವಾಗಿಲ್ಲ. 40 ವರ್ಷದ ಶಿವಕುಮಾರ್ ಅವರಿಗೆ 25% ಬರ್ನಿಂಗ್ ಆಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. 47 ವರ್ಷದ ಸಂತೋಷ್ ಕುಮಾರ್ ಅವರಿಗೆ 11% ಬರ್ನಿಂಗ್ ಆಗಿದ್ದು, ನಾರ್ಮಲ್ ಆಗಿದ್ದಾರೆ.
ಇನ್ನು 27 ವರ್ಷ ದ ವಿಜಯಮಾಲ ಅವರಿಗೆ 25% ಸುಟ್ಟಿದ್ದು, ಇವರು ನಾರ್ಮಲ್ ಆಗಿದ್ದಾರೆ. 21 ವರ್ಷದ ಜ್ಯೋತಿ 28% ಬರ್ನಿಂಗ್ ಆಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಇಬ್ಬರ ಸ್ಥಿತಿ ಕ್ರಿಟಿಕಲ್ ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಅಗ್ನಿಅವಘಡ ಸಂಬಂಧಿಸಿದ ಹಾಗೇ ಮಿಡ್ ನೈಟ್ ಮೀಟಿಂಗ್ ಕೂಡ ಮಾಡಿದ್ದು, ಮೂರು ಆಯಾಮದಲ್ಲಿ ತನಿಖೆ ನಡೆಸಲು ಸೂಚನೆ ಕೊಟ್ಟಿದ್ದಾರೆ. ಇನ್ನು ಬಿಬಿಎಂಪಿ ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಅವರಿಂದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದು, ಇದರಲ್ಲಿ ಸತ್ಯಾಸತ್ಯತೆ ಬಯಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.












Click it and Unblock the Notifications