Karnataka Expressways: ಕರ್ನಾಟಕದಲ್ಲಿ ಈಗಿರುವ ಹಾಗೂ ಮುಂಬರಲಿರುವ ಪ್ರಮುಖ ಎಕ್ಸ್‌ಪ್ರೆಸ್‌ವೇಗಳು
Karnataka Expressways: ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ವಿಚಾರದಲ್ಲಿ ಬಹುದೊಡ್ಡ ಕ್ರಾಂತಿ ಅಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಿದೆ. ಹಾಗಾದ್ರೆ, ಇಲ್ಲಿ ಈಗಿರುವ ಹಾಗೂ ಮುಂಬರಲಿರುವ ಬಹುನಿರೀಕ್ಷಿತ ಪ್ರಮುಖ ಎಕ್ಸ್‌ಪ್ರೆಸ್‌ವೇಗಳು ಯಾವುವು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದಲ್ಲೇ ಅತೀ ದೊಡ್ಡ ಎಕ್ಸ್‌ಪ್ರೆಸ್ ವೇ ಹೊಂದಿರುವ ರಾಜ್ಯ ಅಂದ್ರೆ ಕರ್ನಾಟಕ. ಇಲ್ಲಿನ 4,112 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ 44 ಭಾರತದಲ್ಲೇ ಅತೀ ಉದ್ದದ ಹೆದ್ದಾರಿಯಾಗಿದೆ. ಇದು ದೇಶದ ಉತ್ತರದಿಂದ ದಕ್ಷಿಣದ ಕಡೆ ಸಾಗುವ ದೇಶದ ಅತೀ ಉದ್ದದ ಹೆದ್ದಾರಿ ಇದಾಗಿದ್ದು, ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಆಗುಹೋಗುವ ನಗರಗಳನ್ನೂ ಸಂಪರ್ಕಿಸುತ್ತದೆ. ಇನ್ನು ಕರ್ನಾಟಕದಲ್ಲಿ ಈಗಿರುವ ಹಾಗೂ ಮುಂಬಲಿರುವ ಎಕ್ಸ್‌ಪ್ರೆಸ್‌ವೇಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ: ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಈಗಾಗಲೇ ಉದ್ಘಾಟನೆಗೊಂಡು ವಾಹಗಳು ಕೂಡ ಸಂಚಾರ ಮಾಡುತ್ತಿವೆ. ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಎಕ್ಸ್‌ಪ್ರೆಸ್ ವೇ ಮಾರ್ಚ್ 2023ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ದ 118 ಕಿಲೋ ಮೀಟರ್ ಇದ್ದು, ಇದು ಪ್ರವೇಶ-ನಿಯಂತ್ರಿತ ಕಾರಿಡಾರ್ ಆಗಿದೆ. ಇದನ್ನು NH 275ರ ಭಾಗವಾಗಿ ನಿರ್ಮಿಸಲ್ಪಟ್ಟಿದ್ದು, ಇದರಿಂದ ಬೆಂಗಳೂರು ಮತ್ತು ಮೈಸೂರು ನಗರಗಳ ಪ್ರಯಾಣದ ಸಮಯ ಕಡಿಮೆಯಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಸುಮಾರು ಬರೋಬ್ಬರಿ 17,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಎಕ್ಸ್‌ಪ್ರೆಸ್ ವೇನ ಉದ್ದ 262 ಕಿಲೋ ಮೀಟರ್ ಆಗಿದೆ. ಇದು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಹಾದುಹೋಗಲಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಮೂರು ಹಂತಗಳಲ್ಲಿ 71 ಕಿಲೋ ಮೀಟರ್ ಕಾಮಗಾರಿ ಮುಕ್ತಾಯಗೊಂಡಿದ್ದು, ಡಿಸೆಂಬರ್ 2024 ರಲ್ಲಿ ವಾಹನ ಸಂಚಾರ ಕೂಡ ಆರಂಭವಾಗಿದೆ. ಆದರೂ ಇನ್ನೂ ಉದ್ಘಾಟನೆಯಾಗಿಲ್ಲ. ಇದಕ್ಕೆ ಕಾರಣವೂ ಇದೆ.
ಹೌದು..ಕರ್ನಾಟಕ ಭಾಗದಲ್ಲಿ ಸಂಪೂರ್ಣ ಕಾಮಗಾರಿ ಮುಗಿದಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಆದರೆ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಉದ್ಘಾಟನೆ ವಿಳಂಬವಾಗಿದ್ದು, ಈ ಹಿನ್ನೆಲೆ 2025ರ ಕೊನೆಯಲ್ಲಿ ಅಥವಾ 2026ರ ಜೂನ್ ವೇಳೆಗೆ ಲೋಕಾರ್ಪಣೆಯಾಗಲಿದೆ ಎನ್ನುವ ಮಾಹಿತಿ ಇದೆ. ಇದು ಉದ್ಘಾನೆ ಆದ್ರೆ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಸಮಯ ಇಳಿಕೆಯಾಗಲಿದೆ.
ಇದು ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ. ಈ ಹೆದ್ದಾರಿ ಬೆಂಗಳೂರಿನ ಹೊರವಲಯದಲ್ಲಿ ಇರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನವರೆಗೂ ವ್ಯಾಪಿಸಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ: ಇದು ಪೂರ್ಣಗೊಂಡರೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಆಗಲಿದೆ. ಮೊದಲಿಗೆ ಈ ಎಕ್ಸ್‌ಪ್ರೆಸ್ ವೇನಿಂದ ಬೆಂಗಳೂರು-ಪುಣೆ ನಗರಗಳ ನಡುವಿನ ಪ್ರಮಾಣ ಸಮಯ 15 ರಿಂದ 7 ಗಂಟೆಗಳಿಗೆ ಇಳಿಕೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು, ಕೇವಲ 5 ಗಂಟೆಗಳಿಗೆ ಇಳಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಇದು 2028ರ ವೇಳೆಗೆ ಸಂಚಾರ ಮುಕ್ತ ಆಗಲಿದೆ ಎನ್ನುವ ಮಾಹಿತಿ ಇದೆ.
ಈ ಎಕ್ಸ್‌ಪ್ರೆಸ್‌ವೇ ಎರಡು ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಇದು ಮಹಾರಾಷ್ಟ್ರದ ಮೂರು ಜಿಲ್ಲೆಗಳಾದ ಸಾಂಗ್ಲಿ, ಸತಾರ ಮತ್ತು ಪುಣೆ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು 9 ಜಿಲ್ಲೆಗಳು ಸೇರಿ ಒಟ್ಟು 12 ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಬೆಂಗಳೂರು-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ: ಈ ಎಕ್ಸ್‌ಪ್ರೆಸ್ ವೇ ಇನ್ನೂ ನಿರ್ಮಾಣ ಹಂತದಲ್ಲಿದ್ದು, 2030ರ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹೆದ್ದಾರಿ ನ್ಯಾಷನಲ್ NH-44 ಮೂಲಕ ಸಂಪರ್ಕ ಹೊಂದಿದ್ದು, ಇದನ್ನು 12 ಲೇನ್‌ಗೆ ವಿಸ್ತರಿಸುವ ಯೋಜನೆಯಿದ್ದು, ಎರಡು ನಗರಗಳ ನಡುವಿನ ಉದ್ದ 575 ಕಿಮೀ ಆಗಿದೆ. ಇದು ಪೂರ್ಣಗೊಂಡರೆ ಪ್ರಯಾಣ ಸಮಯದ ಉಳಿತಾಯ ಆಗಲಿದ್ದು, ಸಂಪರ್ಕ ಕೂಡ ಹೆಚ್ಚಾಗಲಿದೆ.
ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ: ಈ ಎಕ್ಸ್‌ಪ್ರೆಸ್‌ವೇ ಒಂದು ಮಹತ್ವದ ಯೋಜನೆ ಆಗಿದ್ದು, ಸುಮಾರು 335 ಕಿಲೋ ಮೀಟರ್ ಉದ್ದದ ಹೆದ್ದಾರಿ ಇದಾಗಿದೆ. ಇದು ಪೂರ್ಣಗೊಂಡರೆ, ಬೆಂಗಳೂರು-ಮಂಗಳೂರು ಅಥವಾಮಂಗಳೂರು - ಬೆಂಗಳೂರು ತಲುಪಲು ಕೇವಲ 3-4 ಗಂಟೆ ಬೇಕಾಗುತ್ತದೆ ಅಷ್ಟೇ. ಈ ಹೆದ್ದಾರಿಯು ಬೆಂಗಳೂರು, ಕುಣಿಗಲ್, ಹಾಸನ, ಸಕಲೇಶಪುರ ಮತ್ತು ಬಂಟ್ವಾಳದ ಮೂಲಕ ಹಾದು ಮಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ.
2026ರ ಅಂತ್ಯದ ವೇಳೆಗೆ ಇದರ ಡಿಪಿಆರ್ ಸಿದ್ಧ ಆಗಲಿದೆ. ಈ ವರ್ಷದಿಂಲೇ ಏಪ್ರಿಲ್ 30ರಿಂದಲೇ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಶುರು ಆಗಿದೆ. ಡಿಪಿಆರ್ ವರದಿ ಸಿದ್ಧವಾಗಿ, ಸಲ್ಲಿಕೆಯಾಗಿ, ಅಂತಿಮಗೊಂಡ ಬಳಿಕ ಭೂಸ್ವಾಧೀನ ಮತ್ತು ಪರಿಸರ ಅನುಮೋದನೆಗಳಂತಹ ಪ್ರಕ್ರಿಯೆಗಳು ಆರಂಭ ಆಗಲಿವೆ. ಕಾಮಗಾರಿ ಯೋಜನೆ 2028ರಲ್ಲಿ ಪ್ರಾರಂಭ ಆಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ: ಇದು ಕರ್ನಾಟಕದ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಸಂಪರ್ಕ ಕಲ್ಪಿಸುವ 518 ಕಿಲೋ ಮೀಟರ್ ಉದ್ದದ ಪ್ರಮುಖ 6 ಲೇನ್ ಎಕ್ಸ್‌ಪ್ರೆಸ್‌ವೇ ಆಗಿದೆ. ಇದರ ಕಾಮಗಾರಿಗಳು ಮಾರ್ಚ್ 2023ರಲ್ಲಿ ಪ್ರಾರಂಭ ಆಗಿದ್ದು, 2026-27ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಮತ್ತು ದೂರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಪೂರ್ಣಗೊಂಡ ಪ್ರಮುಖ ಎಕ್ಸ್‌ಪ್ರೆಸ್ ವೇ
* ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ
ಉದ್ಘಾಟನೆ ಹಂತದಲ್ಲಿರುವ ಎಕ್ಸ್‌ಪ್ರೆಸ್ ವೇ
* ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ
ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್ ವೇಗಳು
* ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ
* ಬೆಂಗಳೂರು-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ
* ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ
* ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ
ಎಕ್ಸ್‌ಪ್ರೆಸ್ ವೇಗಳಿಂದ ಆಗುವ ಪ್ರಯೋಜನಗಳು
* ಆರ್ಥಿಕ ಚಟುವಟಿಕೆಗೆ ಉತ್ತೇಜನ
* ನಗರದಿಂದ ನಗರಕ್ಕೆ ಸಂಪರ್ಕ ಹೆಚ್ಚಳ
* ವಾಹನ ದಟ್ಟಣೆ ಕಡಿಮೆ
* ಕೈಗಾರಿಕೆ, ಕೃಷಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ
* ಹೆದ್ದಾರಿ ಅಕ್ಕಪಕ್ಕದ ಗ್ರಾಮಗಳು, ನಗರಗಳು ಅಭಿವೃದ್ಧಿಯತ್ತ ಸಾಗಲಿವೆ
* ಭೂಮಿ ಬೆಲೆ ಗಗನಕ್ಕೇರಲಿದ್ದು, ಭೂಮಾಲೀಕರು ಕೋಟ್ಯಾಧಿಪತಿಗಳಾಗುವ ಅವಕಾಶ
* ಐಟಿ-ಬಿಟಿ ಮತ್ತು ಕೈಗಾರಿಕಾ ಉತ್ಪನ್ನಗಳ ಸಾಗಣೆ ಸುಲಭ












Click it and Unblock the Notifications