ಮೆಟ್ರೋ 2ನೇ ಹಂತ: ಇಐಬಿ 3,950 ಕೋಟಿ ಹೂಡಿಕೆ!
ಬೆಂಗಳೂರು, ಜನವರಿ 17: ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸುವ 2 ನೇ ಹಂತದ ಯೋಜನೆಗೆ ಸುಮಾರು 500 ಮಿಲಿಯನ್ ಯೂರೋ( 3950 ಕೋಟಿ) ಬಂಡವಾಳ ಹೂಡಿಕೆ ಮಾಡಲು ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಒಪ್ಪಿಗೆ ನೀಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಹಾಗೂ ಇಐಬಿ ಮುಖ್ಯಸ್ಥೆ ಸುನೀತಾ ಲೂಖೋ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದ ಪ್ರಕಾರ ಎರಡು ಹಂತದಲ್ಲಿ ನಿಗದಿತ ಹಣ ನೀಡಲಿರುವ ಇಐಬಿ ಇದರಲ್ಲಿ ಮೊದಲ ಹಂತದಲ್ಲಿ ಸುಮಾರು 300 ಮಿಲಿಯನ್ ಯುರೋ ಕೊಡಲಿದೆ.
ಸಾಲದ ರೂಪದಲ್ಲಿ ಹೂಡಿಕೆಯಾಗಲಿರುವ ಮೊತ್ತದ ಕಾಲಾವಧಿ 20 ವರ್ಷಗಳಾಗಿವೆ. ಜತೆಗೆ ಮಹೇಂದ್ರ ಜೈನ್ ಹಾಗೂ ಸುನೀತಾ ಲೋಖೋ ಅವರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿ ಈ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಪ್ರತಿ ದಿನ ಸುಮಾರು 3.70 ಲಕ್ಷದಿಂದ 4 ಲಕ್ಷ ಪ್ರಯಾಣಿಕರು ಮೆಟ್ರೋ ಮೂಲಕ ಪ್ರಯಾಣಿಸುತ್ತಾರೆ. ಇದೀಗ ಇಐಬಿ ಆರ್ಥಿಕ ನೆರವು ನೀಡಿದೆ. ಮೆಟ್ರೋ ಯೋಜನೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಎನ್ನಲಾಗಿದೆ.












Click it and Unblock the Notifications