ಈಜಿಪುರ ಮೇಲುಸೇತುವೆ ಕಾಮಗಾರಿ ಕಾಲಮಿತಿ ತಿಳಿಸಿ, ಗುತ್ತಿಗೆದಾರ ಸಂಸ್ಥೆಗೆ HC ಸೂಚನೆ

ಬೆಂಗಳೂರು, ಮಾ.29: ನಾಲ್ಕು ವರ್ಷದಿಂದ ನೆನಗುದಿಗೆ ಬಿದ್ದಿರುವ ಈಜಿಪುರ ಮೇಲುಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ಕಾರಣಕ್ಕೆ ಗುತ್ತಿಗೆ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಗುತ್ತಿಗೆದಾರ ಸಂಸ್ಥೆ ಸಿಂಪ್ಲೆಕ್ಸ್ ಇನ್ಫ್ರಾ ಲಿಮಿಟೆಡ್ ಹೈಕೋರ್ಟ್ ಮೊರೆ ಹೋಗಿದೆ. ಕೋರಮಂಗಲದ ವಾಸಿ ಆದಿನಾರಾಯಣಶೆಟ್ಟಿ ಸಲ್ಲಿಸಿದ್ದ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.

ಆಗ ಗುತ್ತಿಗೆದಾರ ಕಂಪನಿ ಪರ ವಾದ ಮಂಡಿಸಿದ ವಕೀಲರು, ಟೆಂಡರ್ ರದ್ದು ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬೇಕು. ಮೇಲುಸೇತುವೆ ವಿಳಂಬಕ್ಕೆ ಕೇವಲ ಗುತ್ತಿಗೆದಾರರು ಹೊಣೆಯಲ್ಲ. ಬಿಬಿಎಂಪಿ ಸಹಕರಿಸಿದರೆ ಶೀಘ್ರ ಫ್ಲೈ ಓವರ್ ನಿರ್ಮಾಣ ಪೂರ್ಣಗೊಳಿಸಲಾಗುವುದು. ಹೊಸ ಏಜೆನ್ಸಿ ನೇಮಕದಿಂದ ಕಾಮಗಾರಿ ತಡವಾಗಬಹುದು ಎಂದರು.

ಅದಕ್ಕೆ ನ್ಯಾಯಪೀಠ, 2022ರ ಡಿ.31 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ, ಕಾಲಮಿತಿ ತಿಳಿಸಿ ಈ ಬಗ್ಗೆ ಏ.4 ರೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಎಫ್‌ಐಆರ್‌ಗೆ ಆದೇಶ: ಕಳೆದ ವಿಚಾರಣೆಯನ್ನು ನ್ಯಾಯಾಲಯ, ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವೆ ಸಂಪರ್ಕ ಕಲ್ಪಿಸುವ ಈಜೀಪುರ ಮೇಲುಸೇತುವೆ ನಿರ್ಮಾಣ ಕಾರ್ಯ ವಿಳಂಬದ ಹಿನ್ನೆಲೆಯಲ್ಲಿ ಯೋಜನೆಯ ಗುತ್ತಿಗೆದಾರ ಸಂಸ್ಥೆ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಎಫ್‌ಐಆರ್‌ ಹೂಡುವಂತೆ ಬಿಬಿಎಂಪಿಗೆ ಆದೇಶಿಸಿತ್ತು.

ಅಲ್ಲದೆ, ಯೋಜನೆಯ ಟೆಂಡರ್ ರದ್ದು ಮಾಡಲು ಅನುಮತಿ ಕೋರಿ ಬೆಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿರುವ ಮನವಿಯನ್ನು ಸರ್ಕಾರ 1 ವಾರದಲ್ಲಿ ಪರಿಗಣಿಸಿ ಗುತ್ತಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು. ಅದರಂತೆ ಸಚಿವ ಸಂಪುಟ ಟೆಂಡರ್ ರದ್ದತಿಗೆ ನಿರ್ಣಯ ಕೈಗೊಂಡಿದೆ.

ಪಾಲಿಕೆ ಆಯುಕ್ತರಿಗೆ ತರಾಟೆ: ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಕಾಮಗಾರಿ ವಿಳಂಬಕ್ಕೆ ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಯಾವ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದೆಂಬ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು, ಇಲ್ಲವೇ ಆಯುಕ್ತರೇ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಅಲ್ಲದೆ, ಪಾಲಿಕೆ ಕಾಮಗಾರಿ ವಿಳಂಬಕ್ಕೆ ಹಲವು ಕಾರಣಗಳನ್ನು, ನೆಪಗಳನ್ನು ಹೇಳುತ್ತಾ ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಪಾಲಿಕೆಯ ಉತ್ತರದಿಂದ ಕಿಂಚಿತ್ತೂ ತೃಪ್ತಿಯಾಗಿಲ್ಲ ಎಂದು ಹೇಳಿತು.

ಪಾಲಿಕೆ ಆಯುಕ್ತರ ವಿರುದ್ಧ ಕಿಡಿಕಾರಿದ್ದ ನ್ಯಾಯಪೀಠ ''ಅವರಿಗೆ ಕೆಲಸ ಮಾಡಲು ಆಗದಿದ್ದರೆ ಆಯುಕ್ತರ ಹುದ್ದೆಯನ್ನು ತ್ಯಜಿಸಲು ಹೇಳಿ ಬೇರೆ ಸಮರ್ಥ ಅಧಿಕಾರಿಗಳು ಬರುತ್ತಾರೆ. ಇಷ್ಟು ದಿನ ಯೋಜನೆ ವಿಳಂಬವಾದರೂ ಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ'' ಎಂದು ಖಾರವಾಗಿ ಪ್ರಶ್ನಿಸಿತು.

2019ರ ನವೆಂಬರ್‌ನಲ್ಲಿ ಮುಗಿಯಬೇಕಿದ್ದ ಕಾಮಗಾರಿ: ನಿಗದಿಯಂತೆ 2019ರ ನವೆಂಬರ್ ತಿಂಗಳಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಆ ಅವಧಿ ಮುಗಿದು ಇಷ್ಟು ವರ್ಷವಾದರೂ ಪೂರ್ಣಗೊಂಡಿಲ್ಲ. ಬಿಬಿಎಂಪಿ ಇಲ್ಲ ಸಲ್ಲದ ಕಾರಣಗಳನ್ನು ಹೇಳುತ್ತಿವೆ, ಆ ಅಡ್ಡಿಗಳ ಬಗ್ಗೆ ಮೊದಲೇ ಅದಕ್ಕೆ ತಿಳಿದಿರಲಿಲ್ಲವೇ? ಹಾಗಿದ್ದಾರೆ ಸಾರ್ವಜನಿಕ ಕೋಟ್ಯಂತರ ರೂ. ಹಣ ವ್ಯಯ ಮಾಡಿ ಏಕೆ ಕಾಮಗಾರಿ ಆರಂಭಿಸಬೇಕಿತ್ತು ಎಂದು ನ್ಯಾಯಪೀಠ ಪ್ರಶ್ನಿಸಿತು.

ಕಾಮಗಾರಿ ವಿಳಂಬ ಮಾಡಿರುವುದಕ್ಕೆ ಮೇಲುಸೇತುವೆ ನಿರ್ಮಾಣ ಗುತ್ತಿಗೆ ಪಡೆದಿರುವ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ದಂಡ ವಿಧಿಸಲಾಗಿದೆ. ಸದ್ಯ ಶೇ.44ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಆ ಭಾಗದಲ್ಲಿ ಸಾರ್ವಜನಿಕರಿಗೆ ಭಾರಿ ತೊಂದರೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+