ಹಿಜಾಬ್ vs ಕೇಸರಿ ಶಲ್ಯ ವಿವಾದ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟ ಸಂದೇಶ
ಬೆಂಗಳೂರು, ಫೆಬ್ರವರಿ 4: ಉಡುಪಿಯ ಸರ್ಕಾರಿ ಕಾಲೇಜು ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದರ ವಿರುದ್ಧವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿರುವುದು ಸದ್ಯ ರಾಜ್ಯದಲ್ಲಿ ವಿವಾದ ಸೃಷ್ಟಿಸಿದೆ.
ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನೇ ಪಾಲಿಸಬೇಕು. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ- ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹೈಕೋರ್ಟ್ ತೀರ್ಪು ಬರುವವರೆಗೆ ಸಮವಸ್ತ್ರ ಸಂಹಿತೆ ಪಾಲಿಸಬೇಕು, ಹಿಜಾಬ್ ಗೊಂದಲ ಶೀಘ್ರ ಪರಿಹಾರವಾಗಬೇಕು. ಮಕ್ಕಳ ಭವಿಷ್ಯಕ್ಕೆ ಇದರಿಂದ ತೊಡಕಾಗಬಾರದು. ಹೈಕೋರ್ಟ್ ಅಂತಿಮ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಬೇಕಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಯಥಾಸ್ಥಿತಿ ಕಾಪಾಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಅದಿ ಕೂಡಾ ಹೇಳಿದ್ದಾರೆ.

ಸಮವಸ್ತ್ರ ಸಂಹಿತೆ ಕಡ್ಡಾಯವೆಂದ ಶಿಕ್ಷಣ ಸಚಿವ
ಸಮವಸ್ತ್ರ ಸಂಹಿತೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಇಲಾಖೆ ಮತ್ತು ಪಿಯು ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ವಿಚಾರ ಪ್ರಸ್ತುತ ನ್ಯಾಯಾಲಯದಲ್ಲಿದೆ. ಅಡ್ವೊಕೇಟ್ ಜನರಲ್ ಅವರೊಂದಿಗೆ ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಬೇಕಿದೆ ಎಂದರು.
ಸರ್ಕಾರದ ನಿಲುವನ್ನು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಅಡ್ವೊಕೇಟ್ ಜನರಲ್ಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹೈಕೋರ್ಟ್ ತೀರ್ಪು ಬರುವವರೆಗೆ ಸಮವಸ್ತ್ರ ಸಂಹಿತೆ ಪಾಲಿಸಬೇಕು ಎನ್ನುವುದನ್ನು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಉಡುಪಿ ಶಾಸಕ ರಘುಪತಿ ಭಟ್ ಅವರ ವಿರುದ್ಧ ವಿನಾಕಾರಣ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಅವರು ಶಿಕ್ಷಣ ವಂಚಿತ ಮಕ್ಕಳಿಗೆ ಸಮಸ್ಯೆಯಾಗದಂತೆ ಹಲವು ಕ್ರಮ ತೆಗೆದುಕೊಂಡಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷರಾಗಿ ಶಾಲೆ ಅಭಿವೃದ್ಧಿಪಡಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಬಾಂಬೆ, ಕೇರಳ ಹೈಕೋರ್ಟ್ಗಳು ಈಗಾಗಲೇ ತೀರ್ಪು ನೀಡಿವೆ. ಶಾಲೆಗಳಿಗೆ ಸ್ಕಾರ್ಪ್ ಧರಿಸಿ ಬರಬಾರದು ಎಂದೇ ಹೇಳಿವೆ ಎಂದು ಉಲ್ಲೇಖಿಸಿದ್ದಾರೆ.
ಶಾಲಾ- ಕಾಲೇಜುಗಳು ಸೋದರತ್ವ ಬೆಳೆಸಲು ಪೂರಕವಾಗಿಎಬೇಕು. ಮಕ್ಕಳು ಶಾಲೆಗೆ ಸೇರುವಾಗ ವಸ್ತ್ರಸಂಹಿತೆಯನ್ನು ಒಪ್ಪಿ ಸಹಿ ಹಾಕಿರುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಸಮವಸ್ತ್ರ ಧರಿಸಿ ಬಂದಿದ್ದಾರೆ. ಇದೀಗ ಕೆಲವರಿಂದ ಸಮಸ್ಯೆಯಾಗಿದೆ. ಸಮಸ್ಯೆ ಬಗೆಹರಿಸಲು ಶಾಸಕರು ಮತ್ತು ಮುಖಂಡರ ಜೊತೆ ಚರ್ಚೆ ನಡೆಸುತ್ತೇವೆ. ವಸ್ತ್ರಸಂಹಿತೆ ಪಾಲಿಸುವಂತೆ ಮತ್ತೆ ಸುತ್ತೋಲೆ ಹೊರಡಿಸುತ್ತೇವೆ ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಹೇಳಿದ್ದೇನು?
ಸದ್ಯ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಕೆಲ ಸರ್ಕಾರಿ ಕಾಲೇಜುಗಳಲ್ಲಿ ಸದ್ದು ಮಾಡುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಕುರಿತು ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಅದಿ, ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ಪ್ರಕಟಿಸಿರುವ ಸುತ್ತೋಲೆಯನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.
ರಾಜ್ಯದ ಹಲವೆಡೆಯಿಂದ ಸಮಾಜದವರು (ಮುಸ್ಲಿಮರು) ಕರೆ ಮಾಡಿ, ಹಿಜಾಬ್ ಧರಿಸಿದರೆ ಕಾಲೇಜಿಗೆ ಬಿಡುತ್ತಿಲ್ಲವೆಂದು ಹೇಳಿದ್ದಾರೆ. ಶೈಕ್ಷಣಿಕವಾಗಿ ನಮ್ಮ ಸಮುದಾಯ ಬಹಳ ಹಿಂದುಳಿದಿದೆ. ಹಿಜಾಬ್ ವಿಚಾರ ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಬ್ರೇಕ್ ಹಾಕದಿದ್ದರೆ ಶಿಕ್ಷಣ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಬಹುದು ಎಂದರು.
Recommended Video
ಈ ವಿವಾದ ಇದೀಗ ಹೈಕೋರ್ಟ್ ಪರಿಶೀಲನೆಯಲ್ಲಿದೆ. ಹೈಕೋರ್ಟ್ ನೀಡುವ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಮೊದಲೂ ರಾಜ್ಯದ ಹಲವೆಡೆ ನಮ್ಮ ಸಮುದಾಯದ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದರು. ಅಂಥ ಸ್ಥಳಗಳಲ್ಲಿ ಮೊದಲಿನಂತೆಯೇ ವ್ಯವಸ್ಥೆ ಮುಂದುವರಿಸಬೇಕು. ಹೊಸದಾಗಿ ಹಿಜಾಬ್ ಧರಿಸಿ ಬಂದ ಕಡೆ ತಡೆಯೊಡ್ಡಿದ್ದಾರೆ. ಅಂಥ ಸ್ಥಳಗಳಲ್ಲಿ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕುರಿತು ಶಿಕ್ಷಣ ಸಚಿವರು ನನಗೆ ಮಾಹಿತಿ ನೀಡಿದ್ದಾರೆ ಎಂದು ಶಫಿ ಸಅದಿ ಹೇಳಿದರು.












Click it and Unblock the Notifications