2000 notes: ಕನಕಪುರ ರಸ್ತೆಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಪತ್ತೆ!
ಬೆಂಗಳೂರು, ಜುಲೈ. 25: ದೇಶದಲ್ಲಿ ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಕನಕಪುರ ರಸ್ತೆಯಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಅದು ಕೂಡ ಒಂದೋ ಎರಡೋ ಅಲ್ಲ... ಬಂಡಲ್‌ಗಟ್ಟಲೆ!.
ಹೌದು, ಮಂಗಳವಾರ ಕನಕಪುರ ರಸ್ತೆಯಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ಜೆರಾಕ್ಸ್ ನೋಟುಗಳು ತುಂಬಿರುವ 2 ಬಾಕ್ಸ್ಗಳು ಪತ್ತೆಯಾಗಿವೆ. ಕಂತೆ ಕಂತೆ ನೋಟುಗಳನ್ನು ಕಂಡು ಜನ ದಂಗಾಗಿದ್ದಾರೆ. ಆರ್‌ಬಿಐ ನೋಟುಗಳ ಚಲಾವಣೆಯನ್ನು ನಿಲ್ಲಿಸಿದ ಬಳಿಕ, ಇವುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಗೇಡಿಗಳು ಎಸೆದಿದ್ದಾರೆ ಎಂದು ಶಂಕಿಸಲಾಗಿದೆ.

ಹೀಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಎರಡು ಬಾಕ್ಸ್ ಜೆರಾಕ್ಸ್ ನೋಟುಗಳನ್ನು ಕಂಡ ಸಾರ್ವಜನಿಕರು ಸ್ಥಳದಲ್ಲಿದ್ದ ಸಂಚಾರಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸಂಚಾರಿ ಪೊಲೀಸರು ಕೂಡಲೇ ತಲಘಟ್ಟಪುರ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆರಾಕ್ಸ್ ನೋಟುಗಳನ್ನ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನು, ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಮೇ ಮಧ್ಯದಲ್ಲಿ 2,000 ರೂ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವುದಾಗಿ ಘೋಷಿಸಿತು. 2000 ಕರೆನ್ಸಿ ನೋಟುಗಳನ್ನು ಬ್ಯಾಂಕ್‌ಗೆ ಸಲ್ಲಿಸಲು ಸೆಪ್ಟೆಂಬರ್ ಕೊನೆಯವರೆಗೂ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಐನೂರು ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧಧ ಬಗ್ಗೆಯೂ ವದಂತಿ ಎದ್ದಿದೆ.
ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ, 500 ರೂಪಾಯಿ ನೋಟುಗಳ ಅಮಾನ್ಯೀಕರಣ ಮತ್ತು ದೇಶದ ಆರ್ಥಿಕತೆಯಲ್ಲಿ 1,000 ರೂಪಾಯಿಯ ನೋಟುಗಳನ್ನು ಮರುಪರಿಚಯಿಸುವ ಕುರಿತು ಹಣಕಾಸು ಸಚಿವಾಲಯವನ್ನು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ, ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಆರ್ಥಿಕತೆಯಲ್ಲಿ ಅಸ್ತಿತ್ವದಲ್ಲಿರುವ ಅತಿ ಹೆಚ್ಚು ಮುಖಬೆಲೆಯ ಕರೆನ್ಸಿ ನೋಟುಗಳ (ಅಂದರೆ 500 ನೋಟುಗಳು) ಅಮಾನ್ಯೀಕರಣವನ್ನು ನಿರಾಕರಿಸಿದ್ದಾರೆ.
1,000 ಕರೆನ್ಸಿ ನೋಟುಗಳನ್ನು ಮರುಪರಿಚಯಿಸುವ ಪ್ರಶ್ನೆಗೆ ಲಿಖಿತ ಉತ್ತರ ಸಲ್ಲಿಸಿದ್ದು, "ಆರ್‌ಬಿಐ ಪ್ರಕಾರ, ಹಿಂಪಡೆಯುವಿಕೆಯು ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಅಥವಾ ಆರ್ಥಿಕತೆಯಲ್ಲಿ ಯಾವುದೇ ಅಡಚಣೆಯನ್ನು ತಪ್ಪಿಸಲು ಯೋಜಿಸಲಾದ ಕರೆನ್ಸಿ ನಿರ್ವಹಣೆ ಕಾರ್ಯಾಚರಣೆಯಾಗಿದೆ. ಇದಲ್ಲದೆ, 2000 ಬ್ಯಾಂಕ್‌ನೋಟುಗಳ ಹಿಂಪಡೆಯುವಿಕೆಗೆ ಪ್ರಸಕ್ತ ವರ್ಷದ ಅಗತ್ಯತೆ ಮತ್ತು ಇತರ ಮುಖಬೆಲೆಯ ನೋಟುಗಳ ಬಫರ್ ಸ್ಟಾಕ್ ಅನ್ನು ಹಿಂಪಡೆಯುವ ಅವಶ್ಯಕತೆಗಳನ್ನು ಪೂರೈಸಲು ದೇಶಾದ್ಯಂತ ನಿರ್ವಹಿಸಲಾಗುತ್ತಿದೆ" ಎಂದಿದೆ.












Click it and Unblock the Notifications