ಈಜಿಪುರ ಇಡಬ್ಲೂಎಸ್ ಕ್ವಾರ್ಟರ್ಸ್ ನಿರ್ಮಾಣ ವಿಳಂಬಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು. ನ.16. ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ನಗರದ ಕೋರಮಂಗಲದ ಈಜಿಪುರದಲ್ಲಿ ಉದ್ದೇಶಿತ ವಸತಿ ಸಮುಚ್ಚಯ (ಅಪಾರ್ಟ್‌ಮೆಂಟ್) ನಿರ್ಮಿಸುವುದರಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್, ಗುತ್ತಿಗೆದಾರರಾದ ಮೆವರಿಕ್ ಹೋಲ್ಡಿಂಗ್ ಅನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯ ಆದೇಶ ನೀಡಿ ಹತ್ತು ವರ್ಷಗಳಾದರೂ ಇನ್ನೂ ಕಾಮಗಾರಿ ಅನುಷ್ಠಾನಗೊಳ್ಳದಿರುವುದಕ್ಕೆ ಶಾಸಕ ಉದಯ್ ಗರುಡಾಚಾರ್ ಅವರ ಒಡೆತನದ ಮೇವರಿಕ್ ಕಂಪನಿ ವಿರುದ್ಧ ನ್ಯಾಯಾಲಯ ಹರಿಹಾಯ್ದಿದೆ.
ಅಲ್ಲದೆ, ಅದು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಸತಿ ಸಮುಚ್ಛಯ ನಿರ್ಮಾಣ ವಿಚಾರದಲ್ಲಿ ಬಿಬಿಎಂಪಿ ಮತ್ತು ಮೇವರಿಕ್ ನಡುವಿನ ವಿವಾದದಿಂದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿತು.

ಜತೆಗೆ ಮನೆಗಳಿಗಾಗಿ ನಿವಾಸಿಗಳು ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಲ್ಲಾ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿತು.
ಕರ್ನಾಟಕ ಈಜಿಪುರ ನಿವಾಸಿಗಳ ಸಾಮಾಜಿಕ ಕಲ್ಯಾಣ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಳೆ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಬಳಿಕ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ, ಬಿಡಿಎ ಮತ್ತು ಗುತ್ತಿಗೆದಾರ ಕಂಪನಿಯಾದ ಮೇವರಿಕ್ ಹೋರ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿಗೊಳಿಸಿದೆ.
ಬಾಡಿಗೆ ಹಣ ನೀಡಲು ಆಗ್ರಹ: ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 1,512 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಕ್ಷೆ ಅನುಮೋದನೆ ಆದ 18 ತಿಂಗಳ ಒಳಗೆ ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಇದಕ್ಕಾಗಿ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿಯಾದ ಮೇವರಿಕ್ ಹೋರ್ಡಿಂಗ್ಸ್ ಪ್ರೈ.ಲಿ ಮುಚ್ಚಳಿಕೆ ಬರೆದುಕೊಡಬೇಕು ಎಂದು 2017ರ ಮೇ 31ರಂದು ಹೈಕೋರ್ಟ್ ಆದೇಶಿಸಿತ್ತು.

ಹೈಕೋರ್ಟ್ ಆದೇಶದಂತೆ ಕಾಮಗಾರಿ ಆರಂಭಿಸಿದ್ದರೂ ಈವರೆಗೂ ಪೂರ್ಣಗೊಳಿಸಿಲ್ಲ. ಹಾಗಾಗಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶಿಸಬೇಕು. ಕಾಮಗಾರಿ ಪೂರ್ಣಗೊಳಿಸುವರೆಗೆ ವಸತಿ ಹಕ್ಕುದಾರರಿಗೆ ಮಾಸಿಕ ಬಾಡಿಗೆ ಹಣ ನೀಡಲು ಆದೇಶಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: ಕೋರಮಂಗಲದ ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರು ನೆಲೆಸಿದ್ದ ವಸತಿ ಸಮುಚ್ಚಯ 2004ರಲ್ಲಿ ಕುಸಿದಿತ್ತು. ಈ ವಿಚಾರವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ನ್ಯಾಯಾಂಗ ನಿಂದನೆಯ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, 1512 ಹಕ್ಕುದಾರರಿಗೆ ವಸತಿ ಸಮುಚ್ಚಯ ನಿರ್ಮಿಸಿಕೊಡಬೇಕು.
ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ದೊರೆತ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿತ್ತು. ಇದೀಗ ಮತ್ತೆ ಹೈಕೋರ್ಟ್‌ಗೆ ಹೊಸದಾಗಿ ಪಿಐಎಲ್ ಸಲ್ಲಿಸಿರುವ ಹಕ್ಕುದಾರರು, ನಿಗದಿತ ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.












Click it and Unblock the Notifications