Property: ಇ-ಖಾತಾ ಪಡೆಯಲು ಇನ್ಮುಂದೆ ಅಲೆದಾಡಬೇಕಿಲ್ಲ! ಸ್ಥಳದಲ್ಲೇ ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು: ನಗರದ ನಾಗರಿಕರಿಗೆ ಇ- ಖಾತಾ ಸೇವೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಇಂದು (ನವೆಂಬರ್ 7) ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಎಲ್ಲಾ ಐದು ನಗರ ಪಾಲಿಕೆಗಳ ಪ್ರತಿಯೊಂದು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್ ಆಯೋಜಿಸಲಾಗುತ್ತಿದೆ ಎಂದು ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ.
ಇ-ಖಾತಾ ಮೇಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ಉದ್ದೇಶದಿಂದ ನಗರ ಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು ಹಾಗೂ ಕಂದಾಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ವಿವಿಧ ಎಆರ್‌ಒ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.

ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಈ ಕಾರ್ಯವನ್ನು ಅತ್ಯಂತ ಆದ್ಯತೆಯ ಹಾಗೂ ಪ್ರಮುಖ ಕರ್ತವ್ಯವೆಂದು ಪರಿಗಣಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಎಆರ್‌ಒಗಳು ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಾನೇ ಸ್ವತಃ ವಿವಿಧ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡುತ್ತೇನೆ. ಜೊತೆಗೆ, ಕೇಂದ್ರ ತಂಡವು ನಿರಂತರವಾಗಿ ಸಮನ್ವಯ ಸಾಧಿಸಿ ಇ-ಖಾತಾ ಮೇಳ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
62 ಸ್ಥಳಗಳಲ್ಲಿ ಅಭಿಯಾನ
ಇಂದು (ನವೆಂಬರ್ 7) ಇ-ಖಾತಾ ಮೇಳವು 5 ನಗರ ಪಾಲಿಕೆಳ ವ್ಯಾಪ್ತಿಯಲ್ಲಿ 62 ಸ್ಥಳಗಳಲ್ಲಿ ನಡೆಯಲಿದ್ದು, ನಾಗರಿಕರು https://gba.karnataka.gov.in/download/openhousevenues.pdf ಲಿಂಗ್ ಗೆ ಭೇಟಿ ನೀಡಿ, ಹತ್ತಿರವಿರುವ ಅಭಿಯಾನದ ಸ್ಥಳಗಳಿಗೆ ಭೇಟಿ ನೀಡಬಹುದು. ಇ-ಖಾತಾ ಮಾಹಿತಿಗಾಗಿ ಪಾಲಿಕೆ ಕಂದಾಯ ವಿಭಾಗದ ಸಹಾಯವಾಣಿ ಸಂಖ್ಯೆ 9480683695 ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.
'ವಾರ್ಡ್ ಒನ್' ಅಭಿಯಾನ ಮುಂದುವರಿಕೆ
ಬೆಂಗಳೂರು ನಗರದ ಸ್ವಚ್ಛತೆ, ಪಾದಚಾರಿ ಮಾರ್ಗಗಳ ಸುಧಾರಣೆ, ರಸ್ತೆ ಗುಂಡಿಗಳ ದುರಸ್ತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಗೆ ಆದ್ಯತೆ ನೀಡುವ ಉದ್ದೇಶದಿಂದ, ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ 'ವಾರ್ಡ್ ಒನ್' ಅಭಿಯಾನದಡಿ ವಿವಿಧ ಕಾರ್ಯಾಚರಣೆಗಳನ್ನು ಮುಂದುವರಿಸಲಾಗಿದೆ.
ವಿದ್ಯಾರಣ್ಯಪುರ, ಬ್ಯಾಟರಾಯನಪುರ, ಸರ್ವಜ್ಞನಗರ ಮತ್ತು ಪುಲಿಕೇಶಿನಗರ ವಿಭಾಗಗಳ ವ್ಯಾಪ್ತಿಯ ರಾಜೀವ್ ಗಾಂಧಿ ನಗರ, ಜಕ್ಕೂರು, ಹೆಣ್ಣೂರು ಹಾಗೂ ಪೆರಿಯಾರ್ ನಗರ ವಾರ್ಡ್‌ಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ರಸ್ತೆ ನಿರ್ವಹಣೆ, ಕಸ ಮತ್ತು ನಿರ್ಮಾಣ ತ್ಯಾಜ್ಯ ತೆರವು, ಪಾದಚಾರಿ ಮಾರ್ಗಗಳ ಸುಧಾರಣೆ, ಚರಂಡಿಗಳ ಹೂಳೆತ್ತುವಿಕೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಇಂದಿನ ಕಾಮಗಾರಿಯ ಒಟ್ಟಾರೆ ಪ್ರಗತಿ
- 16.1 ಕಿ.ಮೀ. ಉದ್ದದ ರಸ್ತೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
- 17 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.
- 48 ಕಸದ ಕಪ್ಪು ಚುಕ್ಕೆಗಳನ್ನು ತೆರವುಗೊಳಿಸಲಾಗಿದೆ.
- 42 ಟನ್ ಕಸವನ್ನು ತೆರವುಗೊಳಿಸಲಾಗಿದೆ.
- 69 ನಿರ್ಮಾಣ ತ್ಯಾಜ್ಯ ಸಂಗ್ರಹಣಾ ಸ್ಥಳಗಳನ್ನು ತೆರವುಗೊಳಿಸಲಾಗಿದೆ.
- 50 ಟನ್ ನಿರ್ಮಾಣ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
- 4.1 ಕಿ.ಮೀ. ಪಾದಚಾರಿ ಮಾರ್ಗಗಳನ್ನು ದುರಸ್ತಿಗೊಳಿಸಲಾಗಿದೆ.
- 10 ಪಾದಚಾರಿ ಮಾರ್ಗಗಳಲ್ಲಿನ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ.
- 1.31 ಕಿ.ಮೀ. ರಸ್ತೆ ಬದಿಯ ಚರಂಡಿಗಳ ಹೂಳೆತ್ತುವಿಕೆ ಮಾಡಲಾಗಿದೆ.
- 30 ಹೊಸ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, 21 ಬೀದಿ ದೀಪಗಳನ್ನು ದುರಸ್ತಿಗೊಳಿಸಲಾಗಿದೆ.
- 3 ಉದ್ಯಾನವನಗಳನ್ನು ಸ್ವಚ್ಛಗೊಳಿಸಲಾಗಿದೆ.
- 73 ಅನಧಿಕೃತ ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ.
- 14 ಮರದ ಕೊಂಬೆಗಳನ್ನು ಕತ್ತರಿಸಲಾಗಿದ್ದು, 3 ಟನ್ ಮರದ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.
- 4 ಸಾರ್ವಜನಿಕ ದೂರುಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ.
ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆ
BWSSB ವತಿಯಿಂದ 1 ನೀರಿನ ಸೋರಿಕೆ ಸಮಸ್ಯೆಯನ್ನು ಪರಿಹರಿಸಲಾಗಿದೆ. 7 ಚೇಂಬರ್‌ಗಳ ಮಟ್ಟವನ್ನು ಸರಿಪಡಿಸಲಾಗಿದ್ದು, ನೀರಿನ ವಿತರಣೆಗೆ ಸಂಬಂಧಿಸಿದ 3 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇನ್ನೂ ಅಭಿಯಾನದಡಿ ಕೈಗೊಂಡ ಕಾರ್ಯಾಚರಣೆಗಳಲ್ಲಿ ಒಟ್ಟು ₹69,000 ದಂಡ ವಿಧಿಸಲಾಗಿದೆ.
ನಾಗರಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ
'ವಾರ್ಡ್ ಒನ್' ಅಭಿಯಾನದ ಮೂಲಕ ವಾರ್ಡ್‌ಗಳಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಪರಿಹರಿಸುವ ಕಾರ್ಯ ಮುಂದುವರಿಯಲಿದೆ. ಸ್ವಚ್ಛತೆ, ಸುಗಮ ರಸ್ತೆ ಸಂಚಾರ, ಸುರಕ್ಷಿತ ಪಾದಚಾರಿ ಮಾರ್ಗಗಳು ಹಾಗೂ ಉತ್ತಮ ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯು ಸ್ವಚ್ಛ, ಸುಂದರ ಹಾಗೂ ನಾಗರಿಕ ಸ್ನೇಹಿ ನಗರ ನಿರ್ಮಾಣದ ನಿಟ್ಟಿನಲ್ಲಿ 'ವಾರ್ಡ್ ಒನ್' ಅಭಿಯಾನದಡಿ ವಿವಿಧ ಸ್ವಚ್ಛತಾ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದೆ.


Click it and Unblock the Notifications
