ಅದ್ಹ್ಯಾಗೆ ನಗ್ನ ಮಾಡ್ತಿಯೋ ನೋಡೇಬಿಡ್ತೀನಿ : ತಿರುಗಿಬಿದ್ದ ಕವನಾ!
ಫೇಸ್ ಬುಕ್ ಬಳಕೆದಾರನಿಂದ ಮಹಿಳೆಯೊಬ್ಬರಿಗೆ ನಗ್ನವಾಗಿಸುವ ಬೆದರಿಕೆ. ಪಂಚಪೀಠಗಳ ಬೆಂಬಲಿಗರ ಗೂಂಡಾ ವರ್ತನೆ ಖಂಡಿಸಿದ್ದಕ್ಕೆ ಕೆಟ್ಟದಾಗಿ ಕಮೆಂಟ್ ಮಾಡಿದ ರಾಜೇಶ್.
ಬೆಂಗಳೂರು, ಆಗಸ್ಟ್ 30: ವೀರಶೈವ ಹಾಗೂ ಲಿಂಗಾಯತರ ನಡುವೆ ಪ್ರತ್ಯೇಕ ಧರ್ಮ ಸ್ಥಾನಮಾನದ ವಿಚಾರದಲ್ಲಿ ನಡೆಯುತ್ತಿರುವ ವಾಗ್ಯುದ್ಧ, ಬೀದಿ ಕಾಳಗಗಳ ಹಿನ್ನೆಲೆಯಲ್ಲಿ, ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದ ಕವನಾ ಎಂಬ ಲಿಂಗಾಯತ ಸಮುದಾಯದ ವಿಚಾರವಂತೆಗೆ ರಾಜೇಶ್ ಎಂಬ ಯುವಕ 'ನಗ್ನವಾಗಿಸುವ ಬೆದರಿಕೆ' ಹಾಕಿದ್ದಾನೆ.
ಕವನಾ ಅವರು, ಬಸವ ಜ್ಯೋತಿ ಎಂಬ ಮಾಸಿಕದ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ತಮ್ಮದೇ ಆದಂಥ ವಿಚಾರಧಾರೆಯನ್ನು ಹೊಂದಿದ್ದಾರೆ. ಇತ್ತೀಚೆಗೆ, ವೀರಶೈವ ಸಮುದಾಯದ ಪ್ರಧಾನ ಮಠವಾದ ರಂಭಾಪುರಿ ಮಠದ ಅನುಯಾಯಿಗಳು ಸಭೆ ಸೇರಿದ್ದಾಗ, ಆ ಸಭೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಲಿಂಗಾಯತ ಪ್ರತ್ಯೇಕ ಧರ್ಮದ ಕರಪತ್ರವನ್ನು ಕೈಯ್ಯಲ್ಲಿ ಹಿಡಿದಿದ್ದಕ್ಕೆ ರಂಭಾಪುರಿ ಮಠದ ಭಕ್ತರು ಆ ಹಿರಿಯರನ್ನು ಹೊಡೆದು ಆಚೆ ಅಟ್ಟಿದ ಪ್ರಸಂಗ ನಡೆದಿತ್ತು.

ಈ ಗಲಾಟೆಯ ವಿಡಿಯೋ ತುಣುಕುಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ ಕವನಾ ಅವರು, ಹಿರಿಯರ ಮೇಲೆ ಕೈ ಮಾಡಿದ್ದವರ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ, ಹಾದಿ ಬೀದಿ ರಂಪ ಮಾಡುವ ಮೂಲಕ ಲಿಂಗಾಯತರ ಮಾನ-ಮರ್ಯಾದೆಗಳನ್ನು ಮಣ್ಣುಪಾಲು ಮಾಡಿದ ವೀರಶೈವ ಹಾಗೂ ಲಿಂಗಾಯತ ಸಮಾಜ - ಈ ಎರಡೂ ಪಂಗಡಗಳಿಗೆ ಛೀಮಾರಿ ಹಾಕಿದ್ದರು.
ಇದಕ್ಕೆ ಹಲವಾರು ಪರ ಹಾಗೂ ವಿರೋಧ ಕಮೆಂಟ್ ಗಳು ಫೇಸ್ ಬುಕ್ ನಲ್ಲಿ ಹರಿದು ಬಂದಿವೆ. ಆದರೆ, ರಾಜೇಶ್ ಎಂಬಾತ ಕವನ ಅವರ ಬರಹದ ಬಗ್ಗೆ ಉಗ್ರವಾಗಿ ಪ್ರತಿಕ್ರಿಯಿಸಿದ್ದು, ಕವನಾ ಅವರನ್ನು ನಗ್ನ ಮಾಡುವ ಬೆದರಿಕೆಯೊಡ್ಡಿದ್ದಾನೆ.
ಇದಕ್ಕೆ ದಿಟ್ಟತನದಿಂದಲೇ ಉತ್ತರಿಸಿರುವ ಕವನಾ ಅವರು, ''ನಿನ್ನಂಥ 1000 ರಾಜೇಶ್ ಗಳು ಬಂದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ನಗ್ನ ಮಾಡ್ತೀನಿ ಅಂತೀಯಾ. ತಾಕತ್ತಿದ್ರೆ ಮಾಡು ನೋಡೋಣ'' ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications