ನೀಲಮ್ಮನ ಚೀಟಿ ವ್ಯವಹಾರದಲ್ಲಿ 'ಚೊಂಬಿನ' ಆಸೆಗೆ 'ಹಂಡೆ'ಯನ್ನು ಕಳ್ಕೊಂಡವರೇ ಹೆಚ್ಚು
ಬೆಂಗಳೂರು ದಕ್ಷಿಣದ ಬನಶಂಕರಿ 3ನೇ ಹಂತ, ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದ ನೀಲಾವತಿ- ಜ್ಞಾನೇಶ್ ಚೀಟಿ ವ್ಯವಹಾರದ ಫಾಲೋ ಅಪ್ ವರದಿ ಇದು. ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ದಂಪತಿ ಹಾಗೂ ಮಗ ಇದ್ದಾರೆ. ಬುಧವಾರ ಸಹ ನೀಲಮ್ಮ ಚಿಟ್ ಫಂಡ್ ಗ್ರೂಪ್ ಸದಸ್ಯರ ಪೊಲೀಸ್ ಠಾಣೆ ಪರೇಡ್ ಮುಂದುವರಿದಿತ್ತು.
ಚೀಟಿ ಹಾಕಿದ್ದವರೆಲ್ಲ ಸೇರಿ ವಕೀಲರೊಬ್ಬರನ್ನು ನೇಮಿಸಿಕೊಂಡಿದ್ದಾರೆ. "ಸರಿ, ಪೊಲೀಸ್ ಠಾಣೆ ದೂರು ನೀಡಿದರಲ್ಲಾ, ಕೋರ್ಟ್ ಮೂಲಕವೇ ದುಡ್ಡು ತಗೊಳ್ಳಿ," ಅನ್ನುತ್ತಿದ್ದಾರಂತೆ ಶ್ರೀಮತಿ ನೀಲಮ್ಮ. ಇನ್ನು ಈ ಮಧ್ಯೆ ನೀಲಮ್ಮ ಮುಂಡಾಯಿಸಿದ್ದಾರೆ ಎನ್ನಲಾಗುತ್ತಿರುವ ಮೊತ್ತ ಎಷ್ಟು ಎಂಬುದು ಮಾತ್ರ ಆಖೈರ್ ಆಗಿಲ್ಲ.
ಏಕೆಂದರೆ, ಜನ ಬರ್ತಿದ್ದಾರೆ ಬರ್ತಿದ್ದಾರೆ ಬರ್ತಿದ್ದಾರೆ. ತಮ್ಮ ಮೊತ್ತ ಇಷ್ಟು ಅಂತ ಹೇಳುತ್ತಲೇ ಇದ್ದಾರೆ. ಚೀಟಿ ಹಾಕಿದವರು, ಷೇರು ಅಂತ ಹಾಕಿದವರು ಹಾಗೂ ಬಡ್ಡಿಗೆ ಕೊಟ್ಟವರು... ಹೀಗೆ ಹಣ ಕೊಟ್ಟು ತಗುಲಿಹಾಕಿಕೊಂಡಿರುವವರ ಕ್ಯಾಟಗರಿಗಳು ಇವೆ. "ಇದೊಂದು ಎಫ್ ಐಆರ್ ಮಾಡದೆ ಸುಮ್ಮನೆ ಇದ್ದಿದ್ದರೆ ಆ ಯಮ್ಮ ತನ್ನ ಆಸ್ತಿ ಮಾರಿ, ಹಣ ಕೊಟ್ಟಿರುತ್ತಿದ್ದಳು. ಈಗ ನೋಡಿ ಎಂಥ ಸ್ಥಿತಿ ಆಯಿತು," ಎನ್ನುವವರಿದ್ದಾರೆ.

ಆಫ್ ದ ರೆಕಾರ್ಡ್ ಲೆಕ್ಕಾಚಾರ ಕೋಟಿಗಳಲ್ಲಿದೆ
ಪೊಲೀಸರ ಪ್ರಕಾರ, ವಂಚನೆಯ ಮೊತ್ತ ಅಂತಿಮವಾಗಿಲ್ಲ. ಆದರೆ ಚೀಟಿ ಹಾಕಿದವರು ಆಫ್ ದ ರೆಕಾರ್ಡ್ ಮಾತನಾಡುವಂತೆ ಮೊತ್ತ ಕೋಟಿಗಳಲ್ಲಿದೆ. ಈಗಿನ ಪರಿಸ್ಥಿತಿ ಏನೆಂದರೆ, ಮರೆಯಲ್ಲಿ ನಿಂತು ಮಣ್ಣು ತಿಂದಂತಾಗಿದೆ. ಹೇಳುವಂತಿಲ್ಲ- ಬಿಡುವಂತಿಲ್ಲ ಎನ್ನುತ್ತಿದ್ದಾರೆ ಹಣ ಹಾಕಿದವರು.
ಇನ್ನು ಚೀಟಿ ಹಾಕಿದ್ದವರಲ್ಲಿ ಸರ್ಕಾರಿ ನೌಕರರು, ನಿವೃತ್ತರು, ವೈಟ್ ಕಾಲರ್ ಜಾಬ್ ನವರು ಎಲ್ಲರೂ ಇದ್ದಾರೆ. ಈ ಪೈಕಿ ಹಲವರಿಗೆ ನೀಲಮ್ಮ ಈ ಹಿಂದೆಲ್ಲ ಸರಿಯಾದ ಸಮಯಕ್ಕೆ, ಹೇಳಿದ ಮಾತಿನಂತೆಯೇ ಹಣವನ್ನು ಮನೆ ಬಾಗಿಲಿಗೇ ಮುಟ್ಟಿಸಿದ್ದಾಳೆ. ಆದರೆ ಈ ಸಲ ಬಂದಿದ್ದು ಬಡ್ದಿ ಲೆಕ್ಕಾಚಾರ.

'ಚೊಂಬಿನ' ಆಸೆಗೆ ಬಿದ್ದು, "ಹಂಡೆಯನ್ನೇ" ಕಳೆದುಕೊಂಡವರು
ಚೀಟಿ ಕೂಗಿದವರು ಅಥವಾ ಕೊನೆಯ ತನಕ ಆಕೆ ಬಳಿ ಬಿಟ್ಟವರು ಮೂರು ಪರ್ಸೆಂಟ್ ಬಡ್ದಿ ಬರುತ್ತಲ್ಲಾ ಎಂದು ಅಲ್ಲಿಯೇ ಹಣ ಇರಲಿ ಎಂದುಕೊಂಡಿದ್ದವರು. ಆರು ಲಕ್ಷ ರುಪಾಯಿ ಅಂದುಕೊಳ್ಳಿ, ಬಡ್ದಿ ಮೊತ್ತವೇ ತಿಂಗಳಿಗೆ ಹದಿನೆಂಟು ಸಾವಿರ ರುಪಾಯಿ ಆಗುತ್ತದೆ. ಹೀಗೆ 'ಚೊಂಬಿನ' ಆಸೆಗೆ ಬಿದ್ದು, "ಹಂಡೆಯನ್ನೇ" ಕಳೆದುಕೊಂಡವರು ಸಾಕಷ್ಟು ಜನ ಇದ್ದಾರೆ.

ಪ್ರಕರಣದ ವಿಚಾರಣೆ ನಡೆಯುತ್ತಿದೆ
ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಠಾಣೆ ಪೊಲೀಸರಿಂದ ಎರಡು- ಮೂರು ತಂಡ ರಚಿಸಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನೀಲಮ್ಮನ ಚೀಟಿ ಏಟಿಗೆ ಥಂಡಾ ಹೊಡೆದವರ ಲೆಕ್ಕ ಸಿಗಬೇಕು ಎಂದಾದಲ್ಲಿ ಇನ್ನೂ ಏಳರಿಂದ ಹತ್ತು ದಿವಸ ಸಮಯ ಬೇಕಾಗುತ್ತದೆ. ಚೀಟಿ- ಷೇರು ಹಾಕಿದವರದೊಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ತತ್ ಕ್ಷಣದ ಬೆಳವಣಿಗೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
Recommended Video

ಕೊರೊನಾ ಇರುವ ಕಾರಣಕ್ಕೆ ಆ ಆಸ್ತಿಗೆ ಬೆಲೆ ಸಿಗುತ್ತಿಲ್ಲ
ಆ ಯಮ್ಮ ಏನೂ ದಡ್ಡಿ ಅಲ್ಲ ಕಣ್ರೀ. ದುಡ್ಡನ್ನು ಇನ್ವೆಸ್ಟ್ ಮಾಡಿದ್ದಾಳೆ. ಆದರೆ ಕೊರೊನಾ ಇರುವ ಕಾರಣಕ್ಕೆ ಆ ಆಸ್ತಿ ಬೆಲೆ ಅಂದುಕೊಂಡಷ್ಟು ಬಾರದೆ ಇದ್ದಿರಬಹುದು. ಆಕೆಗೆ ಹಣ ವಾಪಸ್ ಕೊಡುವುದಕ್ಕೆ ಸಮಯ ನೀಡಿರಬೇಕಿತ್ತು ಎಂಬ ಧ್ವನಿಯೂ ಅಲ್ಲಿಲ್ಲಿ ಕೇಳಿಬರುತ್ತದೆ.
ಕಳೆದ ಅಕ್ಟೋಬರ್ ನಲ್ಲಿ ಸುಮಾರು ಮುನ್ನೂರೈವತ್ತು ಮನೆಗಳಿಗೆ ಮಳೆ ನೀರು ನುಗ್ಗಿತ್ತಲ್ಲಾ, ಅದೇ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ ಈ ನೀಲಮ್ಮನ ಮನೆ ಇರೋದು. ಆಕೆಯ ಬಳಿ ಕಟ್ಟಿದ್ದ ಚೀಟಿ- ಷೇರಿನ ಪೂರ್ತಿ ಹಣ ಇಸಿದುಕೊಂಡು, ಈ ಏರಿಯಾದಿಂದಲೇ ಮನೆ ಖಾಲಿ ಮಾಡಿಕೊಂಡು, ಬೇರೆ ಕಡೆಗೆ ಹೋಗೋಣ ಅಂತ ಹಲವರಿದ್ದರು. ಆದರೆ ಈಗ ಆ ಹಣ ಬರುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ನೀಲಮ್ಮನಿಗೆ ಶಾಪ ಹಾಕುತ್ತಿದ್ದಾರೆ.











Click it and Unblock the Notifications