Fengal Effect In Bengaluru: ಫೆಂಗಲ್‌ನಿಂದ ಬೆಂಗಳೂರಿನಲ್ಲಿ ಜನ ಕಂಗಾಲು: ವೀಕೆಂಡ್ ಪ್ಲಾನ್‌ಗೆ ತಣ್ಣೀರು!
weekend in bengaluru: ತಮಿಳುನಾಡಿನ ಕರಾವಳಿ ಪ್ರದೇಶದಕ್ಕೆ ಫೆಂಗಲ್ ಚಂಡಮಾರುತ ಅಪ್ಪಳಿಸಿದ್ದು, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಶನಿವಾರ ತಡರಾತ್ರಿಯಿಂದ ಮಳೆ ಶುರುವಾಗಿದ್ದು, ಮಂಗಳವಾರದ ವರೆಗೆ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯಿಂದಾಗಿ ಬೆಂಗಳೂರಿನ ಜನ ವಾರಾಂತ್ಯದ ಪ್ಲಾನ್‌ಗಳು ತಲೆಕೆಳಗಾಗಿವೆ. ಬೆಂಗಳೂರಿನಲ್ಲಿ ವಾರಾಂತ್ಯವೆಂದರೆನೇ ಮೋಜು - ಮಸ್ತಿಗೆ ಫೇಮಸ್ ಆದರೆ, ಈ ಬಾರಿಯ ವಾರಾಂತ್ಯ ವರುಣನ ಆಗಮನದಿಂದ ಮಂಕಾಗಿದೆ.
ಶನಿವಾರ ರಾತ್ರಿಯಿಂದಲೇ ಬೆಂಗಳೂರಿನಲ್ಲಿ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದೆ. ಬೆಂಗಳೂರಲ್ಲಿ ಮಳೆಯ ಜೊತೆ ಜೊತೆಗೆ ಚಳಿ ವಾತಾವರಣವೂ ಹೆಚ್ಚಾಗಿದೆ. ಹೀಗಾಗಿ, ಬೆಂಗಳೂರಲ್ಲಿ ಚಳಿ - ಮಳೆಯ ಮಿಶ್ರ ವಾತಾವರಣ ಇದೆ. ಜನ ಚಳಿ - ಮಳೆಗೆ ನಡಗುತ್ತಿದ್ದಾರೆ. ಬೆಂಗಳೂರಲ್ಲಿ ಶನಿವಾರ ರಾತ್ರಿಯಿಂದಲೇ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯಿಂದ ವಾಹನ ಸವಾರರು ಶನಿವಾರ ರಾತ್ರಿ ಪರದಾಡಿದ್ದರು. ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್, ರಾಜಾಜಿನಗರ ಹಾಗೂ ಶ್ರೀನಗರ ಸೇರಿದಂತೆ ವಿವಿಧಡೆ ಮಳೆಯಾಗಿದೆ.

ಮಂಗಳವಾರದ ವರೆಗೆ ಮಳೆ: ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಅಥವಾ ಅದಕ್ಕಿಂತ ಹೆಚ್ಚು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮಂಗಳವಾರದ ವರೆಗೆ ಧಾರಾಕಾರ ಮಳೆ ಮುಂದುವರಿಯಲಿದೆ. ಡಿಸೆಂಬರ್ 3ರ ವರೆಗೆ ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ. ಇನ್ನು ಮುಂದಿನ 24 ಗಂಟೆಯ ಅವಧಿಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಹಾಗೂ ಕನಿಷ್ಠ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ಹಾಗೂ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮುಂದಿನ 48 ಗಂಟೆಯ ಅವಧಿಯಲ್ಲೂ ಇದೇ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ: ಈಚೆಗೆ ಸುರಿದ ಮಳೆಯಿಂದ ಬೆಂಗಳೂರಿನ ಹಲವು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರಿನ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗಿ, ಕೆಲವು ಪ್ರದೇಶಗಳು ಕೆರೆಯಂತೆ ಬದಲಾಗಿದ್ದವು. ಅಷ್ಟೇ ಅಲ್ಲ ಬೆಂಗಳೂರಿನ ವಿವಿಧ ಭಾಗದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿಯೇ ನಿರ್ಮಾಣವಾಗಿತ್ತು.
ಅಲ್ಲದೇ ಐಟಿ - ಬಿಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಮಳೆ ನೀರು ನಿಂತು ಉದ್ಯೋಗಿಗಳು ಪರದಾಡಿದ್ದರು. ಭಾರೀ ಮಳೆಯಿಂದ ನಗರದಲ್ಲಿ ವರ್ಕ್‌ಫ್ರಮ್ ಹೋಮ್ ಸಹ ನೀಡಲಾಗಿತ್ತು. ಈ ಬಾರಿ ಬೆಂಗಳೂರಿನಲ್ಲಿ ಮಳೆ ಅವಾಂತರವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಬೆಂಗಳೂರಿನ ಸಹಾಯವಾಣಿ ಹಾಗೂ ನಿಯಂತ್ರಣ ಕೊಠಡಿಗಳ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.

ಅಲ್ಲದೇ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಾರಾಂತ್ಯದಲ್ಲಿ ಯಾವುದೇ ಅಧಿಕಾರಿಗಳು ತಮ್ಮ ಕೆಲಸದ ಕಾರ್ಯ ವ್ಯಾಪ್ತಿಯಿಂದ ಹೊರಗೆ ಹೋಗಬಾರದು ಎಂದು ಸೂಚನೆ ನೀಡಿದ್ದಾರೆ. ಕಳೆದ ಬಾರಿ ಸುರಿದ ಮಳೆಯಿಂದ ಬೆಂಗಳೂರಿನ ಹೊರ ವಲಯದಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ಅಲ್ಲದೇ ಬೆಂಗಳೂರಿನಲ್ಲಿ ಆಸ್ತಿಗಳಿಗೆ ಭಾರೀ ಹಾನಿಯುಂಟಾಗಿತ್ತು. ಇದೀಗ ಫೆಂಗಲ್ ಸಂಕಷ್ಟ ತಂದೊಡ್ಡಿದ್ದು, ಮಳೆ ಮುಂದುವರಿಯುತ್ತಿದೆ. ಬೆಂಗಳೂರಲ್ಲಿ ಚಳಿಯ ವಾತಾವರಣವೂ ಹೆಚ್ಚಾಗಿದೆ.












Click it and Unblock the Notifications