Tunnel Road: ಟನಲ್ ರಸ್ತೆ ಶೋಕಿ ಪಕ್ಕಕ್ಕಿಟ್ಟು ಮೊದಲು ರಸ್ತೆ ಗುಂಡಿ ಮುಚ್ಚಿ: ಅಶೋಕ್
ಬೆಂಗಳೂರು ಎಷ್ಟೆಲ್ಲ ಅಭಿವೃದ್ಧಿ ಹೊಂದಿದರೂ ರಸ್ತೆ ಗುಂಡಿಗಳಿಂದ ಮುಕ್ತಿ ಪಡೆದಿಲ್ಲ ಎನ್ನುವುದು ಸಿಲಿಕಾನ್ ಸಿಟಿ ಮಂದಿಯ ಹಾಗೂ ವಿಪಕ್ಷಗಳ ಆರೋಪ. ಒಂದು ಮಳೆ ಬಂದರೆ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದುಕೊಳ್ಳುತ್ತಿದ್ದು, ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಜನ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕೂಡ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟನಲ್ ರಸ್ತೆಯ ಶೋಕಿ ಪಕ್ಕಕ್ಕಿಟ್ಟು ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಆಗ್ರಹಿಸಿದ್ದಾರೆ.
ಉದ್ಯೋಗ, ವ್ಯಾಪಾರಕ್ಕೆ ದಿನನಿತ್ಯ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗುವ ಜನಸಾಮಾನ್ಯರು ವಾಪಸ್ ಬರುವ ತನಕ ಮನೆಯವರು ಜೀವ ಕೈಯಲ್ಲಿ ಹಿಡಿದುಕೊಂಡು ಭಯಪಡುವ ಪರಿಸ್ಥಿತಿ ಈಗಾಗಲೇ ಇದೆ. ಡಿಕೆ ಶಿವಕುಮಾರ್ ಅವರೇ ನೋಡಿ ಸ್ವಾಮಿ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಅವಸ್ಥೆ ಎಂದು ಹರಿಹಾಯ್ದಿದ್ದಾರೆ. ಈಗ ಬಸ್ಸು, ವ್ಯಾನ್‌ಗಳಲ್ಲಿ ಶಾಲೆಗೆ ಹೋಗುವ ಮಕ್ಕಳೂ ಸಹ ಮನೆಗೆ ಬರುವ ತನಕ ತಂದೆ ತಾಯಂದಿರು ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಕೈಮುಗಿಯುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

ರಸ್ತೆ ಗುಂಡಿಗೆ ಶಾಲಾ ಬಸ್ ಬಿದ್ದು ಅದೃಷ್ಟವಶಾತ್ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಬೆಂಗಳೂರಿನ ಪರಿಸ್ಥಿತಿ ಸುಧಾರಿಸುವತ್ತ ಗಮನ ಕೊಡಿ. ನಿಮ್ಮ ಸ್ಕೈಡೆಕ್, ಟನಲ್ ರಸ್ತೆಯ ಶೋಕಿ ಸ್ವಲ್ಪ ಪಕ್ಕಕ್ಕಿಡಿ. ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ ಪುಣ್ಯ ಕಟ್ಟಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
17,780 ಕೋಟಿ ವೆಚ್ಚದಲ್ಲಿ ಟನಲ್ ರಸ್ತೆ
ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಪರಿಹಾರಕ್ಕೆ ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ವರೆಗೂ 16.69 ಕಿ.ಮೀ ಉತ್ತರ ದಕ್ಷಿಣ ಕಾರಿಡಾರ್ ಟನಲ್ ರಸ್ತೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. 17,780 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ 3 ಪಥಗಳ ಸುರಂಗ ರಸ್ತೆಯ ಮೂಲಕ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಹೇಳಿದೆ. ಇದಕ್ಕೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಲೇ ಇದೆ.
ಸುರಕ್ಷಿತ, ಸಂಚಾರ ದಟ್ಟಣೆ ಮುಕ್ತ ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರದ ಹಲವು ಕ್ರಾಂತಿಕಾರಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದು ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಟನಲ್ ರಸ್ತೆ ನಿರ್ಮಾಣ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ನಿರ್ಮಾಣವಾಗಲಿರುವ ಟನಲ್ ರಸ್ತೆಗೆ ದೇಶದ ಇತರೇ ರಾಜ್ಯಗಳಿಗಿಂತಲೂ ಅತ್ಯಂತ ಕನಿಷ್ಠ ವೆಚ್ಚವಾಗಲಿದೆ. ರಾಜ್ಯ ಸರ್ಕಾರ ಪ್ರತಿ ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ 770 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಈ ನಿರ್ಮಾಣ ವೆಚ್ಚ ಶೇ. 40ರಷ್ಟು ಕಡಿಮೆ ಎಂದು ಹೇಳಿಕೊಂಡಿದೆ.












Click it and Unblock the Notifications